ಆರೆಸ್ಸೆಸ್ ಅನ್ಯಧರ್ಮಗಳ ವಿರೋಧಿಯಲ್ಲ

1001240470.jpg
Published on

ದಾವಣಗೆರೆ: ಸನಾತನ ಧರ್ಮ ಮೌಲ್ಯಗಳು, ಹಿಂದು ಧರ್ಮ- ಸಂಸ್ಕೃತಿ ಸಂರಕ್ಷಣೆಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದೆಯೇ ಹೊರತಾಗಿ ಅನ್ಯಧರ್ಮಗಳ ವಿರೋಧಿಸಲಿಕ್ಕಾಗಿ ಅಲ್ಲ ಎಂದು ದೇವಸ್ಥಾನ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ್ ಸ್ಪಷ್ಟಪಡಿಸಿದರು.

ಇಲ್ಲಿನ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆರೆಸ್ಸೆಸ್‌ನ ನಗರ ಘಟಕದಿಂದ ಹಮ್ಮಿಕೊಂಡಿದ್ದ, ಸಂಘ ಶತಾಬ್ಧಿ ಪಥಸಂಚಲನದ ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು.

ಆರೆಸ್ಸೆಸ್ ಮುಸ್ಲಿಮರು, ಕ್ರೈಸ್ತರ ವಿರೋಧಿ ಎಂಬ ಆಪಾದನೆ ಸರಿಯಲ್ಲ. ಕರೊನಾ ಕಾಲಘಟ್ಟದಲ್ಲಿ ಮೌಲ್ವಿಗಳ ಮಕ್ಕಳು ಮೃತಪಟ್ಟಾಗ ಅವರ ಶವಸಂಸ್ಕಾರ ಮಾಡಿದವರು ನಮ್ಮ ಸ್ವಯಂಸೇವಕರು. ಜಾತಿ-ಮತ, ಪಕ್ಷ ಭೇದ ಮರೆತು ಸಂಘ ಕೆಲಸ ಮಾಡಿದೆ. ಈ ದೇಶದಲ್ಲಿ ಮುಸ್ಲಿಂ, ಕ್ರೈಸ್ತರು ಜನ್ಮ ತಾಳದಿದ್ದರೂ ಆರೆಸ್ಸೆಸ್ ಬೆಳೆದಿರುತ್ತಿತ್ತು. ಸಮಾಜದ ಕೆಲಸ ಮಾಡುತ್ತಲೇ ಇರುತ್ತಿತ್ತು ಎಂದೂ ಹೇಳಿದರು.

1962ರ ಭಾರತ-ಚೀನಾ ಯುದ್ಧದ ವೇಳೆ ಭಾರತೀಯ ಸೈನಿಕರಿಗೆ ಮದ್ದು-ಗುಂಡು, ಆಹಾರ ಪೂರೈಸುವ ಕೆಲಸ ಮಾಡಿದ್ದೇ ಆರೆಸ್ಸೆಸ್. ಒಂದು ಕಾಲದಲ್ಲಿ ಭಾರತದಲ್ಲಿ ಭಗವಾಧ್ವಜ ಹಾರಾಡಲು ಜಾಗ ನೀಡುವುದಿಲ್ಲ ಎಂದಿದ್ದ ಪ್ರಧಾನಿ ಜವಾಹರ್‌ಲಾಲ್ ಪಂಡಿತ್ ಅವರು ನೀಡಿದ ಆಹ್ವಾನದಂತೆ 1963ರಲ್ಲಿ ದೆಹಲಿಯ ಗಣರಾಜ್ಯೋತ್ಸವದಲ್ಲಿ 2560 ಆರೆಸ್ಸೆಸ್ ಸ್ವಯಂಸೇವಕರು ಭಾಗಿಯಾಗಿದ್ದನ್ನು ಇಡೀ ಜಗತ್ತು ಗಮನಿಸಿದೆ ಎಂದರು.

ಹಿಂದು ಸಮಾಜದಲ್ಲಿ ಹುಟ್ಟಿದವರೇ ಸಂಘವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ವಿಚಾರವಾದಿ ಎಂದುಕೊಂಡ ವಿಕಾರವಾದಿಗಳು, ಕಮ್ಮಿ ನಿಷ್ಠೆಯುಳ್ಳ ಕಮ್ಯುನಿಸ್ಟರು ನಮ್ಮ ನಡುವಿದ್ದಾರೆ. ದೂರದಲ್ಲಿ ನಿಂತು ಹಳದಿ ಕನ್ನಡಕ ಧರಿಸಿ ಸಂಘವನ್ನು ನೋಡುತ್ತಿದ್ದಾರೆಯೇ ಹೊರತಾಗಿ ಸಂಘದ ಒಳಗೆ ಇಳಿದಿಲ್ಲ. ಅಜ್ಞಾನ- ಅಂಧಕಾರದಿಂದ ಮಾತನಾಡುವವರನ್ನೂ ಸಂಘದ ತೆಕ್ಕೆಗೆ ಕರೆತರುವ ಆತ್ಮವಿಶ್ವಾಸ ಆರೆಸ್ಸೆಸ್‌ಗೆ ಇದೆ ಎಂದು ಹೇಳಿದರು.

