

ದಾವಣಗೆರೆ: ನಗರದ ಅಖ್ತರ್ ರಜಾ ವೃತ್ತದಿಂದ ಸರ್ ಮಿರ್ಜಾ ಇಸ್ಮಾಯಿಲ್ ನಗರದ ಮೂಲಕ ಮಾಗಾನಹಳ್ಳಿ ರಸ್ತೆಯವರೆಗೆ ಹಾದು ಹೋಗಿರುವ 120 ಅಡಿ ಅಗಲದ ವರ್ತುಲ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ದೂಡಾ 5 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಗಾನಹಳ್ಳಿ ರಸ್ತೆಯಲ್ಲಿ ಶನಿವಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
30 ವರ್ಷದಿಂದ ಈ ಭಾಗದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ ಜನರನ್ನು ಪಾಲಿಕೆಯಿಂದ ಸ್ಥಳಾಂತರಿಸಲಾಗಿತ್ತು. ಈ ಹಿಂದೆಯೇ ಕಾಮಗಾರಿ ನಡೆಯಬೇಕಿದ್ದು ದೂಡಾ ಅಧಿಕಾರಿಗಳ ನೆವದಿಂದ ಆರು ತಿಂಗಳು ತಡವಾಗುತ್ತಿದೆ. ಇನ್ನು ಸ್ಥಳೀಯ ಜನರ ಸಮಸ್ಯೆ ನಿವಾರಣೆ ಆದಂತಾಗಿದೆ ಎಂದು ಹೇಳಿದರು.
ವರ್ತುಲ ರಸ್ತೆ ನಿರ್ಮಾಣ ಆದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವಾಗಲಿದೆ. ಆದಷ್ಟು ತ್ವರಿತವಾಗಿ ಮತ್ತು ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ್ದು ಮಾಧ್ಯಮಗಳ ಸಮೀಕ್ಷೆ ಗೂ ಮೀರಿ ಫಲಿತಾಂಶ ಬಂದಿದೆ. ಜನರು ಕಾಂಗ್ರೆಸ್‌ಗೆ ಒಲವು ತೋರಿದ್ದಾರೆ ಎಂದು ಹೇಳಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮೇಯರ್ ಕೆ.ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ದೂಡಾ ಸದಸ್ಯರಾದ ವಾಣಿ ಬಕ್ಕೇಶ್, ಎಂ.ಮಂಜುನಾಥ, ಜಾಕೀರ್ ಅಲಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ್, ಸವಿತಾ ಗಣೇಶ್ ಹುಲ್ಮನಿ, ಆಶಾ ಉಮೇಶ್, ಸದಸ್ಯರಾದ ಎ.ಬಿ.ರಹೀಂಸಾಬ್, ಸಯೀದ್ ಚಾರ್ಲಿ, ಕಬೀರ್ ಅಲಿ, ಸುರಭಿ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ಎಸ್.ಎಲ್.ಆನಂದಪ್ಪ , ದುಡಾ ಆಯುಕ್ತ ಹುಲ್ಲುಮನಿ ತಿಮ್ಮಣ್ಣ, ಅಧಿಕಾರಿ ವರ್ಗದವರಿದ್ದರು.
ಉಪಚುನಾವಣೆಗಳ ಗೆಲುವಿನ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ನಂತರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
---