

ದಾವಣಗೆರೆ: ಹಂಚಿಕೆಯಾದ ನಿವೇಶನಗಳ ಸಂಬಂಧ, ಎಸ್ಸಿ-ಎಸ್ಟಿ ಉದ್ದಿಮೆದಾರರ ಕಂತಿನ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ವಿಧಿಸುವುದು ಸರಿಯಲ್ಲ. ಸಂಪೂರ್ಣ ಬಡ್ಡಿ ಮನ್ನಾಕ್ಕೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.
ದಾವಣಗೆರೆ- ಚಿತ್ರದುರ್ಗ ಜಿಲ್ಲಾ ಎಸ್ಸಿ ಎಸ್ಟಿ ಕೈಗಾರಿಕೋದ್ಯಮಿಗಳ ಸಂಘದಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುಂದು ಕೊರತೆ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಎಸ್ಸಿ-ಎಸ್ಟಿ ಉದ್ದಿಮೆದಾರರು ಅಂಬಾನಿ-ಆದಾನಿ ಪಟ್ಟಿಯಲ್ಲಿ ಬರುವಂತೆ ಉದ್ಯಮದತ್ತ ಉತ್ತೇಜಿಸಬೇಕಿದೆ. ಆದರೆ ಬಹುತೇಕರು ಕಂತಿನ ಹಣ ಕಟ್ಟಲಾಗದೆ ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆ. ಹಾಗಾಗಿ ಬಡ್ಡಿ ವಿಧಿಸಬಾರದು. ಬಡ್ಡಿ ಕಟ್ಟಿಸಿಕೊಂಡಿದ್ದಲ್ಲಿ ಅದನ್ನು ವಾಪಾಸ್ ಕೊಡಿಸುವ ಬಗ್ಗೆ ಸಂಬಂಧಿಸಿದ ಸಚಿವರ ಜತೆ ಚರ್ಚಿಸುವುದಾಗಿ ಹೇಳಿದರು.
ದಲಿತ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಸಹಾಯಧನ ನೀಡಬೇಕು. ಬಡ್ಡಿ ಕೈಬಿಡಬೇಕೆಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ರಾಜ್ಯ ಪರಿಷತ್ ಸಭೆ ಮೂಲಕ ಮನವಿ ಮಾಡಲಾಗಿದೆ. ಎಸ್ಸಿ-ಎಸ್ಟಿ ಕಲ್ಯಾಣಕ್ಕೆ ಸರ್ಕಾರ 39 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಬಡ್ಡಿ ಮನ್ನಾ ಮಾಡಿದರೆ ಇದರಲ್ಲಿ ಸುಮಾರು 50ರಿಂದ 100 ಕೋಟಿ ರೂ. ಬಳಕೆಯಾಗಬಹುದು. ಸರ್ಕಾರಕ್ಕೆ ಇದು ಹೊರೆಯಾಗದು ಎಂದು ತಿಳಿಸಿದರು.
ಹಿಂದಿನ ವರ್ಷಗಳಿಗೆ ಅವಲೋಕಿಸಿದರೆ ದಲಿತರಿಗೆ ಸವಲತ್ತಿನ ಶೇ.1ರಷ್ಟೂ ಸಿಗುತ್ತಿಲ್ಲ. ಇದನ್ನು ಹೊಂದಾಣಿಕೆ ಮಾಡಬೇಕಾದರೆ ದಲಿತರಿಗೆ ನಿವೇಶನ ಕಲ್ಪಿಸಬೇಕು. ಇದಕ್ಕಾಗಿ ಪ್ರತ್ಯೇಕವಾಗಿ 100 ಅಥವಾ 200 ಎಕರೆ ಜಮೀನನ್ನು ಸರ್ಕಾರ ಖರೀದಿಸಬೇಕು. ಈ ಸಂಬಂಧ ಸಿಎಂ, ಡಿಸಿಎಂ ಹಾಗೂ ಸಮಾಜ ಕಲ್ಯಾಣ ಸಚಿವರೊಂದಿಗೆ ಸಮಾಲೋಚನೆ ಮಾಡುವುದಾಗಿ ಹೇಳಿದರು.
