

ದಾವಣಗೆರೆ: ಜಿಲ್ಲೆಯ ರೈತರಿಗಾಗಿ ಸಮಗ್ರ ಯೋಜನೆ ರೂಪಿಸುವ ಚಿಂತನೆ ನಡೆದಿದೆ. ಈ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಭೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಎಸ್.ಎಸ್. ಮಲ್ಲಿಕಾರ್ಜುನ ಅವರ 57ನೇ ಜನ್ಮ ದಿನಾಚರಣೆ ಹಾಗೂ ದಾವಣಗೆರೆ ಉತ್ತರ- ದಕ್ಷಿಣ ಕ್ಷೇತ್ರದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯ ಕೆರೆಗಳನ್ನು ತುಂಬಿಸಬೇಕಿದೆ. ಕೆರೆಗಳು ಒಮ್ಮೆ ಕೋಡಿ ಬಿದ್ದರೂ ಎಂತಹ ಬರಗಾಲ ಬಂದೂ ನಿಭಾಯಿಸಬಹುದು. ಈ ನಿಟ್ಟಿನಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಬೇಕಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಮಳೆಯಾಗುವುದಿಲ್ಲ ಎಂಬ ಆಪಾದನೆ ಇತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು ಭದ್ರಾ ಜಲಾಶಯ ಎರಡೆರಡು ಬಾರಿ ಭರ್ತಿಯಾಗಿದೆ. ಎಲ್ಲರಲ್ಲೂ ನಗುಮುಖದ ವಾತಾವರಣ ಹೀಗೆಯೇ ಇರಲಿ ಎಂದು ಆಶಿಸಿದರು.
ದಾವಣಗೆರೆ ನಗರದಲ್ಲಿ ಗುಣಮಟ್ಟದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣವಾಗಿದ್ದು ಪಾಲಿಕೆಗೆ ನಿರ್ವಹಣೆಯ ಹಣ ಉಳಿತಾಯ ನನ್ನ ಅವಧಿಯಲ್ಲಿ ಆಗಿದೆ. ಎಂಥಹ ಮಳೆ ಬಂದರೂ ಪ್ರವಾಹವಾಗಿ ಹಾನಿಯಾದ ಉದಾಹರಣೆ ಇಲ್ಲ. ಹಿಂದೆ ಮಾಡಿದ್ದ ಅಭಿವೃದ್ಧಿ ಕೆಲಸಗಳು ಈಗ ಸಾಕ್ಷಿಯಾಗಿವೆ. ಹಿಂದೆ ಸಚಿವನಾಗಿದ್ದಾಗ ಆಗಿದ್ದಷ್ಟು ಕೆಲಸಗಳು ಈಗ ಆಗಿಲ್ಲ. ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಬೇಕಿದೆ ಎಂದರು.
ನನ್ನ ಪ್ರಯತ್ನದಿಂದಾಗಿ ದಾವಣಗೆರೆಗೆ ಸ್ಮಾರ್ಟ್‌ಸಿಟಿ ಯೋಜನೆ ಬಂತು. ಆದರೆ ಅದರಲ್ಲಿ ನಗರದಲ್ಲಿ ಉತ್ತಮ ಕೆಲಸಗಳಾಗಿಲ್ಲ. ಕುಂದುವಾಡ ಕೆರೆ ಅಭಿವೃದ್ಧಿಯೂ ಸೇರಿದಂತೆ ಕಳಪೆಯಾಗಿವೆ. ಬಿಜೆಪಿಯವರು ಕಳಪೆ ಕೆಲಸ ಮಾಡಿದ್ದಕ್ಕೆ ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ. ನಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದರು.
