ವೋಟ್ ಚೋರಿ ವಿರುದ್ಧ ಸಹಿಸಂಗ್ರಹ

1001222438.jpg
Published on

ದಾವಣಗೆರೆ: ಚುನಾವಣಾ ಆಯೋಗದ ದುರ್ಬಳಕೆ, ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ. ಈ ವಿಚಾರದಲ್ಲಿ ಪ್ರತಿ ಮತದಾರರನ್ನು ತಲುಪಬೇಕಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ ಆಡಳಿತ ಕಿತ್ತೊಗೆಯಬೇಕಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.

ಕೇಂದ್ರ ಸರ್ಕಾರದ ಮತಗಳ್ಳತನದ ಬಗ್ಗೆ ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇಲ್ಲಿನ ಜಯದೇವ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರಾೃನಂತರದಲ್ಲಿ ರಚನೆಯಾದ, ಸ್ವಾಯತ್ತ ಸಂಸ್ಥೆಯೂ ಆದ ಕೇಂದ್ರ ಚುನಾವಣಾ ಆಯೋಗವು ಕಾಂಗ್ರೆಸ್ ಸರ್ಕಾರದ ಅವಧಿಗಳಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿದೆ. ಆದರೆ ಇತ್ತೀಚೆಗೆ ಬಿಜೆಪಿ ಸರ್ಕಾರವು ಇದನ್ನು ಕೈಗೊಂಬೆಯಾಗಿ ಮಾಡಿಕೊಂಡಿದೆ. ತನ್ನ ಕಪಿಮುಷ್ಠಿಯಲ್ಲಿ ಇರಿಸಿದೆ ಎಂದು ದೂರಿದರು.

ಮಹದೇವಪುರ ವಿಧಾನಸಭಾ ಚುನಾವಣೆಯಲ್ಲಿ 1 ಲಕ್ಷ ಅಕ್ರಮ ಮತಪತ್ರಗಳನ್ನು ರಾಹುಲ್‌ಗಾಂಧಿ ಪತ್ತೆ ಮಾಡಿದರು.ಅಲ್ಲಿನ ಬಿಜೆಪಿ ಮುಖಂಡನ ವ್ಯಾಪ್ತಿಯ 10-10 ಅಳತೆಯ ಕೊಠಡಿಯೊಂದರಲ್ಲಿ 84ಕ್ಕೂ ಹೆಚ್ಚು ಮತದಾರರಿದ್ದರು. ಬೇಕಾದವರನ್ನು ಮತದಾರರ ಪಟ್ಟಿ ಸೇರಿಸುವ ಪ್ರಯತ್ನ ನಡೆಯಿತು. ಕಾಂಗ್ರೆಸ್ ಪರವಾಗಿದ್ದ ಅಹಿಂದ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಯಿತು. ಕೆಲವರನ್ನು ದೂರದ ಮತಗಟ್ಟೆಗೆ ವರ್ಗಾವಣೆ ಮಾಡಲಾಯಿತು ಎಂದು ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್ 6 ತಿಂಗಳ ಕಾಲ ಒಂದು ಕ್ಷೇತ್ರದ ಮತಗಳ್ಳತನದ ಬಗ್ಗೆ ಅಧ್ಯಯನ ಮಾಡಿತು. ಪಕ್ಷ ಕೇಳಿದಂತೆ, ಡಿಜಿಟಲ್ ಮತದಾರರ ಪಟ್ಟಿಯನ್ನು ಚುನವಣಾ ಆಯೋಗ ನೀಡಲಿಲ್ಲ. 17ಸಿ ಫಾರ್ಮ್ ಅಡಿಯಲ್ಲಿ ಮತದಾನ ಪ್ರಕ್ರಿಯೆಯ ವಿಡಿಯೋ ಫುಟೇಜ್ ಸಹ ನೀಡಲಿಲ್ಲ. ಚುನಾವಣೆ ನಡೆದ 45 ದಿನದಲ್ಲಿ ಅದನ್ನು ಅಳಿಸಿ ಹಾಕಿದ್ದು ಮತಗಳ್ಳತನಕ್ಕೆ ಸಾಕ್ಷಿಯಲ್ಲವೆ? ಎಂದು ಪ್ರಶ್ನಿಸಿದರು.

ಬಿಹಾರ ಚುನಾವಣೆ ವೇಳೆ ಮತದಾರರನ್ನು ಪಟ್ಟಿಯಿಂದ ಅಳಿಸಿ ಹಾಕಿದ್ದರ ಬಗ್ಗೆ ಹೋರಾಟ ಮಾಡಿದ ಬಳಿಕ ಸೇರ್ಪಡೆ ಕಾರ್ಯ ನಡೆಯಿತು. ಹರಿಯಾಣ, ಮಹಾರಾಷ್ಟ್ರದಲ್ಲೂ ಇದೇ ರೀತಿಯಲ್ಲಿ ಬಿಜೆಪಿ ಗೆಲುವು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಅನುಕೂಲಕ್ಕೆ ತಕ್ಕಂತೆ ಚುನಾವಣೆ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಚುನಾವಣಾ ವ್ಯವಸ್ಥೆ ಹಾಳು ಮಾಡಿದರು.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ ವೋಟ್ ಚೋರಿ ವಿರುದ್ಧ ಮೆರವಣಿಗೆ, ಮಿಸಡ್ ಕಾಲ್ ನಂತರ ಇದೀಗ ಮೂರನೇ ಅಭಿಯಾನವಾಗಿ ಸಹಿ ಸಂಗ್ರಹ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 2 ಲಕ್ಷ ಮತದಾರರ ಸಹಿ ಸಂಗ್ರಹಿಸಿ ವರಿಷ್ಠರ ಹೋರಾಟಕ್ಕೆ ಬಲ ತುಂಬಬೇಕಿದೆ ಎಂದರು.

