

ದಾವಣಗೆರೆ: ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ನಾವು 20 ವರ್ಷ ಹಿಂದಿದ್ದೇವೆ. ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಶಿಕ್ಷಣದಲ್ಲಿ ಸಂಶೋಧನೆಗಳಿಗೆ ಪ್ರಾಮುಖ್ಯ ನೀಡಲಾಗುತ್ತಿಲ್ಲ ಎಂದು ಮಾಜಿ ಸಚಿವ ಜಿ.ಸಿ. ಮಾಧುಸ್ವಾಮಿ ವಿಷಾದಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಮೂಲ ವಿಜ್ಞಾನ ಇಲ್ಲವೇ ಇಲ್ಲ. ಕೆಲವು ಸಂಯೋಜಿತ ಕೋರ್ಸ್ ಹೊರತಾಗಿ ಸಂಶೋಧನಾಧಾರಿತ ಕೋರ್ಸ್‌ಗಳ ಕೊರತೆ ಇದೆ. ಸಂಶೋಧನೆಗಳೇ ನಡೆಯದೆ, ತಂತ್ರಜ್ಞಾನ ಸಮೃದ್ಧಿಯಾಗದೆ ದೇಶದ ಪ್ರಗತಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.
ಬೆಂಗಳೂರು, ತುಮಕೂರು, ಮೈಸೂರು ಮೊದಲಾದ ನಗರ ಪ್ರದೇಶದವರು ವಿಶೇಷ ತರಬೇತಿ ಪಡೆದು ನೀಟ್ ಪರೀಕ್ಷೆ ಎದುರಿಸುತ್ತಿದ್ದಾರೆ. ಆದರೆ ದ್ವಿತೀಯ ಪಿಯುನಲ್ಲಿ ಉತ್ತಮ ಅಂಕ ಪಡೆದ ಗ್ರಾಮಾಂತರ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ದಕ್ಕಿಸಿಕೊಳ್ಳಲು ಆಗುತ್ತಿಲ್ಲ ಎಂದು ವಿಷಾದಿಸಿದರು.
ಎಲ್ಲರಿಗೂ ಸಮಾನ ಅವಕಾಶ ನೀಡುವುದೇ ಸಮಾಜವಾದದ ಪರಿಕಲ್ಪನೆ. ಆದರೆ ನೀಟ್ ವಿಚಾರದಲ್ಲಿ ಇದು ಸಾಧ್ಯವಾಗಿಲ್ಲ. ನಾನು ನೀಟ್ ಪರೀಕ್ಷೆಯನ್ನು ವಿರೋಧಿಸುತ್ತಿಲ್ಲ. ಆದರೆ ಹಳ್ಳಿ ಮಕ್ಕಳಿಗೆ ಮೂಲ ಸೌಕರ್ಯವಿಲ್ಲದೆ ಪರೀಕ್ಷೆ ಎದುರಿಸುವುದು ಅಸಾಧ್ಯ. ನೀಟ್, ಸಿಇಟಿ ಪರೀಕ್ಷೆ ಬರೆಯಬೇಕಿದ್ದರೆ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಓದಿಸಲು ಪಾಲಕರು ಮುಂದಾಗಬೇಕು ಎಂದೂ ಕಿವಿಮಾತು ಹೇಳಿದರು.
ಇಂದು ಸಮಾಜಗಳು ನೀಡುವ ಪುರಸ್ಕಾರಗಳು ಮಕ್ಕಳು ಪಟ್ಟ ಶ್ರಮಕ್ಕೆ ಹೊರತಾಗಿ ಪ್ರತಿಭೆಗಲ್ಲ. ಮಗ್ಗಿಯೇ ಗೊತ್ತಿರದ ಮಕ್ಕಳಿಗೆ ಶಿಕ್ಷಕರು ಪೂರ್ಣ ಅಂಕ ಕೊಟ್ಟು ಪಾಲಕರನ್ನು ಖುಷಿಪಡಿಸುವ ವ್ಯವಸ್ಥೆ ನಡೆಯುತ್ತಿದೆ. ಸಭ್ಯತೆ, ವಿನಯತೆ ಹೆಸರಲ್ಲಿ ನಾವಿಂದು ಮಕ್ಕಳ ಶಕ್ತಿ ಕುಂದಿಸುತ್ತ ಬಂದಿದ್ದೇವೆ. ವಿದ್ಯಾರ್ಥಿಗಳು ಸ್ವಾವಲಂಬಿ ಬದುಕು ಹಾಗೂ ಶಕ್ತಿಶಾಲಿಯಾಗಿ ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು. ಶಿಕ್ಷಣ, ಉದ್ಯೋಗ ಪಡೆಯಲು ಸೀಮಿತ ಆಗಬಾರದು ಎಂದೂ ಹೇಳಿದರು.
