

ದಾವಣಗೆರೆ: ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರು ಕೊಂಡಿ ಮಂಚಣ್ಣನಂತೆ ಕೆಲಸ ಮಾಡುವುದನ್ನು ಕೈಬಿಡಲಿ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಟಾಂಗ್ ನೀಡಿದ್ದಾರೆ. ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು.
ದಾವಣಗೆರೆಯಲ್ಲಿ ಬಿಜೆಪಿ ಸೋಲಿಗೆ ರಾಜ್ಯ ಹಾಗೂ ಜಿಲ್ಲೆಯ ಕೆಲವು ನಾಯಕರು ಕಾರಣ ಎಂದು ಹೇಳಿದ್ದೆ. ಅದನ್ನು ಈಗಲೂ ಒಪ್ಪಿಕೊಳ್ಳುತ್ತೇನೆ. ಯಡಿಯೂರಪ್ಪನವರ ಹೆಸರನ್ನು ನಾನು ಪ್ರಸ್ತಾಪಿಸಿಲ್ಲ. ನನಗೆ ಪಾಲಕರು ಸಂಸ್ಕಾರ ಕಲಿಸಿದ್ದಾರೆ. ಯಾರನ್ನೂ ನಾನು ನಿಂದಿಸಿಲ್ಲ. ನನ್ನನ್ನು ಟೀಕಿಸುವ ಬದಲು ನಿಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಿ ಎಂದು ಹೇಳಿದರು.
ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರನ ಕಚೇರಿ ಮೇಲೆ ದಾಳಿ ನಡೆದಾಗ ಇದರಲ್ಲಿ ನನ್ನ ಪಾತ್ರ ಇದೆ ಎಂದು ಹಬ್ಬಿಸಲಾಯಿತು. ಭದ್ರೆ ಆಣೆಗೂ ನನಗಿದು ಗೊತ್ತೇ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಯಲ್ಲಿ ಯಾವ ರೀತಿ ಗೆದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಚುನಾವಣೆ ವೇಳೆ ಯಾರ‌್ಯಾರು ಯಾವ ರೀತಿ ಕೆಲಸ ಮಾಡಿದರು ಎಂಬುದು ಪಕ್ಷದ ರಾಷ್ಟ್ರನಾಯಕರಿಗೂ ಗೊತ್ತಿದೆ. ಅವರು ಮನಸ್ಸಾಕ್ಷಿ ಕೇಳಿಕೊಳ್ಳಲಿ ಎಂದು ವಿರೋಧಿ ತಂಡಕ್ಕೆ ಉತ್ತರಿಸಿದರು.
ಪ್ರತಿ ನಿಮಿಷಕ್ಕೂ ನಾನು ಅಳುತ್ತೇನೆ ಎಂದು ಶಿವಶಂಕರಪ್ಪನವರು ಹೇಳಿದ್ದಾರೆ. ಪತ್ನಿಯ ಸೋಲಿನಿಂದ ನಾನು ದೃತಿಗೆಟ್ಟಿಲ್ಲ. ನಾನೆಂದೂ ಕಣ್ಣೀರು ಹಾಕಿಲ್ಲ. ಸೋತಾಗಲೂ ಅತ್ತಿಲ್ಲ. ನಾನು ಮತ್ತು ನನ್ನ ಪತ್ನಿ ಜನಸೇವೆ ಮಾಡಲೆಂದೇ ಬಂದವರು. ಜನರ ಕಷ್ಟ-ಸುಖದಲ್ಲಿ ನಾವು ಭಾಗಿಯಾಗುತ್ತೇವೆ ಎಂದು ಹೇಳಿದರು.
ಎಸ್ಸೆಸ್ ಅವರಿಗೆ 93 ವಯಸ್ಸು. ನನಗೂ 73 ವಯಸ್ಸಾಗಿದೆ. ನನಗೂ ಗೌರವವಿದೆ. ಭೀಮಸಮುದ್ರದಿಂದ ಏನು ತಂದೆ ಎಂದು ಕೇಳುವ ಅವರು ಶಾಮನೂರಿನಿಂದ ಏನನ್ನು ತಂದಿದ್ದರು. ಶಿವಶಂಕರಪ್ಪ ಅವರು ಹಗುರವಾಗಿ ಮಾತನಾಡುವುದನ್ನು ಕೈಬಿಡಬೇಕು. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.