

ಡಿ.ಎಂ.ಮಹೇಶ್, ದಾವಣಗೆರೆ:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಆದರೆ, ಮಹಿಳೆಯರ ಸುರಕ್ಷತೆ, ಸಮಾನತೆ ಹಾಗೂ ಶೈಕ್ಷಣಿಕ ಜಾಗೃತಿ ಮೂಡಿಸಲು ಹರಿಯಾಣ ರಾಜ್ಯದ ಬಾಲಕಿ ಸಾನಿಯಾ ಪಾಂಚಾಲ್, ಕಾಶ್ಮೀರದ ಲಾಲ್‌ಚೌಕ್‌ನಿಂದ ಕನ್ಯಾಕುಮಾರಿವರೆಗೆ ಓಟದ ಅಭಿಯಾನದೊಂದಿಗೆ ಗಮನ ಸೆಳೆದಿದ್ದಾಳೆ.
ಹರಿಯಾಣ ರಾಜ್ಯದ ಸೋನಿಪತ್ ಜಿಲ್ಲೆಯ ರುಕಿ ಗ್ರಾಮವಾಸಿ, ಹದಿನೈದರ ಹರೆಯದ ಸಾನಿಯಾ, ಸದ್ಯಕ್ಕೆ ರಾಜಸ್ಥಾನದ ರೋಯಲ್ ಸೈನಿಕ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಶಾಲಾ ಹಂತದಲ್ಲಿ ಓಟಗಾರ್ತಿಯಾಗಿ ಮಿಂಚಿದ್ದ ಬಾಲಕಿ ಇದೀಗ ಇದೇ ವರಸೆಯಲ್ಲಿ ಜಾಗೃತಿ ನಡೆಸುತ್ತಿದ್ದಾಳೆ.
ಡಿಸೆಂಬರ್ 13ರಿಂದ ಕಾಶ್ಮೀರದಿಂದ ಓಟ ಶುರು ಮಾಡಿದ ಬಾಲಕಿ, ಕರ್ನಾಟಕ ರಾಜ್ಯ ತಲುಪಿದ್ದು ಕಳೆದ 80 ದಿನ ಕ್ರಮಿಸುವ ಮೂಲಕ ಭಾನುವಾರ ಚಿತ್ರದುರ್ಗದ ಗಡಿಭಾಗ ತಲುಪಿದ್ದಾಳೆ. ದಿನಕ್ಕೆ 50 ಕಿ.ಮೀ.ನಂತೆ ಓಟದ ಗುರಿ ಮುಂದುವರಿದಿದೆ. ಬಿಸಿಲು-ಮಳೆಗೆ ಜಗ್ಗದೇ ಬಾಲಕಿ ಹೆಜ್ಜೆ ಹಾಕುತ್ತಿದ್ದಾಳೆ.
ಸಾನಿಯಾ ಓಟಕ್ಕೆ ಹರಿಯಾಣದ ಸರ್ಕಾರ ನೆರವು ನೀಡಿದೆ. ಬಾಲಕಿ ಓಡುತ್ತ ವಿಶ್ರಾಂತಿ ಪಡೆದಾಗ ಆಕೆಗೆ ಊಟೋಪಚಾರಕ್ಕಾಗಿ ರಾಜಸ್ಥಾನದ ಶಾಲಾಡಳಿತ ಮಂಡಳಿಯಿಂದ ಕಾರಿನ ಸಹಕಾರ ಒದಗಿದೆ. ಕಾರಿನ ಮುಂಭಾಗ ರಾಷ್ಟ್ರಧ್ವಜವಿದೆ. ಅದರ ಸುತ್ತಲೂ ಪ್ರಧಾನಿ ನರೇಂದ್ರ ಮೋದಿ, ಭಗತ್‌ಸಿಂಗ್, ಸುಖ್‌ದೇವ್, ಪಿ.ಟಿ.ಉಷಾ ಮೊದಲಾದವರ ಭಾವಚಿತ್ರ ಅಂಟಿಸಲಾಗಿದೆ.
