

ದಾವಣಗೆರೆ: ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡುವವರೆಗೂ ಆವರಗೊಳ್ಳದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪಾಲಿಕೆಯಿಂದ ಕಸ ಹಾಕಬಾರದು. ಇಲ್ಲವೇ ಈ ಘಟಕ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಆವರಗೊಳ್ಳದ ತ್ಯಾಜ್ಯ ಸುರಿಯುವ ಡಂಪಿಂಗ್ ಯಾರ್ಡ್ಗೆ 10 ದಿನದ ಹಿಂದೆ ಬೆಂಕಿ ಬಿದ್ದರೂ ನಗರಪಾಲಿಕೆ ಗಮನ ಹರಿಸಿಲ್ಲ. ಸಂಸ್ಕರಿಸದೆಯೇ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದರಿಂದ ಯಾರ್ಡ್ ಸಮೀಪದ ಅಡಕೆ, ತೆಂಗು, ಭತ್ತದ ಮೇಲೆ ಬೂದಿ ಬಿದ್ದು ಬೆಳೆಗಳು ಕಾಳು ಕಟ್ಟಲಾಗದ ಸ್ಥಿತಿ ತಲುಪಿದ್ದು, ಸಂಪೂರ್ಣ ನಾಶವಾಗಿವೆ ಎಂದು ಗ್ರಾಮಸ್ಥರು ಕಿಡಿ ಕಾರಿದರು.
ಬೆಂಕಿ ಹಚ್ಚಿದ್ದರಿಂದಾಗಿ ಹಾನಿಗೀಡಾದ ಬೆಳೆಗಳಿಗೆ ಪರಿಹಾರ ಒದಗಿಸಬೇಕು. ರಾತ್ರಿ ಹೊತ್ತು ಯಾರ್ಡ್ನಿಂದ ದುರ್ನಾತದ ಜತೆಗೆ ಸೊಳ್ಳೆ ಉತ್ಪತ್ತಿ ಹೆಚ್ಚಾಗಿದ್ದು ಗ್ರಾಮಸ್ಥರಲ್ಲಿ ಅಸ್ತಮಾ, ಜ್ವರ ಇತರೆ ರೋಗ ಬಾಧಿಸುತ್ತಿವೆ. ಹೆಚ್ಚಿದ ನಾಯಿಗಳ ಹಾವಳಿಯಿಂದ ರೈತರು ಹೊಲ-ಗದ್ದೆಗಳಿಗೆ ನೀರು ಹಾಯಿಸಲು ಹೋಗಲು ಭಯ ಪಡುವಂತಾಗಿದೆ ಎಂದು ದೂರಿದರು.
ಈ ತ್ಯಾಜ್ಯ ವಿಲೇವಾರಿ ಘಟಕವನ್ನು ಆವರಗೊಳ್ಳದಿಂದಲೇ ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲವೇ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ಕ್ರಮವಹಿಸಬೇಕು. ಅದರ ಹೊರತಾಗಿ ಯಾವುದೇ ಕಸವನ್ನು ಇಲ್ಲಿಗೆ ತರುವಂತಿಲ್ಲ ಎಂದು ಹೇಳಿದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಮಸ್ಯೆ ಆಲಿಸಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಧಾವಿಸಿದ ಎಡಿಸಿ ಎಸ್. ಸೈಯ್ಯದಾ ಆಫ್ರೀನ್ ಭಾನು, ಡಂಪಿಂಗ್ ಯಾರ್ಡ್ನಲ್ಲಿ ಬಿದ್ದಿರುವ ಬೆಂಕಿ ನಂದಿಸಲು ವ್ಯವಸ್ಥೆ ಮಾಡಲಾಗಿದೆ. ಹಾನಿಯಾಗಿರುವ ಬೆಳೆಯ ಸಮೀಕ್ಷೆ ನಡೆಸಿ ಪರಿಹಾರ ನೀಡಲಾಗುವುದು. ಆರೋಗ್ಯ ತಪಾಸಣೆ ನಡೆಸಲು ಡಿಎಚ್ಒಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ನೀತಿ ಸಂಹಿತೆ ಮುಗಿದ ಬಳಿಕ ಸಚಿವರೊಂದಿಗೆ ಚರ್ಚಿಸಿ ಈ ಘಟಕದ ಸ್ಥಳಾಂತರ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು. ನಿಮ್ಮ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಸಿದ್ಧವಿದೆ. ಪ್ರತಿಭಟನೆ ಹಿಂಪಡೆಯಬೇಕೆಂದು ಹೇಳಿದರು. ಎಡಿಸಿ ಮನವೊಲಿಕೆಗೆ ಶರಣಾದ ಗ್ರಾಮಸ್ಥರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೊನೆಗೊಳಿಸಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ 33 ಎಕರೆಯ ಡಂಪಿಂಗ್ಯಾರ್ಡ್ನಲ್ಲಿ ಎರಡು ದಶಕದಿಂದ ಹಸಿ ಮತ್ತು ಒಣ ಕಸ ಬೇರ್ಪಡಿಸದೇ ಇಲ್ಲಿ ಸುರಿಯಲಾಗಿದೆ. ಅಲ್ಲದೆ, ಇದನ್ನು ವೈಜ್ಞಾನಿಕವಾಗಿ ಸಂಷ್ಕರಣೆ ಮಾಡಿಲ್ಲ. ಆದ್ದರಿಂದ ಪದೇಪದೇ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಸರ್ಕಾರ ಇದರ ಶಾಶ್ವತ ಪರಿಹಾರಕ್ಕೆ 21 ಕೋಟಿ ರೂ. ಬಿಡುಗಡೆ ಮಾಡಿದೆ. ಹಸಿ ಮತ್ತು ಒಣ ಕಸವನ್ನು ಸಂಸ್ಕರಿಸಿ, ಸಿಮೆಂಟ್ ಮತ್ತು ಗೊಬ್ಬರ ತಯಾರಿಸಲು ಯಂತ್ರೋಪಕರಣ ಅಳವಡಿಸಲಾಗಿದ್ದು, ಟೆಂಡರ್ ಮುಗಿದ ತಕ್ಷಣವೇ ಸಂಸ್ಕರಣೆ ಆರಂಭಿಸಲಾಗುವುದು ಎಂದು ಹೇಳಿದರು.
ಈ ವೇಳೆ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಸದಸ್ಯರಾದ ಎಸ್.ಟಿ.ವೀರೇಶ್, ಎಚ್.ಶಿವಾನಂದ್ ಮತ್ತಿತರರು ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಪ್ರತಿಭಟನೆಯಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮುಖಂಡ ಬಿ.ಎಂ. ಷಣ್ಮುಖಯ್ಯ, ಜಿ.ಟಿ. ವೀರಣ್ಣ ಕೆ.ಸಿ. ಸಿದ್ದೇಶ್, ಶಿವಪುತ್ರಪ್ಪ, ಬೆಲ್ಲದ ಚಂದ್ರಪ್ಪ, ಪಿ. ವೀರಭದ್ರಪ್ಪ, ಎಸ್.ವೀರಯ್ಯ, ದಳಪತಿ ವೀರಯ್ಯ,, ದೊಡ್ಡಪ್ಪ, ಅಂಗಡಿ ವೀರಣ್ಣ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.