

ದಾವಣಗೆರೆ: ಆರೋಗ್ಯ ಕ್ಷೇತ್ರದ ಖಾಸಗೀಕರಣ ಕೈಬಿಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಮಿತಿಯಿಂದ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಫೆ. 17ರಂದು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯ ಪ್ರಚಾರಾಂದೋಲನದ ಭಾಗವಾಗಿ ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಹೊರಗುತ್ತಿಗೆ ಕಾರ್ಮಿಕರಿಂದ ಸಹಿ ಸಂಗ್ರಹಿಸಲಾಯಿತು. ಆರೋಗ್ಯ ಕ್ಷೇತ್ರದ ಸಮಸ್ಯೆಗಳ ವಿರುದ್ಧ ಜನರು ಈ ಮೂಲಕ ತಮ್ಮ ಅಸಹನೆ ವ್ಯಕ್ತಪಡಿಸಿದರು.
ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ದುರಸ್ತಿಗೊಳಿಸಬೇಕು. ದಾವಣಗೆರೆಯಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆ ತೆರೆಯಬೇಕು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪಿಎಚ್‌ಸಿಗಳ ಗುಣಮಟ್ಟ ಉತ್ತಮಪಡಿಸಬೇಕು. ಆಸ್ಪತ್ರೆ ಚೀಟಿ, ಹಣ ಪಾವತಿ, ಔಷಧ ಕೌಂಟರ್‌ಗಳ ಸಂಖ್ಯೆ ಹಾಗೂ ಹಾಸಿಗೆ, ವೈದ್ಯರ ಸಂಖ್ಯೆ ಹೆಚ್ಚಿಸಬೇಕು.
ಸರ್ಕಾರಿ ಆಸ್ಪತ್ರೆಗಳಲ್ಲಿ ಅವಶ್ಯಕ ಸುಸಜ್ಜಿತ ಕಟ್ಟಡ, ಕೊಠಡಿಗಳು, ಶೌಚಗೃಹ, ಶುದ್ಧ ಕುಡಿವ ನೀರು, ಮೂಲ ಆಧುನಿಕ ಯಂತ್ರೋಪಕರಣಗಳನ್ನ್ನು ಒದಗಿಸಬೇಕು. ನುರಿತ ವೈದ್ಯರು, ದಾದಿಯರು, ಮತ್ತಿತರ ವೈದ್ಯಕೀಯ ಸಿಬ್ಬಂದಿ, ಡಿ ದರ್ಜೆ ನೌಕರರನ್ನು ಕಾಯಂ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು.
ಆಸ್ಪತ್ರೆಯ ಔಷಧಾಲಯಗಳಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಸಬೇಕು. ಬಾಣಂತಿ ಮತ್ತು ನವಜಾತ ಶಿಶುವಿನ ಸಾವನ್ನು ತಡೆಗಟ್ಟಬೇಕು. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರಿ ಬಜೆಟ್ ನಲ್ಲಿ ಅನುದಾನ ಹೆಚ್ಚಿಸಬೇಕು ಎಂದು ಆಗ್ರಹಿಸಲಾಯಿತು.
ಅಭಿಯಾನದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಸುನೀತ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಮಂಜುನಾಥ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಪರಶುರಾಮ್, ಭಾರತಿ, ಅನಿಲ್, ರಾಜು ಪಾಲ್ಗೊಂಡಿದ್ದರು.
---