ಶಾಲೆಗಳ ಶುರುವಾತಿಗೆ ತಾಲೀಮು 1998 ವಿದ್ಯಾಲಯಗಳಲ್ಲಿ ಸಿದ್ಧತೆ

1000888517_20250520222413220.jpg
Published on

ಡಿ.ಎಂ.ಮಹೇಶ್, ದಾವಣಗೆರೆ

ಬೇಸಿಗೆ ರಜೆಯ ಮೋಜು ಮುಗಿಸಿ ಮಕ್ಕಳು ಶಾಲೆಗೆ ಬರಲು ಇನ್ನು ಹತ್ತು ದಿನ ಬಾಕಿ ಇದೆ. ಶೈಕ್ಷಣಿಕ ಸಾಲಿನ ಶಾಲಾ ಆರಂಭೋತ್ಸವಕ್ಕೆ ಜಿಲ್ಲೆಯ 1998 ವಿದ್ಯಾಲಯಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ಸೂಚನೆಯಂತೆ ಪೂರ್ವ ಸಿದ್ಧತೆ ಶುರುವಾಗಿದೆ.

ಜಿಲ್ಲೆಯಲ್ಲಿ ಒಟ್ಟು 1471 ಪ್ರಾಥಮಿಕ, 527 ಪ್ರೌಢಶಾಲೆ ಸೇರಿ ಒಟ್ಟು 1998 ಶಾಲೆಗಳಿವೆ. ಇದರಲ್ಲಿ 1194 ಸರ್ಕಾರಿ, ಸಮಾಜ ಕಲ್ಯಾಣ ಇಲಾಖೆ 35, ಅನುದಾನಿತ 308, ಅನುದಾನರಹಿತ 459 ಹಾಗೂ 2 ಕೇಂದ್ರೀಯ ವಿದ್ಯಾಲಯಗಳಿವೆ.

ಅಗತ್ಯ ಸಿದ್ಧತಾ ಕ್ರಮಗಳ ಕುರಿತಂತೆ ಮಂಗಳವಾರ, ಎಲ್ಲ ಬಿಇಒಗಳು ಮುಖ್ಯ ಶಿಕ್ಷಕರ ಸಭೆ ಕರೆದು ಮಾಹಿತಿ ನೀಡಲಿದ್ದಾರೆ. ಕಳೆದ ಸಾಲಿನಲ್ಲಿ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ 2,61,757 ಮಕ್ಕಳು ನೋಂದಣಿಯಾಗಿದ್ದರು. ಈ ಬಾರಿಯೂ ಮಕ್ಕಳನ್ನು ಆಕರ್ಷಿಸಲು ಖಾಸಗಿ ಶಾಲೆಗಳೊಂದಿಗೆ ಸರ್ಕಾರಿ ಶಾಲೆಗಳೂ ಸೆಡ್ಡು ಹೊಡೆಯಲು ಸಜ್ಜಾಗಿವೆ.

ತಯಾರಿಗೆ ನಾನಾ ಸೂಚನೆ

ಶಾಲಾವರಣದ ಶೌಚಗೃಹ, ಕುಡಿವ ನೀರಿನ ತೊಟ್ಟಿ, ಸಿಂಟೆಕ್ಸ್ ಸ್ವಚ್ಛತೆ, ತರಗತಿ ಕೊಠಡಿ ಹಾಗೂ ಅಡುಗೆ ಕೋಣೆಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವುದು. ಆಹಾರಧಾನ್ಯ ಹಾಗೂ ಪಾತ್ರೆಗಳನ್ನು ಸ್ವಚ್ಛಗೊಳಿಸಿ ಬಳಸುವುದು. ಗ್ಯಾಸ್ ಸ್ಟೌ, ಸಿಲಿಂಡರ್ ಸುವ್ಯವಸ್ಥಿತವಾಗಿ ಇರಿಸುವುದು, ಶಾಲೆಗಳಲ್ಲಿ ಅಗತ್ಯ ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವ ಕಾರ್ಯಕ್ಕೆ ಈಗಾಗಲೆ ಸೂಚನೆ ನೀಡಲಾಗಿದೆ.

ಮೇ. 29ರಂದು ಶಾಲಾ ಆರಂಭೋತ್ಸವವನ್ನು ಕೆಲವೆಡೆ ವಿಶೇಷವಾಗಿ ನಡೆಸಲು ಆಯಾ ಶಾಲಾ ಆಡಳಿತ ಮಂಡಳಿಗಳು ಯೋಜಿಸುತ್ತಿವೆ. ಜನಪ್ರತಿನಿಧಿಗಳನ್ನು ಶಾಲೆಗಳಿಗೆ ಕರೆಸಿ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಕ್ರಮ ವಹಿಸಲಾಗುತ್ತಿದೆ.