ಎಸ್‌ಇಪಿ- ಟಿಎಸ್‌ಪಿ ಕಾಯ್ದೆ ಅನ್ವಯ ಸವಲತ್ತುಗಳ ಸಮಾನ ಹಂಚಿಕೆಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಪರಿಶಿಷ್ಟರ ಸಮುದಾಯವನ್ನು ಮೇಲೆತ್ತಬೇಕಿದೆ. ಎಸ್ಸಿ ಎಸ್ಟಿ ಜನರಿಗೆ ಕೆಲ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆಯೇ, ಕೆಲವಕ್ಕೆ ಬೇಕಾಬಿಟ್ಟಿ ಸಹಿ ಮಾಡಿಕೊಂಡ ನಿದರ್ಶನಗಳಿವೆ. ಆದರೆ ಆನ್‌ಲೈನ್ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ಇದಕ್ಕೆಲ್ಲ ಅವಕಾಶ ತಪ್ಪಿದೆ ಎಂದರು.
ದಲಿತ ಉದ್ಯಮಿದಾರರಿಗೆ ಇಲಾಖೆ ಬದಲಾಗಿ ಅಂಬೇಡ್ಕರ್, ಬಾಬು ಜಗಜೀವನರಾಂ, ಭೋವಿ ಹಾಗೂ ಲಂಬಾಣಿ ಅಭಿವೃದ್ಧಿ ನಿಗಮಗಳಿಂದಲೇ ನೇರ ಸಾಲ ವ್ಯವಸ್ಥೆ ಮಾಡಬೇಕು ಎಂದೂ ಸಲಹೆ ನೀಡಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಕಚೇರಿಯನ್ನು ದಾವಣಗೆರೆಯಿಂದ ಸ್ಥಳಾಂತರಿಸದಂತೆ ಶಾಸಕ ರಘುಮೂರ್ತಿ ಅವರೊಂದಿಗೆ ಮಾತನಾಡುವುದಾಗಿ ಹೇಳಿದರು.
ಕರ್ನಾಟಕ ದಲಿತ ಉದ್ಯಮಿದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್ ಮಾತನಾಡಿ ಎಸ್‌ಇಪಿ, ಟಿಎಸ್‌ಪಿ ಯೋಜನೆಯ ಶೇ.3ರಷ್ಟು ಹಣವನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ನೀಡಿದಲ್ಲಿ ಎಸ್ಸಿಎಸ್ಟಿ ಜನರಿಗೆ ಅನುಕೂಲ ಕಲ್ಪಿಸಬಹುದು. ಸುಮಾರು 700 ಕೋಟಿ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಶೇ.24.1ರ ಮೀಸಲಾತಿ ಅಡಿಯಲ್ಲಿ ದಲಿತರಿಗೆ ಸಿಎ ನಿವೇಶನಗಳನ್ನು ನೀಡಬೇಕು. ಈ ಸಂಬಂಧ ಸಬ್ಸಿಡಿ ನೀಡುವ ವಿಚಾರದಲ್ಲಿ ಶಾಸಕರು ಸಚಿವ ಎಂ.ಬಿ. ಪಾಟೀಲ್ ಅವರ ಮನವೊಲಿಸಬೇಕು. ಸಂಘದಿಂದ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲೂ ಈ ಬಗ್ಗೆ ಮನವಿ ಮಾಡಲಾಗುವುದು ಎಂದರು.
ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಯಕುಮಾರ್ ಮಾತನಾಡಿ ಕೈಗಾರಿಕಾ ನೀತಿ 20-25ಕ್ಕೆ ಮಾರ್ಪಾಡು ಮಾಡಿ ಹೊಸ ನೀತಿ ತರುವ ಪ್ರಕ್ರಿಯೆ ನಡೆಯುತ್ತಿದೆ. ಸಂಘವು ಬೇಡಿಕೆಗಳ ಪಟ್ಟಿ ನೀಡಿದಲ್ಲಿ ನಿರ್ಧರಿಸಿ ಪರಿಗಣಿಸಲು ಅನುಕೂಲವಾಗಲಿದೆ ಎಂದರಲ್ಲದೆ ನೂತನ ಸಂಘದ ರಚನೆಯಿಂದಾಗಿ ಎಸ್‌ಇಪಿ-ಟಿಎಸ್‌ಪಿ ಯೋಜನೆಗೆ 400 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ರಾಜೇಂದ್ರ ಕದಂ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಸಂಘದ ಅಧ್ಯಕ್ಷ ರಂಗಸ್ವಾಮಿ, ಕೆಎಸ್‌ಎಸ್‌ಐಡಿಸಿ ಸಹಾಯಕ ನಿರ್ದೇಶಕಿ ಅಕ್ಷತಾ ಇದ್ದರು.