ರೈತರ ಬದುಕು ಹಸನಾಗಿಸುವ ಗುರಿ

1000656306_20250127080859718.jpg
Published on

ದಾವಣಗೆರೆ: ಜಿಲ್ಲೆಯ ರೈತರ ಬದುಕನ್ನು ಇನ್ನಷ್ಟು ಹಸನುಗೊಳಿಸುವುದೇ ನಮ್ಮ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.
ಈ ಬಾರಿ ಹೆಚ್ಚು ಮಳೆಯಾಗಿದ್ದು, ಭದ್ರಾ ಜಲಾಶಯ ತುಂಬಿದ್ದರಿಂದ ರೈತರಲ್ಲಿ ಹರ್ಷ ಮೂಡಿಸಿದೆ. ಕೆರೆ ತುಂಬಿಸುವ ಯೋಜನೆ, ನಾಲೆಗಳ ದುರಸ್ತಿ ಕೈಗೊಂಡು ಕೊನೆ ಭಾಗದ ರೈತರಿಗೆ ನೀರು ಸಿಗುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ನರೇಗಾ ಯೋಜನೆಯಡಿ 216 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗಿದೆ. 117 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಪಿಎಂ ಗ್ರಾಮೀಣ ಆವಾಸ್‌ನಡಿ 8510 ಮನೆಗಳನ್ನು ಮಂಜೂರಾಗಿವೆ.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ನಗರಪಾಲಿಕೆಯ  200 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಯಡಿ  ಕಾಮಗಾರಿ ಆರಂಭವಾಗಲಿದೆ. ಸ್ವಚ್ಛ ಭಾರತ ಮಿಷನ್‌ನಡಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
20  ಮರಳಿನ ಬ್ಲಾಕ್‌ಗಳ ಟೆಂಡರ್ ನಡೆಸಿ, ಜನರಿಗೆ ಅಗತ್ಯಾನುಸಾರ ನಿಗದಿತ ದರದಲ್ಲಿ ಮರಳು ದೊರಕಿಸಲು ಕ್ರಮ ವಹಿಸಲಾಗುವುದು. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಚಿಕಿತ್ಸಾ ಘಟಕ, 13 ಕೋಟಿ ರೂ. ವೆಚ್ಚದಲ್ಲಿ ಅಪಘಾತ ಮತ್ತು ಟ್ರಾಮಾ ಕೇರ್ ಸೆಂಟರ್ ಕಾರ್ಯಾರಂಭವಾಗಿದೆ. ಕತ್ತಿಗೆ-ಕೂಲಂಬಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಪಿಎಚ್‌ಸಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು.
ಸಂವಿಧಾನವೇ ರಾಷ್ಟ್ರದ ಸರ್ವೋಚ್ಛ ಕಾನೂನು. ಅದನ್ನು ಎಲ್ಲರೂ ಗೌರವಿಸುವುದಲ್ಲದೆ  ಪಾಲಿಸಬೇಕು. ಸಂವಿಧಾನವೇ ನಮ್ಮ ಆಡಳಿತದ ಕೈಗನ್ನಡಿ. ಇದರ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ಎಲ್ಲ ನಾಗರಿಕರದು ಎಂದು ತಿಳಿಸಿದರು.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಉದ್ಯಾನದಲ್ಲಿ ನಿರ್ಮಿಸಲಾದ ಸಂವಿಧಾನ ಪೀಠಿಕೆಯ ಸಿಮೆಂಟ್ ಮಾದರಿಯನ್ನು ಸಚಿವರು ಉದ್ಘಾಟಿಸಿದರು.
