ಎಸ್ಸಿ-ಎಸ್ಟಿ ವಕೀಲರ ಸಹಕಾರ ಸಂಘ ಅಸ್ತಿತ್ವಕ್ಕೆ

1001273291.jpg
Published on

ದಾವಣಗೆರೆ: ಭಾರತದಲ್ಲೇ ಮೊದಲ ಬಾರಿಗೆ ನಗರದಲ್ಲಿ ದಾವಣಗೆರೆ ಎಸ್ಸಿ-ಎಸ್ಟಿ ವಕೀಲರ ಸಹಕಾರ ಸಂಘ ರಚಿಸಲಾಗಿದ್ದು, ಸದ್ಯಕ್ಕೆ 175 ವಕೀಲರು ನೊಂದಣಿಯಾಗಿದ್ದು 3 ಲಕ್ಷ ರೂ. ಶೇರು ಸಂಗ್ರಹಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ.ಹನುಮಂತಪ್ಪ ತಿಳಿಸಿದರು.

ಎಸ್ಸಿ-ಎಸ್ಟಿ ವಕೀಲರಿಗೆ ಸರ್ಕಾರದಿಂದ ಇರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಈ ಸಹಕಾರ ಸಂಘ ಆರಂಭಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ. 12ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಮೀಪದ ಎಕೆಎಸ್ ಕನ್ವೆನ್‌ಷನ್ ಹಾಲ್‌ನಲ್ಲಿ ಈ ನೂತನ ಸಂಘದ ಜತೆಗೆ ಆಯೋಜಿಸಿರುವ ಅಹಿಂದ ವಕೀಲರ ಸಮಾವೇಶವನ್ನು ಉದ್ಘಾಟಿಸುವರು.

ಇಂದಿನ ಯುವ ಹಾಗೂ ಅಹಿಂದ ವರ್ಗದ ವಕೀಲರು ನ್ಯಾಯಾಧೀಶರ ಪರೀಕ್ಷೆಯಲ್ಲಿ ತೇರ್ಗಡೆ ಆಗುತ್ತಿಲ್ಲ. ಅನುವಾದದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸುವ ಉದ್ದೇಶದಡಿ ಸಮಾವೇಶ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕಾರ್ಯಾಗಾರ ಆಯೋಜಿಸುವ ಇರಾದೆ ಇದೆ ಎಂದರು.

ದಾವಣಗೆರೆ ಅಲ್ಲದೆ ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಹಾವೇರಿ, ಶಿವಮೊಗ್ಗ ಜಿಲ್ಲೆಗಳ ಅಹಿಂದ ವಕೀಲರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ವಾಲ್ಮೀಕಿ ಮಹಿಳಾ ಹಾಸ್ಟೆಲ್ ಹಾಗೂ ಅಲ್ಪಸಂಖ್ಯಾತರ ಮಹಿಳಾ ಕಾಲೇಜು ಸ್ಥಾಪನೆಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್, ಕೆ.ಎಚ್.ಮುನಿಯಪ್ಪ, ಸಂತೋಷ್ ಲಾಡ್, ಶಿವರಾಜ ಎಸ್. ತಂಗಡಗಿ, ಉಪ ಸಭಾಪತಿ ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಚ್. ಆಂಜನೇಯ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲೆಯ ಎಲ್ಲ ಶಾಸಕರು, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಎಂಎಲ್ಸಿ ಅಬ್ದುಲ್ ಜಬ್ಬಾರ್ ಭಾಗವಹಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎ.ಎಂ. ಆಂಜನೇಯ ಗುರೂಜಿ, ಅನೀಸ್‌ಪಾಷಾ, ರಜ್ವಿಖಾನ್, ಲೋಕಿಕೆರೆ ಪ್ರದೀಪ್, ಮಹೇಶನಾಯ್ಕ, ವಿ. ಗೋಪಾಲ್ ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net