ಗ್ರಾಮವಾರು ನೀರು ಪರೀಕ್ಷಾ ಆಂದೋಲನ    ನೈರ್ಮಲ್ಯ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಸೂಚನೆ

1000183507.jpg
Published on

ದಾವಣಗೆರೆ: ಎಲ್ಲ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಸರಬರಾಜು ಮಡುವ ಕುಡಿವ ನೀರನ್ನು ಎಲ್ಲ ಹಂತದಲ್ಲಿ ಪರೀಕ್ಷೆ ಮಾಡಬೇಕಿದೆ. ಪಿಡಿಒ ಹಾಗೂ ಗ್ರಾಮೀಣ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ಇದನ್ನು ಆಂದೋಲನವಾಗಿ ನಡೆಸಬೇಕು ಎಂದು ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಲಮೂಲ, ಪೈಪ್‌ಲೈನ್, ಟ್ಯಾಂಕ್‌ಗಳಲ್ಲಿನ ನೀರಿನ ಮಾದರಿ ಸಂಗ್ರಹಿಸಿ ದಾವಣಗೆರೆ, ಚನ್ನಗಿರಿಯ ಪ್ರಯೋಗಾಲಯಳಿಗೆ ಕೊಂಡೊಯ್ದು ಪರೀಕ್ಷೆ ಮಾಡಿಸಬೇಕು. ಮುಂದಿನ ದಿನಗಳಲ್ಲಿ ಒಂದು ವಾರಗಳ ಕಾಲ ಸಮಗ್ರ ಪರಿಶೀಲನೆ ನಡೆಸಬೇಕು. ಟ್ಯಾಂಕ್ ಸ್ವಚ್ಛಗೊಳಿಸಿ, ಕ್ಲೋರಿನೇಷನ್ ಮಾಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ವಾಹನಗಳ ಮೂಲಕ ಶುದ್ಧ ನೀರಿನ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಕರಪತ್ರ ಬಳಸಬೇಕೆಂದರು.
ಕಲುಷಿತ ನೀರು ಮಿಶ್ರಣವಾಗದಂತೆ ನೋಡಿಕೊಳ್ಳಬೇಕು. ಕಲುಷಿತ ಕುಡಿಯುವ ನೀರಿನ ಪ್ರಕರಣಗಳು ಕಂಡುಬಂದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮೀಣ ಕುಡಿವ ನೀರು ಪೂರೈಕೆ ವಿಭಾಗದ ಕಿರಿಯ ಇಂಜಿನಿಯರ್‌ಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಯಡಿ 4 ನೇ ಹಂತದ ಕಾಮಗಾರಿಗಳು ನಡೆಯುತ್ತಿದ್ದು ಪ್ರತಿ ಮನೆಗೂ ನಲ್ಲಿ ಅಳವಡಿಸುವ ಮೂಲಕ ನೀರು ಪೂರೈಸಲಾಗುತ್ತಿದೆ. ಈಗಾಗಲೇ ಕೆಲವು ಗ್ರಾಮಗಳಲ್ಲಿ ನಳ ಸಂಪರ್ಕಕ್ಕೆ ಸಿಪಿವಿಸಿ ಪೈಪ್ ಅಳವಡಿಕೆಗೆ ಸಿಸಿ ರಸ್ತೆ ಕಟಿಂಗ್ ಮಾಡಲು ಮತ್ತು ಕೊಳವೆಬಾವಿಯಿಂದ ನೀರಿನ ಪೈಪ್‌ಲೈನ್ ಅಳವಡಿಕೆ ಮಾಡಲು 8 ಕಾಮಗಾರಿಗಳಿಗೆ ಸಮಿತಿಯು ಅನುಮೋದನೆ ನೀಡಿದೆ ಎಂದರು.
ದಾವಣಗೆರೆ ತಾಲೂಕಿನ ಹೆಬ್ಬಾಳು, ಕಾಟೀಹಳ್ಳಿ, ನೀರ್ಥಡಿ, ದ್ಯಾಮೇನಹಳ್ಳಿ, ಶ್ರೀರಾಮನಗರ  ಆಲೂರುಹಟ್ಟಿ, ಸಿದ್ದನೂರು, ಕೆರೆಯಾಗಲಹಳ್ಳಿ, ಆವರಗೊಳ್ಳ ಈ ಗ್ರಾಮಗಳಲ್ಲಿ ನಲ್ಲಿ ಅಳವಡಿಕೆ, ವಿತರಣಾ ಪೈಪ್, ಟ್ಯಾಂಕ್ ರಿಪೇರಿಗೆ ಅನುಮೋದನೆ ನೀಡಲಾಯಿತು.
ಬೇತೂರು, ಗುಮ್ಮನೂರು ಕದರಪ್ಪನಹಟ್ಟಿ, ಗೊಲ್ಲರಹಳ್ಳಿ ಸೇರಿ 13 ಗ್ರಾಮಗಳಲ್ಲಿ ಸಿಸಿ ರಸ್ತೆ ಕಟಿಂಗ್ ಮಾಡಿ ನಲ್ಲಿ ಅಳವಡಿಕೆ, ಪೈಪ್ಲೈನ್ ಅಳವಡಿಕೆ, ನೀರಿನ ಮೇಲ್ತೊಟ್ಟಿಗಳ ದುರಸ್ತಿ  ಕಾಮಗಾರಿಗೆ ಸ್ಥಳ ಪರಿಶೀಲನೆ ಮಾಡಿ ಅನುಮೋದನೆ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಹಿರಿಯ ಭೂ ವಿಜ್ಞಾನಿ ಬಸವರಾಜು, ಕಾರ್ಯಪಾಲಕ ಇಂಜಿನಿಯರ್ ಸೋಮ್ಲನಾಯ್ಕ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ಇದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net