ಪೊಲೀಸ್, ಡಿಎಆರ್ ವಾದ್ಯ ತಂಡ, ವಿವಿಧ ಶಾಲಾ-ಕಾಲೇಜುಗಳೂ ಸೇರಿ 29 ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಅಪಘಾತದಲ್ಲಿ ಮೃತಪಟ್ಟ ಯು.ಎನ್. ಸುಚಿತ್‌ಕುಮಾರ್‌ನ ಅಂಗಾಂಗ ದಾನದ ಗೌರವಾರ್ಥ, ಅವರ ತಾಯಿ ವಾಣಿಶ್ರೀ ಅವರಿಗೆ ಪ್ರಶಂಸಾಪತ್ರ ನೀಡಲಾಯಿತು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮೇಯರ್ ಕೆ. ಚಮನ್‌ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಉಪಮೇಯರ್ ಸೋಗಿ ಶಾಂತಕುಮಾರ್, ಪೂರ್ವ ವಲಯ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಜಿ.ಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ತಹಸೀಲ್ದಾರ್ ಡಾ. ಬಿ.ಎನ್. ಅಶ್ವಥ್ ಇದ್ದರು.
ಗಮನ ಸೆಳೆದ ಮಕ್ಕಳ ನೃತ್ಯ
ಆಲ್ ಇಖ್ರಾ ಶಾಲೆಯ ಮಕ್ಕಳು ಸೋಲ್ಜರ್ ಹಾಡಿಗೆ ಮಾದರಿಗಳ ಸಹಿತ ನೃತ್ಯ ಮಾಡಿ, ಭಾರತೀಯ ಸಶಸ್ತ್ರ ಪಡೆ, ನೌಕಾದಳ ಹಾಗೂ ವಾಯುಸೇನೆಯ ಅಧಿಕಾರಿ- ಸಿಬ್ಬಂದಿ ಸೇವೆ ಸ್ಮರಿಸಿದರು. ಮಹಾತ್ಮ ಗಾಂಧೀಜಿ, ಸರೋಜಿನಿ ನಾಯ್ಡು, ನೇತಾಜಿ ಸುಭಾಶ್ಚಂದ್ರ ಬೋಸ್, ಅಂಬೇಡ್ಕರ್ ಮೊದಲಾದ ರಾಷ್ಟ್ರನಾಯಕರ ವೇಷದಲ್ಲಿ ಚಿಣ್ಣರು ಕಾಣಿಸಿಕೊಂಡರು.
ಡಿ.ಆರ್.ಆರ್ ಶಾಲೆಯ ಮಕ್ಕಳು ಕನ್ನಡ ನಾಡಿನ ಕನ್ನಡ ರತುನ ಹಾಡಿಗೆ ಹೊಯ್ಸಳ ಸಾಮ್ರಾಜ್ಯ ಸ್ಥಾಪನೆ ಕುರಿತಾದ ನೃತ್ಯ ರೂಪಕ ಪ್ರದರ್ಶಿಸಿದರು. ಸೇಂಟ್‌ಜಾನ್ಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಯೋಧರ ಶೌರ್ಯ ಕುರಿತು ನೃತ್ಯ ಪ್ರದರ್ಶನ ನೀಡಿದರು.
ಎಂಟು ಜನರಿಗೆ ಗೌರವ
ಮುಖ್ಯಮಂತ್ರಿ ಪದಕ ಪಡೆದ ಸಂತೇಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು, ದಾವಣಗೆರೆ ನಿಸ್ತಂತು ಘಟಕದ ಪಿಐ ತೇಜಾವತಿ ಹಾಗೂ ರಾಷ್ಟ್ರಪತಿ ಪದಕ ಪಡೆದ ಬೆರಳಮುದ್ರೆ ವಿಭಾಗದ ಪಿಎಸ್‌ಐ ಮಂಜುನಾಥ ಕಲ್ಲೇದೇವರು, ಡಿಎಆರ್‌ನ ಸಹಾಯಕ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ ಎಚ್. ದಾದಾಪೀರ್, ಹೆಣ್ಣು ಭ್ರೂಣಹತ್ಯೆ ನಿಯಂತ್ರಣದ ಆರುಷಿ ಯೋಜನೆಗೆ ಶ್ರಮಿಸಿದ ಹೊನ್ನಾಳಿಯ ಸಿಎಂ. ಜಕ್ಕಾಳಿ, ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ವಿದ್ಯಾರ್ಥಿಗಳಾದ ಬಿ.ಎಸ್. ದೀಪಾ, ಸಿ. ಶ್ರೇಯನ್, ಆರ್. ಗೌತಮಿ ಅವರನ್ನು ಗೌರವಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net