ರಂಗೋಲಿಯ ಚಿತ್ತಾರ, ತಳಿರು ತೋರಣದೊಂದಿಗೆ ಶಾಲೆಗಳನ್ನು ಸಿಂಗರಿಸಿ, ಶಾಲಾರಂಭದ ಮೊದಲು ಮೂರು ದಿನಗಳಂದು ಸಿಹಿಯೂಟದ ಮೂಲಕ ಮಕ್ಕಳನ್ನು ಸ್ವಾಗತಿಸಲು ಈಗಾಗಲೆ ತಾಲೀಮು ನಡೆಸಲಾಗುತ್ತಿದೆ. ವೇಳಾಪಟ್ಟಿ, ತರಗತಿ ಹಂಚಿಕೆ, ವಾರ್ಷಿಕ ಯೋಜನೆ ಬಗ್ಗೆ ನಿರ್ಧರಿಸಲು ತಿಳಿಸಲಾಗಿದೆ.

ಶಾಲೆಗಳಲ್ಲಿನ ಕುಂದುಕೊರತೆ ಹಾಗೂ ಅಗತ್ಯಗಳ ಪೂರೈಕೆ ಬಗ್ಗೆ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸುವುದು, ಸರ್ಕಾರದಿಂದ ಮಕ್ಕಳಿಗೆ ನೀಡುವ ಉಚಿತ ಸವಲತ್ತುಗಳನ್ನು ವಿತರಿಸುವುದು. ಮನೆ ಮನೆಗೆ ಭೇಟಿ ನೀಡಿ ಅರ್ಹ ಮಕ್ಕಳನ್ನು ಶಾಲೆಗೆ ದಾಖಲಿಸುವುದು ಹಾಗೂ ಮುಂದಿನ ತರಗತಿಗಳಿಗೆ ಬೇರೆ ಶಾಲೆಗೆ ತೆರಳುವ ಮಕ್ಕಳು ಕಡ್ಡಾಯವಾಗಿ ದಾಖಲಾಗಲು ಕ್ರಮ ವಹಿಸಲು ಸೂಚನೆ ನೀಡಲಾಗಿದೆ.

ಶೇ.80ರಷ್ಟು ಪಠ್ಯಪುಸ್ತಕ ಸ್ವೀಕೃತಿ

ಜಿಲ್ಲೆಗೆ ಬೇಡಿಕೆ ಇರುವ 19,22,416 ಉಚಿತ ಪಠ್ಯಪುಸ್ತಕಗಳ ಪೈಕಿ ಗುರುವಾರದವರೆಗೆ 13,12,311 ಪುಸ್ತಕಗಳು ಪೂರೈಕೆಯಾಗಿವೆ. ಇನ್ನು 8,78,009 ಮಾರಾಟದ ಪಠ್ಯಪುಸ್ತಕಗಳ ಪೈಕಿ 7,04,741 ಪುಸ್ತಕಗಳು ಮುದ್ರಕ ಕಂಪನಿಯಿಂದ ರವಾನೆಯಾಗಿವೆ.

ಬಿಇಒ ಕಚೇರಿಗಳ ಮೂಲಕವಾಗಿ ಜಿಲ್ಲೆಯ ಶಾಲೆಗಳಿಗೆ ವಿತರಣೆ ಆಗುತ್ತಿದೆ. ಶೇ. 68.26ರಷ್ಟು ಉಚಿತ ಪುಸ್ತಕಗಳು, ಶೇ.80.27ರಷ್ಟು ಮಾರಾಟದ ಟೆಕ್ಷ್ಟ್ ಬುಕ್‌ಗಳು ಸ್ವೀಕೃತಿಯಾಗಿವೆ.

ಇನ್ನು ಸರ್ಕಾರ ಟೆಂಡರ್ ನೀಡಿದ ಮಿಲ್‌ಗಳಿಂದ ಇನ್ನು ನಾಲ್ಕು ದಿನಗಳಲ್ಲಿ ಸಮವಸ್ತ್ರ ಬರುವ ನಿರೀಕ್ಷೆ ಇದೆ. ಆಯಾ ತರಗತಿ ಮಕ್ಕಳಿಗೆ ನಿಗದಿತ ಅಳತೆಯಲ್ಲಿ, ತಿಳಿನೀಲಿ, ಆಕಾಶ ನೀಲಿ ಅಲ್ಲದೆ ಹಸಿರು, ಕೆಂಪು, ಬಿಳಿ, ಕಪ್ಪು ಮತ್ತು ಹಳದಿ ಮಿಶ್ರಿತ ಚೌಕಗಳುಳ್ಳ ಸಮವಸ್ತ್ರ ಹಾಗೂ ಹಸಿರು ವರ್ಣದ ಚೂಡಿದಾರ್ ಬಟ್ಟೆ ಬರಬೇಕಿದೆ.

--

ಮೇ 29ರಂದು ಶಾಲೆಗಳು ಆರಂಭವಾಗಲಿವೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭಾ ನಡವಳಿಯಂತೆ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಶಾಸಕರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಶಾಲಾ ಆರಂಭಕ್ಕೆ ನಿರ್ದೇಶನ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ.

ಜಿ. ಕೊಟ್ರೇಶ್

ದಾವಣಗೆರೆ ಡಿಡಿಪಿಐ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net