

ದಾವಣಗೆರೆ: ನ್ಯಾಮತಿ ತಾಲೂಕು ಗೋವಿನಕೋವಿ ಬಳಿ ಬುಧವಾರ ನಡೆದ ರೌಡಿಶೀಟರ್ ಆಂಜನೇಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ಸುನೀಲ್, ವೆಂಕಟೇಶ್, ಅಭಿಲಾಷ್, ಪವನ್ ಬಂಧಿತರು. ಶಿಗ್ಗಾವಿಯಲ್ಲಿ ಅವರು ಸೆರೆ ಸಿಕ್ಕಿದ್ದಾರೆ ಎಂದು ತಿಳಿಸಿದರು.
ಆರೋಪಿಗಳು ಶರಣಾಗಿದ್ದಾರೆ ಎನ್ನುವುದರ ಬಗ್ಗೆ ತಮಗೆ ಗೊತ್ತಿಲ್ಲ, ಆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಹರಿಹರ ತಾಲೂಕು ಭಾನುವಳ್ಳಿಯ ಆಂಜನೇಯ ಮತ್ತು ಮಧು ಕೆಲ ತಿಂಗಳು ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಗ್ರಾಮಕ್ಕೆ ಮರಳುವಾಗ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ ಮಧು ಚಿಕಿತ್ಸೆ ಪಡೆಯುತ್ತಿದ್ದಾನೆ.