ಆನಗೋಡು ರೈತ ಹುತಾತ್ಮರ ಸ್ಮಾರಕಕ್ಕೆ ಎಪಿಎಂಸಿಯಿಂದ 60 ಲಕ್ಷ ರೂ. ಅನುದಾನ ಶೀಘ್ರವೇ ಬಿಡುಗಡೆಯಾಗುವ ಹಂತದಲ್ಲಿದೆ. 20 ಕೋಟಿ ರೂ. ವೆಚ್ಚದಲ್ಲಿ ಚಿಗಟೇರಿ ಆಸ್ಪತ್ರೆಯ ನೂತನ ವಿಭಾಗಕ್ಕೆ ಶೀಘ್ರ ಶಂಕುಸ್ಥಾಪನೆ ನಡೆಯಲಿದೆ. ಸಂಸದರ ಅನುದಾನ ಕುರುಬರು, ಮುಸ್ಲಿಮರು ಮೊದಲಾಗಿ ಎಲ್ಲ ಸಮುದಾಯಗಳಿಗೂ ತಲುಪಿಸುವಂತೆಯೂ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕಿದೆ. ಜಿಪಂ, ತಾಪಂ, ಪಾಲಿಕೆ ಇತರೆ ಎಲ್ಲ ಚುನಾವಣೆಗಳನ್ನು ನಾವು ಗೆಲ್ಲಬೇಕಿದೆ. ಈ ವಿಚಾರದಲ್ಲಿ ಕಾರ್ಯಕರ್ತರಾದ ನೀವೇ ಮುಖ್ಯ. ನೀವಿಲ್ಲದೇ ನಾವು ಇಲ್ಲ ಎಂದರು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ ಹಿಂದಿನ ಸಂಸದರು ಐದು ವರ್ಷವಾದರೂ ಸಂಸತ್ತಿನಲ್ಲಿ ಬಾಯಿ ತೆರೆಯಲಿಲ್ಲ. ಆದರೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂಸತ್ತಿನಲ್ಲಿ ಧೈರ್ಯವಾಗಿ ಮಾತನಾಡಿ ಗಮನ ಸೆಳೆದಿದ್ದಾರೆ. ದಾವಣಗೆರೆ ಬದಲಿಸುವ ಕಾರ್ಯಕರ್ತರ ವಿಶ್ವಾಸ ಈಡೇರಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವ ತೊಂದರೆ ಬಂದರೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಗಳಿಂದ ಬಡವರು, ಮಹಿಳೆಯರು ಹಾಗೂ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಹೀಗಾಗಿ ಜನರು ಕಾಂಗ್ರೆಸ್‌ಗೇ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ದಾವಣಗೆರೆ 30 ವರ್ಷದಿಂದ ಶಾಂತಿಯಿಂದ ಇದೆ. ಗಣೇಶನ ಹಬ್ಬದ ಹೆಸರಲ್ಲಿ ಕೋಮುಗಲಭೆಯಾಗಿದೆ. ಇದಕ್ಕೆ ಬಿಜೆಪಿಯ ಪ್ರಚೋದನೆಯ ಪ್ರೇರಣೆ ಹೆಚ್ಚಿದೆ. ಮಾಜಿ ಶಾಸಕ ರೇಣುಕಾಚಾರ್ಯ ಇಲ್ಲಿಗೆ ಬಂದು ಪ್ರಚೋದನೆ ನೀಡಿದ್ದು ಸರಿಯಲ್ಲ. ನಗರದ ಶಾಂತಿ ಕಾಪಾಡಬೇಕಾದ ಅಧಿಕಾರಿಗಳು ಇದಕ್ಕೆ ಆಸ್ಪದ ನೀಡಬಾರದು ಎಂದು ಸೂಚ್ಯವಾಗಿ ಹೇಳಿದರು.
ಪ್ರಭಾ ಮಲ್ಲಿಕಾರ್ಜುನ ಅವರು ಪ್ರಭಾವ ಬೀರಿ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಲಿದ್ದಾರೆ. ಹಿಂದಿನವರು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಒಳಿತು. ಬಾಯಿ ಬಿಟ್ಟರೆ ಅವರ ಹುಳುಕುಗಳನ್ನು ತೆಗೆದಿಡಬೇಕಾಗುತ್ತದೆ ಎಂದು ಮಾಜಿ ಸಂಸದ ಸಿದ್ದೇಶ್ವರ ಅವರನ್ನು ಪರೋಕ್ಷವಾಗಿ ಪ್ರತಿಕ್ರಿಯಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಿರೀಕ್ಷಿತ 1 ಲಕ್ಷದ ಬದಲಾಗಿ 25 ಸಾವಿರ ಮತಗಳ ಲೀಡ್ ಸಿಕ್ಕಿದ್ದು ನಮಗೆ ಎಚ್ಚರಿಕೆ ಗಂಟೆ. ಕಾಂಗ್ರೆಸ್ ಭದ್ರಕೋಟೆ ಉಳಿಸಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸಬೇಕು. ಕಾರ್ಯಕರ್ತರು ಪರಿಶ್ರಮ ಹಾಕಿ ಮತದಾರರ ಮನ ಒಲಿಸಬೇಕು. ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಹಾಗೂ ಎಸ್ಸೆಸ್ಸೆಂ ಅವರ ಕಾಲದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ನಡೆದಿದೆ. ದಾವಣಗೆರೆ ಭೂಪಟದಲ್ಲಿ ಗುರುತಿಸುವಂತಹ ಕೆಲಸಗಳಾಗಿವೆ. ರೈತರಿಗೆ ನೀರಾವರಿ ಕಲ್ಪಿಸಲು ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬರಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಾಪೂಜಿ ವಿದ್ಯಾಸಂಸ್ಥೆ ಮೂಲಕ ತರಬೇತಿ ನೀಡುವ ಆಲೋಚನೆ ಇದೆ ಎಂದರು.
