ಎರಡು ವರ್ಷದೊಳಗೆ ಶಂಕರಾಚಾರ್ಯರ ದಾಖಲೆ ಸಂಗ್ರಹ

1001282595.jpg
Published on

ದಾವಣಗೆರೆ: ಆದಿಗುರು ಶಂಕರಾಚಾರ್ಯರ ಸಮಾಜಸೇವೆ ಕುರಿತಾದ ದಾಖಲೆ ಸಂಗ್ರಹವನ್ನು ಇನ್ನೆರಡು ವರ್ಷದೊಳಗೆ ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದಾಗಿ ಯಡತೊರೆ ಯೋಗಾನಂದೇಶ್ವರ ಮಠದ ಪೀಠಾಧೀಶ ಶ್ರೀ ಶಂಕರ ಭಾರತಿ ಸ್ವಾಮೀಜಿ ಹೇಳಿದರು.

ಪ್ರವಾಸದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ದಾವಣಗೆರೆಗೆ ಭೇಟಿಯಿತ್ತ ಶ್ರೀಗಳು, ನಗರದ ನಿಜಲಿಂಗಪ್ಪ ಬಡಾವಣೆಯ ಶಾರದಾಂಬಾ ದೇವಾಲಯದಲ್ಲಿ ಶ್ರೀ ಶಂಕರ ಸೇವಾ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಯಡತೊರೆಯಲ್ಲಿ ದೇವಸ್ಥಾನ ನಿರ್ಮಾಣ ವೇಳೆ 3 ಪಾತ್ರೆಗಳು ದೊರೆತಿದ್ದು ಬೇರೆ ಬೇರೆ ಪುರಾತತ್ವ ಶಾಸ್ತ್ರಜ್ಞರು ಇದು ಏಳನೇ ಶತಮಾನದಲ್ಲಿ ಬಳಸಿದ್ದು, ಸನ್ಯಾಸಿ ಬಳಸಿದ್ದ ವಸ್ತುಗಳು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಉತ್ಖನನದಿಂದ ಶಂಕರಾಚಾರ್ಯರ ದಾಖಲೆ ಸಿಗುವುದಾದರೆ ಹರಿಹರ, ಹಂಪಿ, ಗುಲ್ಬರ್ಗಾದ ಸನದಿ ಮತ್ತಿತರೆಡೆ ಏಕೆ ಸಿಗುವುದಿಲ್ಲ? ಎಂದು ಪ್ರಶ್ನಿಸಿದರು.

ಪ್ರತಿಯೊಬ್ಬರೂ ಸಹ ಶಂಕರಾಚಾರ್ಯರ ಕುರಿತಾದ ದಾಖಲೆ ಸಂಗ್ರಹಕ್ಕೆ ಪ್ರಯತ್ನಿಸಬೇಕು. ಹೋದಲ್ಲೆಲ್ಲ ಈ ಬಗ್ಗೆ ತಿಳಿಸಿ ಎಲ್ಲ ಸಹಕಾರ ಪಡೆದು ದೇಶಕ್ಕೆ ಶಂಕರಾಚಾರ್ಯರ ಬೆಳಕನ್ನು ಚೆಲ್ಲಬೇಕು. ಅವರ ಸಾಮಾಜಿಕ ಕೆಲಸಗಳನ್ನು ನಾವು ಸಮಾಜಕ್ಕೆ ಆಧಾರಸಹಿತವಾಗಿ ನೀಡಬೇಕಿದೆ ಎಂದರು.

ಕೆ.ಆರ್. ಪೇಟೆಯ ಕಿಕ್ಕೇರಿಯ ಬ್ರಹ್ಮೇಶ್ವರ ದೇವಸ್ಥಾನಕ್ಕೆ ಶಂಕಾಚಾರ್ಯರು ಬಂದಿದ್ದರು ಎಂದು ಹೇಳಲಾಗುತ್ತದೆ. ದೇಗುಲ ಬಳಿಯ ಶಾಸನದಲ್ಲಿ ಚಿತ್ರದ ಪ್ರಕಾರ ಶಂಕರರು ಬರುವ ವಿಚಾರ ತಿಳಿದು ಮಾಂತ್ರಿಕನೊಬ್ಬ ಅಲ್ಲಿಂದ ಓಡಿ ಹೋದ ಮಾಹಿತಿ ಇದೆ. ಇದಕ್ಕೆ ಪೂರಕವಾಗಿ ಅಲ್ಲಿನ ಗೋಫರದ ಮೇಲೆ ಮಡಕೆ, ಎಲುಬುಗಳು ದೊರೆತಿವೆ.

