

ದಾವಣಗೆರೆ: ಹೆಗಲಿಗೆ ಚೀಲ-ಒಂದು ಕೈಯಲ್ಲಿ ಹಿಡಿದ ಕುರ್‌ಕುರೆ ತಿನಿಸು. ಪಾಲಕರ ಕೈಹಿಡಿದು ಪುಟ್ಟ ಹೆಜ್ಜೆ ಹಾಕಿದ ಪುಟಾಣಿಗಳು. ಅಡುಗೆ ಕೋಣೆಗಳಲ್ಲಿ ಘಮಘಮಿಸಿದ ಬಿಸಿಯೂಟ. ಧೂಳು ಕೊಡವಿ ನಿಂತ ಕೊಠಡಿ-ಡೆಸ್ಕುಗಳು, ರಂಗೋಲಿ- ತಳಿರು ತೋರಣದೊಂದಿಗೆ ಸಿಂಗರಿಸಿದ್ದ ಶಾಲಾಂಗಳ..
ಶುಕ್ರವಾರ ಜಿಲ್ಲೆಯಲ್ಲಿ ಆರಂಭವಾದ ಬಹುತೇಕ ಶಾಲೆಗಳಲ್ಲಿ ಕಂಡುಬಂದ ಸನ್ನಿವೇಶವಿದು. ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಗುಲಾಬಿ ಹೂವು ನೀಡಿ ಬರಮಾಡಿಕೊಳ್ಳಲಾಯಿತು. ಕೆಲವು ಖಾಸಗಿ ಶಾಲೆಗಳಲ್ಲೂ ಸ್ವಾಗತಕ್ಕೆ ಆಕರ್ಷಣೆ ಇತ್ತು.
ಶಾಲೆಗೆ ಸೇರುವಾಸಕ್ತರು ತರಗತಿವಾರು ಅರ್ಜಿ ಪಡೆದು, ಮಾಹಿತಿ ಪಡೆದು ಮನೆಗಳತ್ತ ಸಾಗಿದರು. ಶಾಲಾ ಕಚೇರಿಯಲ್ಲಿ ಹಳೆಯ ವಿದ್ಯಾರ್ಥಿಗಳು ಪಾಲಕರೊಂದಿಗೆ ಬಂದು ಶುಲ್ಕ ಭರಿಸಿದರು. ಕೆಲವು ಖಾಸಗಿ ಶಾಲೆಗಳಲ್ಲಿ ಚಿಣ್ಣರು ಆಟೋಟದಲ್ಲಿ ಮುಳುಗಿದ್ದರು. ಕೆಲವೆಡೆ 15 ದಿನದ ಸೇತುಬಂಧ ಶಿಕ್ಷಣಕ್ಕೆ ಚಾಲನೆ ನೀಡಲಾಯಿತು.
ಜಿಲ್ಲೆಯಲ್ಲಿ ಒಟ್ಟು 1998 ಶಾಲೆಗಳಿವೆ. ಗುರುವಾರವಷ್ಟೇ ಕೆಲವು ಶಾಲೆಗಳು ಆರಂಭೋತ್ಸವ ನಡೆಸಿದ್ದರೆ, ಇಲಾಖೆ ಸುತ್ತೋಲೆಯಂತೆ ಶುಕ್ರವಾರ ಬಹುತೇಕ ಕಡೆ ಶಾಲೆಗಳ ಘಂಟೆ ಮೊಳಗಿದವು. ಮೊದಲ ದಿನವೇ ಶ್ಯಾವಿಗೆ ಖೀರು, ಕೇಸರಿಬಾತ್, ಗೋಧಿ ಪಾಯಸ, ಹೆಸರುಬೇಳೆ ಪಾಯಸ ಸಹಿತ ಪಲಾವ್, ಅನ್ನ-ಸಾಂಬಾರು, ಮೊಟ್ಟೆ ಮಕ್ಕಳ ಹೊಟ್ಟೆ ತಣಿಸಿದವು.