ಎಸ್ಸೆಸ್ ಕೇರ್ ಟ್ರಸ್ಟ್‌ನಿಂದ ಒದಗಿಸುವ ಆರೋಗ್ಯ ಸೇವೆಯನ್ನು ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ. ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ನೀಗಬೇಕಿದೆ. ಮಹಿಳೆಯರು, ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಆದ್ಯತೆ ನೀಡಬೇಕಿದೆ ಎಂದರು.
ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಮಲತಾಯಿ ಧೋರಣೆ, ಐಐಟಿ, ಏಮ್ಸ್ ವಿಚಾರದ ಕುರಿತು ಪಕ್ಷದ ಎಲ್ಲ 9 ಮಂದಿ ಸಂಸದರೂ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದೇವೆ. ಸ್ಥಳೀಯ ಸಮಸ್ಯೆಗಳ ಜತೆಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಬೆಳಕು ಚೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಗಮನದಲ್ಲಿರಿಸಿ ಸಚಿವರ ಜನ್ಮದಿನ ಆಚರಿಸಲಾಗುತ್ತಿದೆ. ಎಸ್ಸೆಸ್ಸೆಂ ಭವಿಷ್ಯದ ನಾಯಕರು. ಅವು ರಾಜ್ಯದ ನಾಯಕತ್ವ ವಹಿಸಬೇಕು. ಅವರ ಹಿಂದೆ ಸಮುದಾಯ, ಹಣವಿದೆ. ನಾಯಕತ್ವದ ಗುಣವಿದೆ. ಹೀಗಾಗಿ ಅವರು ಮುಖ್ಯಮಂತ್ರಿ ಆಗಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಆಶಯ ವ್ಯಕ್ತಪಡಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ ಮಲ್ಲಿಕಾರ್ಜುನ್ ಜಾತಿಗೆ ಸೀಮಿತ ಆಗದೇ ಜನನಾಯಕರಾಗಿ ಬೆಳೆದಿದ್ದಾರೆ. ಜಗಳೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಮನೂರು ಕುಟುಂಬದ ಸಹಕಾರ ಅಗತ್ಯ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ ಎಸ್ಸೆಸ್- ಎಸ್ಸೆಸ್ಸೆಂ ಜೋಡಿ ಶಿಕ್ಷಣ, ರಾಜಕೀಯ, ಉದ್ಯಮ ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ಎಲ್ಲ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಿದೆ. ದಾವಣಗೆರೆಯ ಮತ್ತಷ್ಟು ಪ್ರಗತಿಗೆ ಮಲ್ಲಿಕಾರ್ಜುನ್ ಸಿಎಂ ಆಗಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ, ಎಸ್ಸೆಸ್ಸೆಂ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಡಿ.ಜಿ.ಶಾಂತನಗೌಡ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವ ನಾಯ್ಕ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಮಾಜಿ ಶಾಸಕರಾದ ಎಸ್.ರಾಮಪ್ಪ, ಟಿ. ಗುರುಸಿದ್ದನಗೌಡ, ಮೇಯರ್ ವಿನಾಯಕ ಪೈಲ್ವಾನ್, ಮುಖಂಡರಾದ ಎಂ.ನಾಗೇಂದ್ರಪ್ಪ, ಅಯೂಬ್ ಪೈಲ್ವಾನ್, ರೇವಣಸಿದ್ದಪ್ಪ, ಅನಿತಾಬಾಯಿ ಮಾಲತೇಶ್, ಎಂ.ಜಿ.ರಾಜಶೇಖರಪ್ಪ, ಡಿ.ಬಸವರಾಜ್, ಎಂ.ಜಿ.ಪುಟ್ಟಸ್ವಾಮಿ, ನಂದಿಗಾವಿ ಶ್ರೀನಿವಾಸ್, ಕೆ.ಜಿ.ಬಸವನಗೌಡ, ಹನಗವಾಡಿ ಕುಮಾರ್, ಚಮನ್‌ಸಾಬ್, ಎಸ್. ಮಲ್ಲಿಕಾರ್ಜುನ್, ಕೆ.ಜಿ.ಶಿವಕುಮಾರ್, ಮಾಗಾನಹಳ್ಳಿ ಪರಶುರಾಂ ಇತರರಿದ್ದರು.