

ದಾವಣಗೆರೆ: ನವೋದಯ ಕಾಲಘಟ್ಟದ ಶ್ರೇಷ್ಠ ಕವಿಗಳಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಕೂಡ ಒಬ್ಬರು. ಆನಂದಕಂದ ಅಂಕಿತನಾಮದೊಂದಿಗೆ ಅನೇಕ ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಎಂದು ಬೆಳಗಾವಿಯ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಹೇಳಿದರು.
ನಗರದ ಎವಿಕೆ ಮಹಿಳಾ ಕಾಲೇಜಿನಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನಿಂದ ಶನಿವಾರ ಹಮ್ಮಿಕೊಂಡಿದ್ದ, ಆನಂದಕಂದರ ನಲ್ವಾಡುಗಳು ಮಂಥನ ಮತ್ತು ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಪ್ರೇಮ ಕವಿಯಾದ ಆನಂದಕಂದರು ಏಳನೆಯ ತರಗತಿ ಓದಿದ್ದಾರೆ. ಆದರೆ ಅವರ ಸಾಹಿತ್ಯವನ್ನು ಇಂದು ಸ್ನಾತಕೋತ್ತರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಹಳಗನ್ನಡ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಅನೇಕ ಕೃತಿಗಳನ್ನು ಸಂಪಾದನೆ ಮಾಡುವ ಕಾರ್ಯವೂ ಅವರಿಂದ ನಡೆದಿದೆ ಎಂದರು.
ಮೈಸೂರು ಮಲ್ಲಿಗೆ ಹಾಗೂ ಜಾನಪದ ಹಾಡುಗಳಷ್ಟೇ ಉತ್ತರ ಕರ್ನಾಟಕದಲ್ಲಿ ಇವರ ನಲ್ವಾಡುಗಳು ಜನಪ್ರಿಯತೆ ಪಡೆದಿವೆ. ಅವರು ಬಳಸಿದ ಭಾಷೆ ಮತ್ತು ಗೇಯತೆಗಳು ಕೂಡ ಉತ್ಕೃಷ್ಟತೆಯಿಂದ ಕೂಡಿವೆ. ನಲ್ವಾಡು ಸಂಕಲನದಲ್ಲಿ ವಿವಾಹ ಪೂರ್ವದ ಪ್ರೇಮವನ್ನು ಚಿತ್ರಿಸುವ ಕವಿತೆಗಳನ್ನು ಆನಂದಕಂದರು ಕಟ್ಟಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ವಿಶೇಷ ಉಪನ್ಯಾಸ ನೀಡಿದ ಟ್ರಸ್ಟ್‌ನ ಸದಸ್ಯ ಡಾ. ಸಿ.ಕೆ. ನಾವಲಗಿ, ಜನಪದರು ಇದ್ದದ್ದನ್ನು ಯಥಾರೀತಿಯಲ್ಲಿ ಹೇಳಿದರು. ಆ ಗುಣ ಆನಂದಕಂದರಲ್ಲಿ ಕಾಣುಬಹುದು. ಕಾಮದಿಂದ ಪ್ರಾರಂಭವಾಗಿ ಪರಿಪಕ್ವ ಪ್ರಣಯದವರೆಗೂ ನಲ್ವಾಡು ಸಾಗುತ್ತವೆ. ಆದರೆ, ಎಲ್ಲಿಯೂ ಅಶ್ಲೀಲವಿಲ್ಲ. ಆದರೂ ವಿಮರ್ಶಾ ವಲಯ ಬೆಟಗೇರಿ ಕೃಷ್ಣಶರ್ಮ ಅವರನ್ನು ಕಡೆಗಣಿಸಿರುವುದು ಖೇದಕರ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಕನ್ನಡ ವಿಭಾಗ ಮುಖ್ಯಸ್ಥ ಡಾ.ರಣಧೀರ, ಇಂದಿನ ಯುವಜನಾಂಗ ಹುಸಿ ಪ್ರೀತಿಯನ್ನೇ ಜೀವನದ ಅನುಭೂತಿ ಎಂದು ಭಾವಿಸಿದೆ. ಹಿರಿಯ ಸಾಹಿತಿಗಳು ಬರಹಗಳಲ್ಲಿ ಬದುಕನ್ನು ಸಾಕ್ಷೀಕರಿಸಿದ್ದಾರೆ ಎಂದರು.
ಪತ್ರಕರ್ತ ಬಾ.ಮ. ಬಸವರಾಜಯ್ಯ, ಪ್ರಾಚಾರ್ಯೆ ಪ್ರೊ. ಕಮಲಾ ಸೊಪ್ಪಿನ್ ಮಾತನಾಡಿದರು. ಆನಂದಕಂದ ಗೆಳೆಯರ ಬಳಗ (ಧಾರವಾಡ)ದವರು ನಲ್ವಾಡುಗಳನ್ನು ಪ್ರಸ್ತುತಪಡಿಸಿದರು.
ಐಕ್ಯುಎಸಿ ಸಂಯೋಜಕ ಪ್ರೊ.ಆರ್.ಆರ್. ಶಿವಕುಮಾರ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಆರ್.ಜಿ. ಕವಿತಾ, ಎಚ್.ಎಂ. ಲೋಹಿತ್, ಜಿ.ಎಸ್.ಅನಂತಕುಮಾರ್, ಕೆ.ಪಿ. ಕಾಳಾಚಾರ್ ಇದ್ದರು. ಎಸ್.ಜಿ. ಪಲ್ಲವಿ ಸ್ವಾಗತಿಸಿದರೆ, ಎಂ.ಪಿ. ರೇಖಾ- ಎಂ. ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು. ಸಿ.ವಿದ್ಯಾ ವಂದಿಸಿದರು.