ಮಳೆರಾಯ ಬಿಡುವು ನೀಡಿದ್ದರಿಂದ ಶಾಲೆಗೆ ಬರಲು ಮಕ್ಕಳಿಗೆ ಸಮಸ್ಯೆ ಆಗಲಿಲ್ಲ. ಕರೊನಾದ ನಾಲ್ಕನೇ ಅಲೆ ಜಿಲ್ಲೆಗೆ ಪ್ರವೇಶಿಸಿಲ್ಲ. ಹೀಗಾಗಿ ಮಕ್ಕಳು, ಪಾಲಕರು ನಿರಾತಂಕವಾಗಿ ಶಾಲೆಯತ್ತ ಧಾವಿಸಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೀಡಲಾಯಿತು.
ನಿಟುವಳ್ಳಿಯ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿಣ್ಣರ ಕೈಯಿ ಹಿಡಿದು ಕಪ್ಪು ಹಲಗೆ ಮೇಲೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಡಿಡಿಪಿಐ ಜಿ. ಕೊಟ್ರೇಶ್ ಶಾಲಾ ಆರಂಭಕ್ಕೆ ಹಸಿರುನಿಶಾನೆ ತೋರಿದರು. ಶಾರದಾಮಾತೆ ಫೋಟೋಗೆ ಪುಷ್ಪಾರ್ಚನೆ ಮಾಡಿದರು.
ಶಾಲೆಯು ಗುಣಾತ್ಮಕ ಶಿಕ್ಷಣ ನೀಡುವಂತೆ ಅವರು ಹಾರೈಸಿದರು. ಸಮವಸ್ತ್ರ- ಪಠ್ಯಪುಸ್ತಕ ಹಾಗೂ ಶಾಲೆ ವತಿಯಿಂದಲೇ ಮಕ್ಕಳಿಗೆ ಶಾಲಾ ಬ್ಯಾಗ್‌ಗಳನ್ನು ನೀಡಲಾಯಿತು. ಲಾಡು ಜತೆಗೆ ಬಿಸಿಯೂಟದ ಸವಿ ಇತ್ತು.
ಶಾಮನೂರಿನ ಸರ್ಕಾರಿ ಪ್ರೌಢಶಾಲೆಯಲ್ಲೂ ಆರಂಭೋತ್ಸವದ ಕಳೆ ಹೆಚ್ಚಿತ್ತು. ಮಕ್ಕಳಿಗೆ ಸೇತುಬಂಧ ಶಿಕ್ಷಣ ಆರಂಭಿಸಲಾಯಿತು. ಕೆಲ ಶಿಕ್ಷಕರು ದಾಖಲಾತಿ ಆಂದೋಲನ ಪರವಾಗಿ ಊರಿನ ಮನೆ ಮನೆ ಭೇಟಿ ಮಾಡಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಮನವಿ ಮಾಡಿದರು. ಸೀತಮ್ಮ ಶಾಲೆಯಲ್ಲೂ ಎಸ್‌ಡಿಎಸ್‌ಸಿ ಹಾಗೂ ಗಣ್ಯರ ಸಮ್ಮುಖದಲ್ಲಿ ಮಕ್ಕಳನ್ನು ಸ್ವಾಗತಿಸಲಾಯಿತು.
