ಶಾಲಾ ವಾಹನಗಳಲ್ಲಿ ಮಕ್ಕಳ ರಕ್ಷಣಾ ಕ್ರಮ ಕಡ್ಡಾಯ

1000643736.jpg
Published on

ದಾವಣಗೆರೆ: ಜಿಲ್ಲೆಯ ವಿವಿಧ  ಶಾಲಾ ವಾಹನಗಳು ಮಕ್ಕಳ ರಕ್ಷಣೆ ದೃಷ್ಟಿಯಿಂದ ಸುರಕ್ಷತಾ ಕ್ರಮ ಅನುಸರಿಸುವುದು ಕಡ್ಡಾಯ.  ಪಾಲನೆ ಮಾಡದ ಶಾಲಾ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು. 
ಜಿಲ್ಲಾಧಿಕಾರಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ, ಸಾರಿಗೆ, ಮಕ್ಕಳ ರಕ್ಷಣಾ ಘಟಕ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳೊಂದಿಗೆ ಜಂಟಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 500 ಕ್ಕಿಂತ ಹೆಚ್ಚು ಖಾಸಗಿ ಶಾಲೆಗಳಿಂದ 1030 ಕ್ಕೂ ಹೆಚ್ಚು ಶಾಲಾ ಬಸ್ ಸಂಚರಿಸುತ್ತಿದ್ದು, ಮಕ್ಕಳ ಸುರಕ್ಷತೆ ಕ್ರಮವಾಗಿ  ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಹೊಂದಿರಬೇಕು. ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಿಕೊಂಡು ವಾಹನ ಸಂಚರಿಸುವ ಸ್ಥಳಗಳ ಬಗ್ಗೆ ಸಂಸ್ಥೆಯವರು ಮೇಲ್ವಿಚಾರಣೆ ವಹಿಸಬೇಕು ಎಂದು ತಿಳಿಸಿದರು.
ವಾಹನಕ್ಕೆ ವೇಗ ನಿಯಂತ್ರಕದ ಜೊತೆಗೆ 40 ಕಿ.ಮೀ ಮಿತಿಯಲ್ಲಿಯೇ ವಾಹನಗಳನ್ನು ಚಲಾಯಿಸಬೇಕು. ಬಾಲಕಿಯರು ಇರುವುದರಿಂದ ವಾಹನದಲ್ಲಿ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ಇರಲೇಬೇಕು. ವಾಹನ ಚಾಲಕರು ಚಾಲನಾ ಪರವಾನಗಿ ಹೊಂದಿ ಕನಿಷ್ಠ 6 ವರ್ಷಗಳ ಅನುಭವ ಹೊಂದಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಮಕ್ಕಳ ಮೇಲೆ ದೌರ್ಜನ್ಯವಾದರೆ, ಅದನ್ನು ಪೋಕ್ಸೋ ಎಂದು ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಾಲಕರೊಂದಿಗೆ ಸಭೆ; ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸಮಯವಾಗಿದೆ ಎಂದು ವಾಹನವನ್ನು ವೇಗವಾಗಿ ಚಲಾಯಿಸುವ ಬದಲಾಗಿ, ಪಾಲಕರೊಂದಿಗೆ ಸಭೆ ನಡೆಸಿ ಮಕ್ಕಳನ್ನು ನಿಗದಿತ ಸ್ಥಳಕ್ಕೆ ಮೊದಲೇ ಕರೆ ತರಲು ಮನವರಿಕೆ ಮಾಡಿಕೊಡಬೇಕು, ಸಮಯವಾಗಿದೆ ಎಂದು ವಿವಿಧ ಕಡೆ ಅಳವಡಿಸಿರುವ ಸಿಗ್ನಲ್ಗಳನ್ನು ಜಂಪ್ ಮಾಡಿ ಸಂಚರಿಸುವಂತಿಲ್ಲ. ಸಿಗ್ನಲ್ ಜಂಪ್ ಮಾಡಿರುವುದು ಕಂಡು ಬಂದಲ್ಲಿ, ಅಂತಹ ವಾಹನ ನೊಂದಣಿ ಮತ್ತು ಚಾಲಕರ ಪರವಾನಗಿ ರದ್ದು ಮಾಡಲು ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ  350 ಕ್ಕೂ ಹೆಚ್ಚು ಶಾಲಾ ವಾಹನಗಳಿಗೆ ಎಫ್ಸಿ ನವೀಕರಣವಾಗಿರುವುದಿಲ್ಲ.  ಫೆ. 25 ರೊಳಗಾಗಿ ನವೀಕರಿಸಿಕೊಳ್ಳಬೇಕು, ಇಲ್ಲವಾದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಯಾವುದೇ ವಾಹನ ರಸ್ತೆಯಲ್ಲಿ ಸಂಚರಿಸುತ್ತಿದೆ ಎಂದಲ್ಲಿ ಅದಕ್ಕೆ ಎಫ್ಸಿ, ವಿಮೆ, ಚಾಲಕರಿಗೆ ಪರವಾನಗಿ, ಸ್ಪೀಡ್ ಗೌರ್ನರ್ ಇರಲೇಬೇಕೆಂದು ತಿಳಿಸಿದರು. 
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ ಸಂಚಾರಿ ನಿಯಮಗಳ ಪಾಲನ ಮಾಡದ ಮತ್ತು ಚಾಲಕರ ಅಜಾಗರೂಕತೆಯಿಂದ ಪ್ರತಿನಿತ್ಯ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಎಲ್ಲಾ ಶಾಲಾ ವಾಹನಗಳು ಮೋಟಾರು ವಾಹನ ಕಾಯಿದೆ ಮತ್ತು ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದರೊಂದಿಗೆ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
 ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ಮಾತನಾಡಿ ಜಿಲ್ಲೆಯ ಶಾಲಾ ವಾಹನಗಳಲ್ಲಿ 112 ವಾಹನಗಳಿಗೆ 15 ವರ್ಷ ದಾಟಿದೆ. 330 ವಾಹನಗಳ ಚಾಲ್ತಿ ದಾಖಲೆಗಳಿಲ್ಲ, ಅಂತಹ ವಾಹನಗಳಿಗೆ ನೋಟಿಸ್ ನೀಡಲಾಗಿದೆ. ಈಗಾಗಲೇ 22 ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದು 3 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ವಾಹನಗಳನ್ನು ಆಗಿಂದಾಗ್ಗೆ ತಪಾಸಣೆ ಮಾಡಲು ಸಾರಿಗೆ ಇನ್ಸ್ಪೆಕ್ಟರ್ ಗಳಿಗೆ ನಿರ್ದೇಶನ ನೀಡಲಾಗಿದ್ದು ಶಾಲಾ ಮಕ್ಕಳ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸಾರಿಗೆ ನಿಯಮಗಳನ್ನು ಪಾಲನೆ ಮಾಡದ ವಾಹನಗಳ ಮೇಲೆ ನಿರ್ಧಾಕ್ಷಿಣ ಕ್ರಮ ಅನಿವಾರ್ಯವಾಗಿದೆ ಎಂದರು.  ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್, ಸ್ಮಾರ್ಟ್ ಸಿಟಿ ಎಂಡಿ ವೀರೇಶ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net