

ದಾವಣಗೆರೆ: ಇಂದಿನ ಮಕ್ಕಳು ಮಾನವೀಯತೆ, ತೃಪ್ತಿ ಎಂಬ ಸಾಮಾಜಿಕ ಮೌಲ್ಯಗಳ ಅಡಿಯಲ್ಲಿ ಜೀವನ ಪಥವಿರಿಸಿ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ಎಸ್ಸೆಸ್ಸೆಲ್ಸಿಯ ಪ್ರತಿಭಾನ್ವಿತರಿಗೆ ಹಮ್ಮಿಕೊಂಡಿದ್ದ ಕನ್ನಡ ಕುವರ-ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮದ್ದಿಲ್ಲದ ದುರಾಸೆ ಸಮಾಜದಲ್ಲಿ ರೋಗವಾಗಿ ಹರಡಿದೆ. ಹೀಗಾಗಿ ಇದ್ದುದರಲ್ಲೇ ತೃಪ್ತಿ ಪಡುವ ಮನೋಭಾವ ಹಾಗೂ ಮಾನವೀಯತೆಯ ಗುಣ ಹೊಂದುವ ಮೂಲಕ ಶಾಂತಿ ಮತ್ತು ಸೌಹಾರ್ದ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಜೀಪ್, ಬೋಫೋರ್ಸ್, ಕಾಮನ್‌ವೆಲ್ತ್, 2ಜಿ ತರಂಗಾಂತರ, ಇತರೆ ಹಗರಣಗಳಲ್ಲಿ ಸಾವಿರಾರು ಕೋಟಿ ರೂ.ಗಳ ಅಕ್ರಮ ನಡೆದಿದೆ. ಅಭಿವೃದ್ಧಿ ಹೆಸರಿನಲ್ಲಿ ಇಷ್ಟೊಂದು ಹಣ ಸೋರಿಕೆಯಾದರೆ ಸಮಾಜದಲ್ಲಿ ಶಾಂತಿ ನೆಲೆಸದು ಎಂದು ತಿಳಿಸಿದರು.
ಹಿಂದೆಲ್ಲ ಜೈಲಿಗೆ ಹೋಗಿಬಂದವರ ಮನೆಯತ್ತ ಸುಳಿಯದಂತೆ ಪಾಲಕರು ನೀತಿಪಾಠ ಹೇಳುತ್ತಿದ್ದರು. ಇಂದಿನ ಸಮಾಜ ಅಧಿಕಾರ ಮತ್ತು ಶ್ರೀಮಂತಿಕೆಯನ್ನು ಪೂಜಿಸುತ್ತಿದೆ. ತೃಪ್ತಿಯ ಅರ್ಥ ತಿಳಿದು ಅರಗಿಸಿಕೊಂಡು ನಡೆದಲ್ಲಿ ಸಮಾಜದಲ್ಲಿ ಶಾಂತಿ ಇರಲಿದೆ.
ಹೆಚ್ಚಿನ ಅಂಕ ಪಡೆದವರನ್ನು ನೋಡಿ ಆ ಹಂತಕ್ಕೆ ತಲುಪದ್ದಕ್ಕೆ ಮರುಕ ಪಡೆಯದಿರಿ. ನಮಗಿಂತಲೂ ಹಿಂದುಳಿದವರು, ಅಂಗವಿಕಲರನ್ನು ಗಮನಿಸಿ ಮುನ್ನಡೆಯಿರಿ. ಜೀವನದಲ್ಲಿ ಜಿಗುಪ್ಸೆ ಬಂದಾಗ ಮಟ್ಟ ಹಾಕಿ. ಪದವಿ ಗಳಿಸಿದ ಮಾತ್ರಕ್ಕೆ ಸನ್ಯಾಸಿ ಆಗಬೇಕಿಲ್ಲ. ಕಾನೂನಿನ ಚೌಕಟ್ಟಿನಡಿ ಕೋಟ್ಯಾಧೀಶನಾಗಿ. ಇನ್ನೊಬ್ಬರ ಜೇಬಿಗೆ ಕೈ ಹಾಕದಿರಿ. ಇನ್ನೊಬ್ಬರ ಹೊಟ್ಟೆ ಒಡೆಯದಿರಿ ಎಂದರು.
ದುರಾಸೆಯಿಂದಾದ ಗಳಿಕೆಯಿಂದ ನಿಜವಾದ ಸಂತೋಷ ಸಿಗುವುದಿಲ್ಲ. ದುರಾಸೆ ಪರಿಸ್ಥಿತಿ ಮುಂದುವರೆದರೆ ಭಾಷೆ, ಧರ್ಮದ ಆಧಾರದ ಮೇಲೆ ದೇಶವು ಛಿದ್ರವಾಗಬಹುದು. ನನ್ನೊಬ್ಬನಿಂದ ಪರಿವರ್ತನೆ ಸಾಧ್ಯವಿಲ್ಲ ಎಂಬ ನಕಾರಾತ್ಮಕ ಭಾವನೆ ಕೈಬಿಡಿ. ನೀವು ಬದಲಾಗಿ. ಸಮಾಜವನ್ನೂ ಬದಲಾಯಿಸಿ ಎಂದೂ ಹೇಳಿದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಎಚ್. ಮಂಜುನಾಥ್, ಕೇರಳ ಗಡಿನಾಡು ಶಾಖೆಯ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ, ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಜ್ಯೋತಿ ಗಣೇಶ್ ಶೆಣೈ, ಬಿ. ಶಾಂತಪ್ಪ ಪೂಜಾರಿ, ಹೇಮಾ ಶಾಂತಪ್ಪ ಪೂಜಾರಿ ಇತರರಿದ್ದರು.
---