

ದಾವಣಗೆರೆ: ನಗರ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ ಮ್ಯಾನ್ಯುಯಲ್ ಸ್ಕಾೃವೆಂಜರ್‌ಗಳ ಸಮೀಕ್ಷೆ ನಡೆಸಿ, ನಿಖರ ಮಾಹಿತಿ ಮತ್ತು ಅಂಕಿ-ಅಂಶ ನೀಡಬೇಕೆಂದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮೀಕ್ಷೆಯನ್ವಯ ಇದುವರೆಗೂ ಸ್ವೀಕೃತವಾದ ಫಲಾನುಭವಿಗಳ ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಸ್ವೀಕೃತವಾಗದ ಅರ್ಜಿಗಳನ್ನು ಕಾಲ ಮಿತಿಯೊಳಗೆ ಪರಿಶೀಲಿಸಿ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೈಗೊಂಡ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಮರು ಸಮೀಕ್ಷೆಯ ವರದಿ ಪ್ರಕಾರ ಸ್ವೀಕೃತವಾದ 224 ಅರ್ಜಿಗಳನ್ನು ಪರಿಶೀಲಿಸಲಾಗಿದೆ ಎಂದು ಜಿಲ್ಲಾ ನಗರರಾಭಿವೃದ್ಧ್ದಿ ಕೋಶ ಯೋಜನಾ ನಿರ್ದೇಶಕ ಎನ್ ಮಹಾಂತೇಶ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 388 ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿದ್ದು ಇದರಲ್ಲಿ 372 ಮಂದಿ ಗುರುತಿಸಿ ಗುರುತಿನ ಚೀಟಿ ನೀಡಲಾಗಿದೆ. 16 ಬಾಕಿ ಇದ್ದು ನಾಲ್ವರು ಮೃತಪಟ್ಟಿದ್ದು, ಇತರ 12 ಫಲಾನುಭವಿಗಳು ಸ್ಥಳದಲ್ಲಿ ವಾಸ ಇಲ್ಲದ್ದರಿಂದ ಗುರುತಿನ ಚೀಟಿ ವಿತರಿಸಲು ಸಾಧ್ಯವಾಗಿರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ದಾವಣಗೆರೆ ನಗರ ಪಾಲಿಕೆಯಲ್ಲಿ 2017ನೇ ವರ್ಷದಲ್ಲಿ 34, 2022 ರಲ್ಲಿ 106, ಜನ ಹಾಗೂ 2023 ರಲ್ಲಿ 110 ಜನ ಸೇರಿ ಒಟ್ಟು 250 ಜನರನ್ನು ನೇರ ನೇಮಕಾತಿ ಮೂಲಕ ಪೌರಕಾರ್ಮಿಕರ ಹುದ್ದೆಗೆ ಭರ್ತಿ ಮಾಡಿಕೊಳ್ಳಲಾಗಿದೆ. ಖಾಲಿ ಹುದ್ದೆಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು. ಸರ್ಕಾರದ ಆದೇಶ ಬಂದ ನಂತರ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.
ಪೌರಕಾರ್ಮಿಕರಿಗೆ ಗುಣಮಟ್ಟದ ಪೌಷ್ಟಿಕಾಂಶ ಹಾಗೂ ರುಚಿಕರವಾದ ಆಹಾರದ ಮೆನು ಬದಲಾಯಿಸಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ದಾವಣಗೆರೆ ಮಹಾನಗರಪಾಲಿಕೆ, ಹರಿಹರ ಮತ್ತು ನಗರಸಭೆ, ಚನ್ನಗಿರಿ, ಹೊನ್ನಾಳಿ, ಮಲೇಬೆನ್ನೂರು ಪುರಸಭೆ, ಜಗಳೂರು, ನ್ಯಾಮತಿ ಪಪಂಗಳಲ್ಲಿ ಕರ್ತವ್ಯನಿರತ ಕಾಯಂ ಮತ್ತು ನೇರ ಪಾವತಿ ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿಗೆ ಗುರುತಿನ ಚೀಟಿ ನೀಡಿರುವುದಾಗಿ ಸಭೆಯಲ್ಲಿ ವಿವರಿಸಿದರು.
ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 742 ಸ್ವಚ್ಛತಾ ಸಿಬ್ಬಂದಿಗೆ ಪ್ರಧಾನ ಮಂತ್ರಿ ಸುರಕ್ಷ ಭೀಮ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯಡಿ ವಿಮಾ ಪಾಲಿಸಿಗಳನ್ನು ಮಾಡಲಾಗಿದೆ.
458 ಪೌರ ಕಾರ್ಮಿಕರು, 12 ಕ್ಲೀನರ್, 21 ಲೋಡರ್ಸ್‌ಗಳು, 19 ಯುಜಿಡಿ ಸಹಾಯಕರು, 13 ಹಿರಿಯ ಸಹಾಯಕರು, 26 ಸ್ಯಾನಿಟರಿ ಸೂಪರ್ ವೈಸರ್, 193 ವಾಹನ ಚಾಲಕರು ಸೇರಿ ಒಟ್ಟಾರೆ 742 ಕಾರ್ಮಿಕರಿಗೆ ವಿಮಾ ಪಾಲಿಸಿ ಮಾಡಿಸಲಾಗಿರುತ್ತದೆ ಎಂದು ಅಧಿಕಾರಿಗಳು ವಿವರ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಎಎಸ್ಪಿ ವಿಜಯಕುಮಾರ್ ಎಂ.ಸಂತೋಷ್, ಡಿ.ಎಚ್.ಒ. ಡಾ. ಷಣ್ಮುಖಪ್ಪ,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.
--