ಮಹಿಳೆಯರು ಸಮಾಜದಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ. ಇಂತಹ ಸ್ತ್ರೀಶಕ್ತಿ ಪರಿಚಯ ಹಾಗೂ ಬೇಟಿ ಪಢಾವೋ ಬೇಟಿ ಬಚಾವೋ ಜಾಗೃತಿ ಮೂಡಿಸಲು ಈ ಓಟ ನಡೆಸುತ್ತಿದ್ದೇನೆ. ಸೈನಿಕರು, ಭಗತ್‌ಸಿಂಗ್ ಇತರರ ದೇಶಸೇವೆಯ ನೆನಪೇ ಓಟಕ್ಕೆ ಪ್ರೇರಣೆಯಾಗಿದೆ ಎನ್ನುತ್ತಾಳೆ ಸಾನಿಯಾ.
ಕೆಲವೆಡೆ ಪಾದಗಳಲ್ಲಿ ಸಮಸ್ಯೆಯಾಗಿದ್ದರೂ ಅಲ್ಲಲ್ಲಿ ತಂಗಿದ್ದು ಯಾತ್ರೆ ನಡೆಸಿದ್ದೇನೆ. ಬಾಲ್ಯದಲ್ಲೇ ಏನಾದರೂ ದೊಡ್ಡ ಕೆಲಸ ಮಾಡಬೇಕು. ಹೀಗಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ದೊಡ್ಡವಳಾದ ನಂತರದಲ್ಲಿ ಬೇರೆ ಬೇರೆ ವಿಚಾರಗಳಲ್ಲಿ ಭಾರತವನ್ನೇ ಸಂಚಾರ ಮಾಡಬೇಕಿದೆ ಎಂದು ತನ್ನಾಸೆ ಹೇಳಿಕೊಂಡಳು.
ಸುರೇಶ್ ಪಾಂಚಾಲ್ ಮಗಳ ಸಾಧನೆಗಾಗಿ ನಿತ್ಯದ ವೆಲ್ಡಿಂಗ್ ಕೆಲಸ ಸ್ಥಗಿತಗೊಳಿಸಿ ಆಕೆಯ ಹಿಂಬದಿ ಕಾರಿನಲ್ಲಿ ತೆರಳುತ್ತಿದ್ದಾರೆ. ಅವರೊಂದಿಗೆ ಪತ್ನಿ ಊಸಾ, ಒಬ್ಬ ಶಿಕ್ಷಕ, ಇಬ್ಬರು ಬಾಲಕಿಯರು ಸಹ ಪ್ರಯಾಣ ಬೆಳೆಸಿದ್ದಾರೆ.
ಹೋದೆಡೆಯಲ್ಲೆಲ್ಲ ಭಾಷೆಯ ಸಮಸ್ಯೆ ಇದ್ದರೂ ಜನರು ಉಳಿದುಕೊಳ್ಳಲು ಸಹಕಾರ ನೀಡುತ್ತಿರುವುದೇ ಖುಷಿ. ಹೊರಗಡೆ ಊಟ ತರಿಸಿಕೊಂಡು ಸೇವಿಸಿ ಮಗಳಿಗೆ ಕೊಡಿಸಿ ಓಟಕ್ಕೆ ಸಹಕಾರ ನೀಡುತ್ತಿದ್ದೇವೆ. 121 ದಿನದಲ್ಲಿ ಓಟದ ಗುರಿ ಇದ್ದು, 102 ದಿನಗಳಲ್ಲಿ ಮಗಳು ಕನ್ಯಾಕುಮಾರಿ ತಲುಪುವ ನಿರೀಕ್ಷೆ ಇದೆ ಎನ್ನುತ್ತಾರೆ ತಂದೆ ಸುರೇಶ್ ಪಾಂಚಾಲ್.