ಹೀಗೆ ಸಮಾಜಕ್ಕೆ ಕಂಟಕಪ್ರಾಯವಾದ ಗುಂಪುಗಳನ್ನು ದೇಶವ್ಯಾಪಿ ಎದುರು ಹಾಕಿಕೊಳ್ಳುವ ಮೂಲಕ ಶಂಕರಾಚಾರ್ಯರು ಸನಾತನಧರ್ಮ ಕಾಪಾಡಿದ ರೀತಿ ಕಣ್ಣಿಗೆ ಕಟ್ಟಿದಂತಿದೆ. ಅವರು ನೀಡಿದ ಶಾಂತಜ್ಯೋತಿ ಪ್ರಕಾಶ ಸ್ತ್ರೋತ್ರ ಕರ್ನಾಟಕಕ್ಕೆ ಮಾತ್ರವಲ್ಲ, ಇತರೆ ರಾಜ್ಯಗಳಿಗೆ ಬೇಕಾಗಿದೆ ಎಂದರು.

ಅನೇಕ ಕಡೆಗಳಿಗೆ ಶಂಕರಾಚಾರ್ಯರು ತೆರಳಿದ ಮಾಹಿತಿ ಇದೆ, ಆದರೆ ಯಾರನ್ನೂ ಕೇಳಿದರೂ ಅದರ ಬಗ್ಗೆ ಆಧಾರಗಳಿಲ್ಲ. ಕೆಲವೆಡೆ ತಾಳೆಪತ್ರಗಳಿವೆ, ಸಮಾಜ ಅವನ್ನು ನೋಡಲಾಗದ, ಓದಲಾಗದ ಸ್ಥಿತಿಯಲ್ಲಿದೆ. ಕೇರಳ, ತಮಿಳುನಾಡು ರಾಜ್ಯದಲ್ಲೂ ಕೇಳಿದರೂ ಇವರ ಬಗ್ಗೆ ದಾಖಲೆಗಳಿಲ್ಲ ಎನ್ನುತ್ತಾರೆ ಎಂದು ವಿಷಾದಿಸಿದರು.

ಶಂಕರಾಚಾರ್ಯರು ಜಾತಿ ಪದ್ಧತಿ ಹುಟ್ಟುಹಾಕಿ ದೇಶದ ಸಮಸ್ಯೆಗೆ ಕಾರಣರಾದರು ಎಂಬ ಬೇರೊಂದು ಅಭಿಪ್ರಾಯ ಮೂಡಿಸಲಾಗುತ್ತಿದೆ. ತಮಿಳುನಾಡಿನ ದೇಗುಲವೊಂದರ ಐದನೇ ಕಂಬದಲ್ಲಿ ಪಂಚಾಯತನ ಪದ್ಧತಿ ಉಲ್ಲೇಖವಿದೆ. ಶಂಕರಾಚಾರ್ಯರೇ ಇದರ ಜನಕರು.

ರಾಜರಾಜೇಂದ್ರ ಚೋಳನು ಶಂಕರಾಚಾರ್ಯರ ವ್ಯಾಖ್ಯಾನ ಕೇಳಿ ಗ್ರಾಮವೊಂದನ್ನೇ ದಾನ ಮಾಡಿದ ನಿದರ್ಶನವಿದೆ. ಅವರ ಭಾಷಣಕ್ಕಿದ್ದ ಮಹತ್ವಕ್ಕೆ ಇದು ಸಾಕ್ಷಿ. ಗೋಕರ್ಣದಲ್ಲಿ ಅವರ ಆರು ಪಾದುಕೆಗಳಿರುವ ಮಾಹಿತಿ ಇದೆ. ತಿರುವನಂತಪುರದ ಗ್ರಂಥಾಲಯದಲ್ಲಿ 1 ಕೋಟಿಯಷ್ಟು ತಾಳಪತ್ರಗಳಿವೆ. ಅದರ ಬಗ್ಗೆ ಅಧ್ಯಯನ ಆಗಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಶಂಕರ ಸೇವಾ ಸಂಘದ ಪ್ರಮುಖರಾದ ಬಿ.ಟಿ. ಅಚ್ಯುತ್, ಮೋತಿ ಸುಬ್ರಹ್ಮಣ್ಯ, ಗಿರೀಶ್ ನಾಡಿಗ್, ವಿನಾಯಕ ಜೋಷಿ, ಬಾಲಕೃಷ್ಣ ವೈದ್ಯ, ಎಂ.ಆರ್. ಸತ್ಯನಾರಾಯಣರಾವ್, ಸೋಮನಾಥ ಕುಲಕರ್ಣಿ, ನಳಿನಿ ಅಚ್ಯುತ್ ಇತರರಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net