ಕೆಲವು ಖಾಸಗಿ ಶಾಲೆಗಳಲ್ಲಿ ಸೆಲ್ಫೀ ಪಾಯಿಂಟ್ ಮಾದರಿ ಇರಿಸಿ ಶಾಲಾರಂಭ ಮಾಡಲಾಯಿತು. ಮಕ್ಕಳ ತಲೆಗೆ ವಿಶೇಷ ಕಿರೀಟ ಹಾಕಿ ಬರಮಾಡಿಕೊಳ್ಳಲಾಯಿತು. ಕೆಲವು ಖಾಸಗಿ ಶಾಲೆಗಳಲ್ಲಿ ಪ್ರೀ-ಕೆಜಿ, ಎಲ್‌ಕೆಜಿ ಪ್ರವೇಶ ಸಂಬಂಧ ರಾಜ್ಯ ಹಾಗೂ ಸಿಬಿಎಸ್‌ಇ ತರಗತಿಗಳ ಪ್ರತ್ಯೇಕ ಶುಲ್ಕ, ಪ್ರವೇಶಾತಿಗೆ ತರಬೇಕಾದ ದಾಖಲೆಗಳ ಕುರಿತಂತೆ ಪಟ್ಟಿ ಅಂಟಿಸಲಾಗಿತ್ತು.
* ಬೆಳಗ್ಗೆ ಪರೀಕ್ಷೆ, ಮಧ್ಯಾಹ್ನ ಶುರುವಾತು!
ಮೋತಿ ವೀರಪ್ಪ, ರಾಜನಹಳ್ಳಿ ಸೀತಮ್ಮ, ಸೇಂಟ್ ಮೇರೀಸ್, ಮಾಜಿ ಪುರಸಭೆ ಶಾಲೆ, ಅಕ್ಕಮಹಾದೇವಿ, ಆಲ್‌ಇಖ್ರಾ, ಮಿಲ್ಲತ್ ಶಾಲೆ ಸೇರಿ ಜಿಲ್ಲೆಯ 21 ವಿದ್ಯಾಲಯಗಳಲ್ಲಿ ಬೆಳಗ್ಗೆ ಎಂದಿನಂತೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ನಡೆದವು. ಹೀಗಾಗಿ ಅಲ್ಲೆಲ್ಲ ಮಧ್ಯಾಹ್ನದ ತರುವಾಯವೇ ಶಾಲಾರಂಭದ ಚಟುವಟಿಕೆಗಳಿಗೆ ಚಾಲನೆ ದೊರಕಿತು.
* ಸಮೀಕ್ಷೆ ಗುಸುಗುಸು
ಒಂದೆಡೆ ಪರೀಕ್ಷೆ, ಮತ್ತೊಂದೆಡೆ ಪರಿಶಿಷ್ಟ ಜಾತಿ ಒಳಸಮೀಕ್ಷೆ ಜತೆಗೆ ಶಾಲಾ ಆರಂಭೋತ್ಸವಕ್ಕೆ ಶಿಕ್ಷಕರಿಗೆ ನಾನಾ ಕೆಲಸ ಹಂಚಿಕೆ ಕುರಿತಂತೆ ಬಹುತೇಕ ಶಾಲೆಗಳಲ್ಲಿ ಸರ್ಕಾರದ ನೀತಿ ವಿರುದ್ಧ ಗುಸುಗುಸು ಸದ್ದು ಮಾಡಿತು. ಕೆಲವು ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿದ್ದರಿಂದ ಶಾಲೆಗಳ ಆರಂಭೋತ್ಸವಕ್ಕೆ ಅಲಭ್ಯವಾದರು. ಅಲ್ಲಲ್ಲಿ ನಿರುತ್ಸಾಹವೂ ವ್ಯಕ್ತವಾಗಿತ್ತು.
--
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಆರಂಭೋತ್ಸವ ಕಾರ್ಯಕ್ರಮ ನಡೆದಿವೆ. ಮೊದಲ ದಿನ ಶೇ. 35ರಿಂದ 40ರಷ್ಟು ಮಕ್ಕಳು ಹಾಜರಾಗಿದ್ದಾರೆ. ಕೋವಿಡ್ ಬಗ್ಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ. ಆದರೂ ಜಾಗರೂಕತೆ ವಹಿಸಲು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ಜಿ. ಕೊಟ್ರೇಶ್
ಡಿಡಿಪಿಐ.