ಅಂಬೇಡ್ಕರ್ ಆಶಯದಂತೆ ಯಾವುದೇ ಸಮಾಜದ ಉನ್ನತಿಗೆ ಅರಿವು, ಸಂಘಟನೆ ಹಾಗೂ ಹೋರಾಟ ಮುಖ್ಯ. ಸ್ಥಿತಿವಂತರಲ್ಲದವರನ್ನೂ ಗುರುತಿಸುವ ಕೆಲಸ ಆಗಬೇಕು. ಜಿಲ್ಲೆಯಲ್ಲಿ ನೊಳಂಬ ವೀರಶೈವ ಲಿಂಗಾಯತ ಸಮಾಜದ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಆಗಬೇಕು. ಶಕ್ತಿ ಇಲ್ಲದವರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂದು ಹೇಳಿದರು.
ನೊಳಂಬ ಸಮಾಜದ ಸಂಘಟನೆ ಯಾವುದೇ ಸಮಾಜಕ್ಕೆ ಪರ್ಯಾಯವಲ್ಲ. ಎಲ್ಲ ಸಮಾಜದ ಜತೆಗೆ ಬೆರೆತು ಸಾಗುವುದೇ ಶರಣ ಧರ್ಮ. ಹೀಗಾಗಿ ಇತರೆ ಸಮಾಜದವರಿಗೂ ಸ್ಪಂದಿಸಬೇಕೇ ಹೊರತಾಗಿ ಮತ್ತೊಬ್ಬರ ಅನ್ನ ಕಸಿಯಬಾರದು. ನಮ್ಮನ್ನು ಗುಲಾಮರಂತೆ ಕಾಣುವವರ ವಿರುದ್ಧ ಪ್ರತಿಭಟಿಸುವ ಸಿಟ್ಟನ್ನೂ ಪ್ರದರ್ಶಿಸುವುದು ಅನಿವಾರ್ಯ ಎಂದು ಹೇಳಿದರು.
ನಿವೃತ್ತ ಜಿಲ್ಲಾ ನ್ಯಾಯಮೂರ್ತಿ ಎಸ್.ಎನ್. ಕೆಂಪಗೌಡರ ಮಾತನಾಡಿ ವಿದ್ಯಾರ್ಥಿಗಳು ದೊಡ್ಡ ಗುರಿ ಬೆಳೆಸಿಕೊಳ್ಳಬೇಕು. ನಮ್ಮನ್ನು ಬೆಳೆಸಿದ ಸಮಾಜಕ್ಕೆ ದುಡಿಮೆಯ ಸ್ವಲ್ಪ ಭಾಗ ನೀಡಬೇಕು. ಯುವಜನರಲ್ಲಿ ಸ್ವಾಮೀಜಿಗಳು ಇಷ್ಟಲಿಂಗ ಪೂಜೆ ಮಹತ್ವ ಮೂಡಿಸಬೇಕು ಎಂದರಲ್ಲದೆ ಲಿಂಗಾಯತ ಧರ್ಮ ವಿಶ್ವಧರ್ಮ ಆಗಬೇಕು ಎಂದೂ ಆಶಿಸಿದರು.
ಜಿಲ್ಲಾ ಕಾರ್ಯದರ್ಶಿ ಡಾ.ಈ. ವಿರೂಪಾಕ್ಷಪ್ಪ ಪ್ರಾಸ್ತಾವಿಕ ಮಾತನಾಡಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಸಮುದಾಯ ಭವನ ನಿರ್ಮಾಣ, ಹಳೆಯ ಹಾಸ್ಟೆಲ್ ಪುನರುಜ್ಜೀವನ ಮೊದಲಾದ ಆಶಯಗಳನ್ನು ಸಮಾಜ ಹೊಂದಿದೆ. ಜಿಲ್ಲೆಯಲ್ಲಿ 419 ಸದಸ್ಯರು ನೋಂದಣಿಯಾಗಿದ್ದಾರೆ ಎಂದು ವಿವರಿಸಿದರು.
ಹಳೇಬೀಡಿನ ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಡಾ.ಅಶೋಕ್‌ಕುಮಾರ್ ವಿ. ಪಾಳೇದ, ನಿರ್ದೇಶಕರಾದ ಜಿ.ಎಂ. ರುದ್ರಗೌಡ, ಕೆ.ಜಿ.ಶಾಂತರಾಜ, ಟಿ.ಎ. ಕುಸಗಟ್ಟಿ, ಎಂ.ಸಿ. ಭುವನೇಶ್ವರ ಇತರರಿದ್ದರು. ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾನ್ವಿತರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.