ಜಗಳೂರಲ್ಲಿ ಶನಿವಾರ ಅಕ್ಷರ ಜಾತ್ರೆಯ ಸಂಭ್ರಮ

1000610285.jpg
Published on

ದಾವಣಗೆರೆ: ಜಗಳೂರಿನಲ್ಲಿ ಜ. 11, 12ರಂದು ದಾವಣಗೆರೆ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ.ಎ.ಬಿ.ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದು, ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ದಾವಣಗೆರೆ ಜಿಲ್ಲೆ ರಚನೆಯಾದ ಬಳಿಕ ಪ್ರಥಮ ಬಾರಿಗೆ ಜಗಳೂರಲ್ಲಿ ಕನ್ನಡ ಜಾತ್ರೆ ನಡೆಯುತ್ತಿದೆ. ಸರ್ಕಾರದಿಂದ ನಿರೀಕ್ಷಿತ 5 ಲಕ್ಷ ರೂ. ಅನುದಾನ ಇದುವರೆಗೆ ದಕ್ಕಿಲ್ಲ. ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಸಹಕಾರದೊಂದಿಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ವೇದಿಕೆಗೆ ಕವಿ ಮಹಲಿಂಗರಂಗ, ಸಮ್ಮೇಳನದ ಮಹಾದ್ವಾರಕ್ಕೆ ಜೆ.ಎಂ. ಇಮಾಂ, ಸಭಾಂಗಣಕ್ಕೆ ವಿದ್ಯಾರತ್ನ ಡಾ. ಟಿ. ತಿಪ್ಪೇಸ್ವಾಮಿ, ಪುಸ್ತಕ ಮಳಿಗೆಗೆ ಪ್ರೊ.ಎಸ್.ಬಿ. ರಂಗನಾಥ್, ವಸ್ತು ಪ್ರದರ್ಶನದ ಮಳಿಗೆಗೆ ಡಾ. ಎಂ.ಜಿ.ಈಶ್ವರಪ್ಪ ಅವರ ಹೆಸರಿಡಲಾಗಿದೆ ಎಂದು ಮಾಹಿತಿ ನೀಡಿದರು.
ಜ. 11ರಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ತಹಸೀಲ್ದಾರ್ ಕಲೀಂ ಉಲ್ಲಾ ಧ್ವಜಾರೋಹಣ ನೆರವೇರಿಸುವರು. ನಂತರ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು ಎಸ್ಪಿ ಉಮಾ ಪ್ರಶಾಂತ್ ಚಾಲನೆ ನೀಡುವರು.
ಬೆಳಗ್ಗೆ 11 ಗಂಟೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸಮ್ಮೇಳನ ಉದ್ಘಾಟಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ‘ಚಿನ್ನಹಗರಿಯ ನುಡಿತೇರು’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಸಿ.ವಿ.ಪಾಟೀಲ್ ಕನ್ನಡ ಧ್ವಜ ಹಸ್ತಾಂತರಿಸುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಶಾಸಕ ದೇವೇಂದ್ರಪ್ಪ, ಎಂಎಲ್ಸಿ ಅಬ್ದುಲ್ ಜಬ್ಬಾರ್, ಜಗಳೂರು ಪಪಂ ಅಧ್ಯಕ್ಷ ಕೆ.ಎಸ್. ನವೀನ್‌ಕುಮಾರ್ ಇತರರು ಭಾಗವಹಿಸುವರು.
ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು ಕುರಿತ ಗೋಷ್ಠಿಯಲ್ಲಿ ಡಾ. ನಾ. ಲೋಕೇಶ್ ಒಡೆಯರ್, ಡಾ.ಎಂ. ಮಂಜಣ್ಣ, ಡಾ. ದಾದಾಪೀರ್ ನವಿಲೇಹಾಳ್, ಸೌಹಾರ್ದ- ಸಮಾನತೆ- ಸಾಮಾಜಿಕ ನ್ಯಾಯ ಕುರಿತು ಮತ್ತೊಂದು ಗೋಷ್ಠಿಯಲ್ಲಿ ಡಾ. ಸಿದ್ದ್ಧನಗೌಡ ಪಾಟೀಲ್, ಡಾ. ಪ್ರಭಾಕರ ಲಕ್ಕೋಳ್, ಡಾ. ಪ್ರಶಾಂತ ನಾಯಕ್, ಡಾ. ಬಿ.ಎಂ.ಪುಟ್ಟಯ್ಯ, ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು ಕುರಿತು ಮೂರನೇ ಗೋಷ್ಠಿಯಲ್ಲಿ ಪ್ರೊ.ಬಿ.ಬಿ. ನಂದ್ಯಾಲ, ಪ್ರೊ. ನೆಲ್ಲಿಕಟ್ಟೆ ಸಿದ್ದೇಶ್, ಎನ್.ಟಿ.ಯರ‌್ರಿಸ್ವಾಮಿ ಪಾಲ್ಗೊಳ್ಳುವರು. ಅಂದು ಸಂಜೆ 6-30ಕ್ಕೆ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಜ. 12ರಂದು ಸಾಹಿತಿ ಚಂದ್ರಶೇಖರ ತಾಳ್ಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, 24 ಕವಿಗಳು ಕವಿತೆ ವಾಚನ ಮಾಡುವರು. ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಕುರಿತ ಗೋಷ್ಠಿಯಲ್ಲಿ ಹನಗವಾಡಿ ರುದ್ರಪ್ಪ, ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ. ಬಿ.ಕೆ. ಪ್ರೇಮಾ, ಡಾ. ಅರುಣ್ ಜೋಳದ ಕೂಡ್ಲಿಗಿ ಪಾಲ್ಗೊಳ್ಳುವರು. ದಾವಣಗೆರೆ ಜಿಲ್ಲೆಯ ಕೃಷಿ, ನೀರಾವರಿ ಹೋರಾಟಗಳು ಕುರಿತು ನಾಗಲಿಂಗಪ್ಪ ವಿಶೇಷ ಉಪನ್ಯಾಸ ನೀಡುವರು. ಮಧ್ಯಾಹ್ನ 2 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ.
ಅಂದು ಸಂಜೆ 4 ಗಂಟೆಗೆ  ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಸಮಾರೋಪ ಭಾಷಣ ಮಾಡುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಇತರರು ಪಾಲ್ಗೊಳ್ಳುವರು. ಇದೇ ವೇಳೆ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಪದಾಧಿಕಾರಿಗಳಾದ ಕೆ. ರಾಘವೇಂದ್ರ ನಾಯರಿ, ಬಿ. ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸತ್ಯಭಾಮಾ ಮಂಜುನಾಥ್, ರುದ್ರಾಕ್ಷಿಬಾಯಿ ಇದ್ದರು.
ಜಲೋತ್ಸವಕ್ಕೆ ಅರ್ಜುನ್ ಜನ್ಯ
ಜಗಳೂರು ತಾಲೂಕಿನ 57 ಕೆರೆಗಳು ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕರ ಆಸಕ್ತಿಯಿಂದ ಜ. 13ರಂದು ‘ಜಗಳೂರು ಜಲೋತ್ಸವ’ ಎಂಬ ವಿನೂತನ ಕಾರ್ಯಕ್ರಮ ಅಲ್ಲಿನ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪಾಲ್ಗೊಳ್ಳುವರು. ಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಸಂಯೋಜಿಸಿದ 45 ನಿಮಿಷದ ಸಾಕ್ಷೃಚಿತ್ರ ಪ್ರದರ್ಶನವಾಗಲಿದೆ ಎಂದು ವಾಮದೇವಪ್ಪ ತಿಳಿಸಿದರು.
ಬಹಿಷ್ಕಾರ ಬೇಡ, ಕಾರ್ಯಕ್ರಮಕ್ಕೆ ಬನ್ನಿ..
32 ವರ್ಷದ ನಂತರ ಜಗಳೂರಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿದೆ. ಭಿನ್ನಾಭಿಪ್ರಾಯಗಳು ಸಹಜ. ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ನಿನ್ನೆ ಹೇಳಿಕೆ ನೀಡಿದ ಸಾಹಿತಿಗಳಿಗೆ ಮತ್ತೊಮ್ಮೆ ಮುಕ್ತ ಆಹ್ವಾನ ನೀಡುತ್ತೇನೆ ಎಂದು ವಾಮದೇವಪ್ಪ ಮನವಿ ಮಾಡಿದರು.
ಆಹ್ವಾನಪತ್ರಿಕೆ ಮುದ್ರಿಸುವ ಮುನ್ನ, ಜಗಳೂರು ತಾಲೂಕಿನ ಕೆಲ ಸಾಹಿತಿಗಳನ್ನು ಸಂಪರ್ಕಿಸಲಾಗಿತ್ತು. ಆದರೆ ಅವರಿಂದ ಉತ್ತರ ಬರಲಿಲ್ಲ. ಹೀಗಾಗಿ ಇತರೆ ಜಿಲ್ಲೆಯ ಮೂವರು ಅತಿಥಿಗಳನ್ನು ಗೋಷ್ಠಿಗಳಲ್ಲಿ ಬಳಸಿಕೊಳ್ಳಲಾಗಿದೆ. ಮುಂದಿನ ಸಮ್ಮೇಳನಗಳಲ್ಲಿ ದೋಷ ಸರಿಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಹೇಳಿದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net