ಮತದಾರರ ಯಾದಿ ಬದಲಾವಣೆ ಮಾಡುವ, ಕೈಬಿಡುವ ಅನೈತಿಕ ಚುನಾವಣಾ ಪ್ರಕ್ರಿಯೆ ನಡೆದವು. ರಾಹುಲ್‌ಗಾಂಧಿ ಅವರು ಇದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹಾರಿಕೆ ಉತ್ತರ ನೀಡುತ್ತ ಬಂದಿದೆ. ಸೂಕ್ತ ದಾಖಲೆಯನ್ನೂ ನೀಡುತ್ತಿಲ್ಲ. ಮೋದಿ ಅವರ ಸರ್ವಾಧಿಕಾರಿ ಧೋರಣೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.

ಜಿಎಸ್‌ಟಿ, ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ. ಕೇಂದ್ರಕ್ಕೆ ನೀಡಿದ 1 ರೂ. ಪೈಕಿ ಕೇವಲ 15 ಪೈಸೆ ಮಾತ್ರ ಮರಳುತ್ತಿದೆ. ಈ ವಿಚಾರವಾಗಿ ಬಿಜೆಪಿ ಸಂಸದರು ಮೌನ ಮುರಿಯುತ್ತಿಲ್ಲ. ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಯುಕೆ ರಾಷ್ಟ್ರದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಯಶೋಗಾಥೆ ಪ್ರತಿ ಮನೆಗೂ ತಲುಪಿದೆ ಎಂದು ತಿಳಿಸಿದರು.

ಎಂಎಲ್ಸಿ ಶ್ರೀನಿವಾಸ್ ಮಾತನಾಡಿ ಕೇಂದ್ರ ಸರ್ಕಾರ ಮತಗಳ್ಳತನದ ವಿಚಾರ ವಿಷಯಾಂತರ ಮಾಡಲು ಇದೀಗ ಜಿಎಸ್‌ಟಿ ಇಳಿಸುವ ಕ್ರಮ ಕೈಗೊಂಡಿದೆ. ಈ ಹಿಂದೆ ಬೇಕಾಬಿಟ್ಟಿ ಜಿಎಸ್‌ಟಿ ಹೆಚ್ಚಿಸಿದ್ದ ಕೇಂದ್ರ ಸರ್ಕಾರ ಇದೀಗ ಇಳಿಸಿದ ನೆಪದಲ್ಲಿ ಜನರಿಗೆ ಮಂಕುಬೂದಿ ಎರಚಲು ಮುಂದಾಗಿದೆ ಎಂದು ಹೇಳಿದರು.

ದೇಶದ ಒಳಿತಿಗಾಗಿ ಸೋನಿಯಾ ಗಾಂಧಿ ಅಧಿಕಾರ ತ್ಯಾಗ ಮಾಡಿದರು. ಈ ಕೆಲಸವನ್ನು ನರೇಂದ್ರ ಮೋಡಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ ಅವರು, ಬಿಜೆಪಿಯ ಮತಗಳ್ಳತನ ಹಾಗೂ ಸುಳ್ಳಿನ ಕಂತೆಗಳ ಬಗ್ಗೆ ಯುವಜನರು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.

ಶಿಗ್ಗಾಂವ್‌ನ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ಮಾತನಾಡಿ ಜನಪರ ಯೋಜನೆಗಳನ್ನು ತರಲಾಗದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಗ್ಗೆ ಶಂಕೆ ಎಲ್ಲರಲ್ಲೂ ಇತ್ತು. ಈ ಸರ್ಕಾರ ಮತಗಳ್ಳತನ ನಡೆಸಿದ್ದು ಇಂದು ಬಯಲಾಗಿದೆ. ಇದು ಸಂವಿಧಾನಕ್ಕೆ ಕೊಳ್ಳಿ ಇಡುವ ಪ್ರಕರಣವಾಗಿದೆ ಎಂದು ಖಂಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಬಿ.ಮಂಜಪ್ಪ, ಮಾಜಿ ಶಾಸಕ ಎಸ್. ರಾಮಪ್ಪ, ಮರಿಯೋಜಿರಾವ್, ಮುಖಂಡರಾದ ಡಿ.ಬಸವರಾಜ್, ಕೆ.ಜಿ. ಶಿವಕುಮಾರ್, ದಿನೇಶ್ ಕೆ ಶೆಟ್ಟಿ, ಅಯೂಬ್ ಪೈಲ್ವಾನ್, ಎ. ನಾಗರಾಜ್, ಎಸ್. ಮಲ್ಲಿಕಾರ್ಜುನ್, ಶಾಮನೂರು ಬಸವರಾಜ್, ಡೋಲಿ ಚಂದ್ರು, ವರುಣ್, ಮೈನುದ್ದೀನ್, ಅನಿತಾಬಾಯಿ ಮಾಲತೇಶ್, ಮಂಗಳಮ್ಮ, ಮಂಜುಳಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net