

ದಾವಣಗೆರೆ: ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಕಡ್ಡಾಯವಾಗಿ ಸರತಿ ಮಾರ್ಗದ ನಿಯಮ ಅನುಸರಿಸಬೇಕು. ಇಲ್ಲವಾದಲ್ಲಿ ಗಸ್ತು ವಾಹನದ ಮೂಲಕ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಲ್ಲಿ ದಿನಕ್ಕೊಂದು ಸಾವಿನ ಪ್ರಕರಣ ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಅಪಘಾತ ಪ್ರಮಾಣ ತಗ್ಗಿಸಲು ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿದರು.
ರಸ್ತೆ ಅಪಘಾತಗಳನ್ನು ಅವಲೋಕಿಸಿದಾಗ 2022ನೇ ವರ್ಷದಲ್ಲಿ 308, 2023 ರಲ್ಲಿ 293 ಮತ್ತು 2024 ರಲ್ಲಿ 283 ಮಂದಿ ಮರಣ ಹೊಂದಿದ್ದು ಕಳೆದ ಮೂರು ವರ್ಷಗಳಲ್ಲಿ ಸರಾಸರಿ 57ರಷ್ಟು ಅಪಘಾತ ಪ್ರಮಾಣ ಇಳಿಮುಖವಾಗಿದೆ. ಆದರೂ ಅಪಘಾತ ಪ್ರಮಾಣ ತೀವ್ರವಾಗಿ ತಗ್ಗಿಸಲು ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಸಭೆ ಕರೆದು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು ಒಂದೇ ಸ್ಥಳದಲ್ಲಿ ಹೆಚ್ಚು ಅಪಘಾತವಾದ ಸ್ಥಳಗಳಲ್ಲಿ ರಸ್ತೆ ಅಭಿವೃದ್ದಿ, ವೇಗ ನಿಯಂತ್ರಕ, ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ. ವಾಹನ ಚಾಲಕರು ಅಜಾಗರೂಕತೆಯಿಂದ ವಾಹನ ಚಲಾಯಿಸುವುದು, ರಸ್ತೆ ನಿಯಮಗಳನ್ನು ಪಾಲನೆ ಮಾಡದಿರುವುದು ಕಂಡು ಬಂದಿದೆ ಎಂದು ಹೇಳಿದರು.
ಹೆದ್ದಾರಿ ಫಲಕ ತೆರವಿಗೆ ಸೂಚನೆ;
ಲೋಕೋಪಯೋಗಿ ಇಲಾಖೆಯಿಂದ ಖಾಸಗಿ ಹೆದ್ದಾರಿ ಫಲಕ, ಜಾಹಿರಾತು ಫಲಕಗಳನ್ನು ರಸ್ತೆಗಳಲ್ಲಿ ಅಳವಡಿಸಲು ನೀಡಿದ್ದ ಅನುಮತಿ ರದ್ದುಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಜಾಹಿರಾತು ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ನೂತನ ಬೈಲಾ ರಚಿಸಿ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಪರವಾನಗಿ ಪಡೆದು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅಳವಡಿಸಲು ಹೊಸ ಮಾರ್ಗಸೂಚಿ ಸಿದ್ದಪಡಿಸಲಾಗುತ್ತದೆ. ಆದರೆ ಲೋಕೋಪಯೋಗಿ ಇಲಾಖೆಯವರು ರಸ್ತೆಗಳಲ್ಲಿ ಅಳವಡಿಸಲು ಎನ್‌ಒಸಿ ಪಡೆಯಲು ಅವಕಾಶವಿದ್ದು ಪರವಾನಗಿ ನೀಡುವ ಪ್ರಾಧಿಕಾರವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ಕಶ ಹಾರ್ನ್, ಎಲ್ಇಡಿ ಬಲ್ಬ್ ನಿಷಿದ್ಧ
ಮೋಟಾರು ವಾಹನ ಕಾಯ್ದೆಯನ್ವಯ ವಾಹನಗಳಲ್ಲಿ ಕರ್ಕಶ ಹಾರ್ನ್ ಹಾಗೂ ಹೆಚ್ಚಿನ ಬೆಳಕಿಗಾಗಿ ಎಲ್ಇಡಿ ಬಲ್ಬ್ ಬಸಲು ಅವಕಾಶ ಇಲ್ಲ. ಅನೇಕ ವಾಹನಗಳ ಹಿಂದೆ ವಿವಿಧ ಭಾವಚಿತ್ರಗಳ ಅಳವಡಿಕೆ ಮಾಡಿಕೊಂಡಿದ್ದು ಸಮೀಪದ ವಾಹನಗಳು ಕಾಣದೇ ಸಾಗಿ ಅಪಘಾತಗಳು ಸಂಭವಿಸುತ್ತವೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮೋಟಾರ್ ವಾಹನ ಕಾಯ್ದೆಯ ನಿಯಮಾನುಸಾರ ಪಾಲನೆ ಮಾಡದ ವಾಹನಗಳ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ರಸ್ತೆ ಒತ್ತುವರಿ ತೆರವಿಗೆ ಕ್ರಮ; ಕೆಲವೆಡೆ ಲೋಕೋಪಯೋಗಿ ರಸ್ತೆ ಮತ್ತು ನಗರ, ಪಟ್ಟಣ ಪ್ರದೇಶದಲ್ಲಿ ರಸ್ತೆ ಒತ್ತುವರಿ ಮಾಡಿರುವುದರಿಂದ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಒತ್ತುವರಿ ರಸ್ತೆಗಳನ್ನು ತೆರವು ಮಾಡಬೇಕಾಗಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಂಟಿ ಕೃಷಿ ಅಧಿಕಾರಿ ಶ್ರೀನಿವಾಸ್ ಚಿಂತಾಲ್ ಹಾಗೂ ಇತರೆ ಇಲಾಖೆ ಅಧಿಕಾರಿಗಳಿದ್ದರು.
-----