ಪಡಿತರ ಚೀಟಿ ನೀತಿ ಸರಳೀಕರಿಸಲು ಆಗ್ರಹ ಕೊಳೆಗೇರಿ ಜನರ ಪ್ರತಿಭಟನೆ

1000326111.jpg
Published on

ದಾವಣಗೆರೆ: ಸ್ಲಂ ಜನರ ಪಡಿತರ ಚೀಟಿ ರದ್ದತಿ ಕೈಬಿಡಬೇಕು. ಹೊಸ ರೇಷನ್ ಕಾರ್ಡ್ ನೀಡಲು ಮಾನದಂಡಗಳನ್ನು ಸರಳೀಕರಿಸಬೇಕೆಂದು ಆಗ್ರಹಿಸಿ ಕೊಳೆಗೇರಿ ಜನರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸ್ಲಂ ಜನಾಂದೋಲನ-ಕರ್ನಾಟಕ ಸಂಘಟನೆ ಹಾಗೂ ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಲ್ಲಿನ ಅಧಿಕಾರಿಗಳ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಇಲಖೆ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.
ಕಾಂಗ್ರೆಸ್ ಸರ್ಕಾರ ಆನ್‌ಲೈನ್ ಪೋರ್ಟಲನ್ನು ಸ್ಥಗಿತಗೊಳಿಸಿದ್ದರಿಂದ ನೈಜ ಬಡವರು  ಹೊಸ ಪಡಿತರ ಚೀಟಿ ಪಡೆಯಲು ಸಾಧ್ಯವಾಗಿಲ್ಲ. ಒಂದೂವರೆ ವರ್ಷದಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಸ್ಥಗಿತಗೊಳಿಸಲಾಗಿತ್ತು. ಜೂನ್‌ನಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು, ಸಾವಿರಾರು ಕುಟುಂಬಗಳು ಕಂಪ್ಯೂಟರ್ ಕೇಂದ್ರಗಳಲ್ಲಿ ಮಧ್ಯರಾತ್ರಿಯಿಂದಲೇ ಸರದಿಯಲ್ಲಿ ಕಾಯಬೇಕಿದೆ.
ಸರ್ವರ್ ಇತರೆ ಸಮಸ್ಯೆಯಿಂದ ಕೆಲವರು ಬರಿಗೈಲಿ ಮನೆಗೆ ತೆರಳುವಂತಾಗಿದೆ. 2023ರ ಮಾರ್ಚ್‌ನಿಂದ ಇದುವರೆಗೆ ರಾಜ್ಯ ಸರ್ಕಾರ 2.95 ಲಕ್ಷ ಹೊಸ ಪಡಿತರ ಚೀಟಿ ವಿತರಿಸದೆ ಉಳಿಸಿಕೊಂಡಿದೆ. ಹೊಸ ಚೀಟಿ ಪಡೆಯಲು ನೀಡಲಾದ ಕಡಿಮೆ ಸಮಯಾವಕಾಶದಿಂದ ಸಮಸ್ಯೆಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿಕೊಂಡರು.
ಸಬ್ಸಿಡಿ ದರದಲ್ಲಿ ಆಹಾರಧಾನ್ಯ ಪಡೆಯಲು ಪಡಿತರ ಚೀಟಿ ಕಡ್ಡಾಯ ದಾಖಲೆಯಾಗಿದೆ. ವಾಸ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪತ್ರ, ವಸತಿ ಯೋಜನೆ ಸೇರಿ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಇದು ಮುಖ್ಯ ಪುರಾವೆಯಾಗಿದೆ.
ರಾಜ್ಯದಲ್ಲಿ 3.26 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದಾಗಿ ಆಹಾರ ಇಲಾಖೆ ಹೇಳಿದ್ದು, ವಿನಾಕಾರಣ ಕೊಳಗೇರಿಗಳಲ್ಲಿ ವಾಸವಾಗಿರುವ ಬಡ ಹಾಗೂ ಮಧ್ಯಮ ವರ್ಗಗಳ ಕುಟುಂಬಗಳು ಉಪವಾಸದಲ್ಲಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಗ್ಯಾರಂಟಿ ಯೋಜನೆಗಳ ಲಾಭವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ. ಕೂಡಲೆ ಹೊಸ ರೇಷನ್ ಕಾರ್ಡ್ ಪಡೆಯುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು. ತಿದ್ದುಪಡಿ ಮತ್ತು ಸೇರ್ಪಡೆಯಾದ ಪಡಿತರ ಚೀಟಿಗಳ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶಬ್ಬೀರ್‌ಸಾಬ್, ಪ್ರಧಾನ ಕಾರ್ಯದರ್ಶಿ ಜಿ.ಎಚ್. ರೇಣುಕಾ ಯಲ್ಲಮ್ಮ, ಉಪಾಧ್ಯಕ್ಷರಾದ ಜಂಷಿದಾ ಬಾನು, ಮೊಹಮ್ಮದ್ ಯೂಸೂಫ್, ಕೊಳೆಗೇರಿ ಮುಖಂಡರಾದ ಬೀಬಿಜಾನ್, ರಜಿಯಾಬಿ, ರೇಖಾ, ರೇಷ್ಮಾ, ಆಸ್ಮಾ, ರಾಜೇಶ್ವರಿ, ಫಾತೀಮಾ, ಕೊಳೆಗೇರಿ ನಿವಾಸಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net