

ದಾವಣಗೆರೆ: ವಚನಗಳ ಮೂಲಕ ಜಗತ್ತಿಗೆ ಅಪಾರ ಕೊಡುಗೆ ನೀಡಿದವರು ಶಿವಶರಣ ಶಿವಯೋಗಿ ಸಿದ್ದರಾಮೇಶ್ವರರು. ಅವರೊಬ್ಬ ಅನುಭವ ಮಂಟಪದ ದ್ರುವತಾರೆ ಎಂದು ಮೇಯರ್ ಕೆ. ಚಮನ್‌ಸಾಬ್ ಬಣ್ಣಿಸಿದರು.
ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸಿದ ಶಿವಯೋಗಿ ಸಿದ್ದರಾಮೇಶ್ವರರು ಕಾಯಕ ನಿಷ್ಠರಾಗಿದ್ದರು ಎಂದು ಸ್ಮರಿಸಿದ ಅವರು, ಜಾತೀಯತೆ, ಆಚಾರ-ವಿಚಾರ ಎಂಬ ಮನೋಭಾವ ಬಿಟ್ಟು ನಾವೆಲ್ಲರೂ ಮನುಷ್ಯರು, ಎಲ್ಲರೂ ಸಮಾನರು ಎಂಬ ಸಂದೇಶವನ್ನು ಪಾಲಿಸಬೇಕೆಂದು ಹೇಳಿದರು.
ಜಿಲ್ಲಾ ಬೋವಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ಜಯಣ್ಣ ಮಾತನಾಡಿ ನಮ್ಮ ಸಮಾಜಕ್ಕೆ ಸರ್ಕಾರದಿಂದ ಹೆಚ್ಚಿನ ಸವಲತ್ತುಗಳು ಸಿಗಬೇಕಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಪಿ. ಎನ್.ಲೋಕೇಶ್ ಮಾತನಾಡಿ ಜಯಂತ್ಯುತ್ಸವ ಆಚರಣೆ ಮೂಲಕ ಸಮುದಾಯದ ಜನ ಒಂದೇ ವೇದಿಕೆಯಲ್ಲಿ ಸೇರಬೇಕು. ಸಮಾನತೆ, ಸಹೋದರತ್ವ ಬೆಳೆಯಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮಾಜ ಸಂಘಟಿತವಾಗಬೇಕು ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಚಿತ್ರದುರ್ಗ ಕಲಾ ಕಾಲೇಜಿನ ಉಪನ್ಯಾಸಕಿ ಡಾ. ಲತಾ, ಲೋಕೋಪಯೋಗಿ, ಜನಹಿತ ಕಾರ್ಯಗಳಿಂದ ಶರಣ ಸಿದ್ದರಾಮರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಯಾವ ವ್ಯಕ್ತಿ ಜನಸಮುದಾಯದಲ್ಲಿ ಉಳಿಯುತ್ತಾರೆ. ಆ ವ್ಯಕ್ತಿಯ ನಡೆ-ನುಡಿ ಸತ್ಯವಾಗಿರುತ್ತವೆ ಎಂದು ಅಭಿಪ್ರಾಯ ಪಟ್ಟರು.
ಶಿವಯೋಗಿ ಸಿದ್ಧರಾಮರು ಕಾಯಕದ ಜತೆಗೆ ಹಲವಾರು ವಚನಗಳನ್ನು ರಚನೆ ಮಾಡಿದ್ದಾರೆ. ಕೆರೆ-ಕಟ್ಟೆ, ಬಾವಿ, ರಸ್ತೆ ನಿರ್ಮಾಣ ಸೇರಿದಂತೆ ಸಿದ್ಧರಾಮರು ಹೇಳಿದ ಕಾಯಕವನ್ನು ಇಂದಿಗೂ ಸಮಾಜ ಮುಂದುವರೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಯೋಜನಾಧಿಕಾರಿ ಆನಂದ್, ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಬೋವಿ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎಚ್.ಮಂಜುನಾಥ್, ಬಿ.ಟಿ.ಸಿದ್ದಪ್ಪ, ಬಸವರಾಜ್ , ವೆಂಕಟೇಶಯ್ಯ ಇದ್ದರು.
ಸುಭಾಷ್ ಮತ್ತು ತಂಡದವರು ಗೀತಗಾಯನ ಪ್ರಸ್ತುತಪಡಿಸಿದರು. ಸಂಕಿರಣ ನೃತ್ಯ ವಿದ್ಯಾಲಯದ ವಿದ್ಯಾರ್ಥಿಗಳು ನೃತ್ಯದೊಂದಿಗೆ ಂಜಿಸಿದರು. ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿದರು.
---