ಮಹಾತ್ಮಗಾಂಧಿಯನ್ನು ಆರೆಸ್ಸೆಸ್‌ನವರು ಕೊಂದರು ಅಂದು ಆಪಾದಿಸಲಾಗುತ್ತದೆ. ದೇಶವಿಭಜನೆ ವೇಳೆ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ 1500 ಆರೆಸ್ಸೆಸ್ ಸ್ವಯಂಸೇವಕರನ್ನು 1947ರ ಸೆ. 15ರಂದು ದೆಹಲಿಯಲ್ಲಿ ಸಂಪರ್ಕಿಸಿದ ಮಹಾತ್ಮ ಗಾಂಧೀಜಿ ‘ನನ್ನ ಕೈಯಲ್ಲಿ ಸಾಧ್ಯವಾಗದ ಜಾತ್ಯತೀತ ಸಮಾಜದ ಕನಸು ನನಸು ಮಾಡುವ ಸಾಮರ್ಥ್ಯ ಆರೆಸ್ಸೆಸ್‌ಗಿದೆ’ ಎಂದು ಉಲ್ಲೇಖಿಸಿದ್ದಾರೆ ಎಂದರು.

ಹಿಂದು ಸಂಘಟನೆ ಮೂಲಕ ಜಗತ್ತಿನ ಕಲ್ಯಾಣ, ದೇಶಭಕ್ತಿಯ ಪ್ರಗತೀಕರಣವೇ ಸಂಘದ ಗುರಿಯಾಗಿದೆ. ದಂಡಿಯಾತ್ರೆ ಮಾತ್ರವಲ್ಲದೆ ಸ್ವಾತಂತ್ರೃ ಚಳವಳಿಗೆ ಕರೆ ಬಂದಾಗೆಲ್ಲ ಕೆಲಸ ಮಾಡಿದೆ. ಆರೆಸ್ಸೆಸ್ ಅಗ್ನಿಯಲ್ಲಿನ ಚಿನ್ನವಿದ್ದಂತೆ. ಬೆಂಕಿಗೆ ಬಿದ್ದಷ್ಟೂ ಚಿನ್ನ ಹೊಳಪಾಗುತ್ತದೆ. ಆರೆಸ್ಸೆಸ್ ವಿರೋಧಿಸುತ್ತಿದ್ದ ಅನೇಕರಿಗೆ ಸಂಘ ಏನೆಂಬುದು ಇತ್ತೀಚೆಗೆ ಅರ್ಥವಾಗುತ್ತಿದೆ ಎಂದು ಹೇಳಿದರು.

ಹಿಂದುತ್ವ ಎಂಬುದು ಜೀವನ ಪದ್ಧತಿ. ಇದು ಇರುವವರೆಗೆ ಭಾರತ ಅಸ್ತಿತ್ವದಲ್ಲಿ ಇರಲಿದೆ. ಜಗತ್ತಿನ ಕಲ್ಯಾಣವಾಗಲು ಹಿಂದುತ್ವ ಬೇಕು. ಜಗತ್ತು ಉಳಿಸಬೇಕಾದರೆ ಭಾರತ ಹಿಂದು ರಾಷ್ಟ್ರವಾಗಬೇಕು ಎಂದೂ ಆಶಿಸಿದರು.

ನೂರು ವರ್ಷದ ಹಿಂದೆ ಆರೆಸ್ಸೆಸ್ ಸಂಘಟನೆ ಈಗಲೂ ಒಂದೇ ರೂಪದಲ್ಲಿದೆ. ಇಲ್ಲಿನ ಅಧಿಕಾರದಲ್ಲಿ ಸ್ಪರ್ಧೆ, ವಿರೋಧವಿಲ್ಲ. ಎಲ್ಲ ಜಾತಿ- ಮತ ಪಕ್ಷದವರಿಗೂ ಅವಕಾಶ ನೀಡಿದೆ. ಸ್ವದೇಶಿ ಭಾವ, ಕುಟುಂಬ ಪ್ರಬೋಧನೆ, ಸಾಮರಸ್ಯ, ನಾಗರಿಕ ಸುರಕ್ಷೆ ಹಾಗೂ ಜಲ ಮತ್ತು ಪರಿಸರ ಹೀಗೆ ಪಂಚ ಪರಿವರ್ತನೆಯತ್ತ ಹೆಜ್ಜೆ ಇಡುತ್ತಿದೆ. ಜನವರಿಯಲ್ಲಿ ಹಿಂದು ಸಮಾಜೋತ್ಸವ, ಮನೆ ಮನೆಗೆ ಸಂಘ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ, ಆಫ್ಟಿಕಲ್ ಪ್ಯಾರಡೈಸ್ ಮಾಲೀಕ ಅಜಿತ್ ಓಸ್ವಾಲ್, ಸಂವೇದ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎನ್. ಪಿ. ಸುರೇಂದ್ರನಾಥ್ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಬಂಬೂಬಜಾರ್‌ನ ಪಾಂಡುಂಗ ದೇವಸ್ಥಾನ ಆವರಣದಿಂದ ಹಾಗೂ ಎಂಸಿಸಿ ಬಿ ಬ್ಲಾಕ್‌ನ ವಾಟರ್ ಟ್ಯಾಂಕ್ ಆವರಣ ಎರಡೂ ಕಡೆಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net