ಜಾತಿಗಣತಿ ವರದಿ ಬಹಿರಂಗಕ್ಕೆ ಈಶ್ವರಾನಂದಪುರಿ ಸ್ವಾಮೀಜಿ ಆಗ್ರಹ

1000800405.jpg
Published on

ದಾವಣಗೆರೆ: ರಾಜ್ಯದಲ್ಲಿ ಕುರುಬ ಸಮಾಜದ ಜನಸಂಖ್ಯೆ ದೊಡ್ಡದಿದೆ. ಆದರೆ, ನಿಖರ ಅಂಕಿ-ಸಂಖ್ಯೆಗಾಗಿ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕೆಂದು ಹೊಸದುರ್ಗ ಕನಕ ಗುರುಪೀಠ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.

ನಗರದ ರೋಟರಿ ಭವನದಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ಹಾಲುಮತ ಮಹಾಸಭಾ, ಜಿಲ್ಲಾ ಕುರುಬರ ಸಂಘ ಹಮ್ಮಿಕೊಂಡಿದ್ದ ಜಗದ್ಗುರು ರೇವಣಸಿದ್ದೇಶ್ವರ ಜಯಂತ್ಯುತ್ಸವ, ಹಾಲುಮತ ಜಯಂತಿ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾತಿಗಣತಿ ಯಾರ ವಿರುದ್ಧವೂ ಅಲ್ಲ. ಇದು ಬಹಿರಂಗವಾದಲ್ಲಿ ಪ್ರತಿ ಸಮಾಜಕ್ಕೆ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಸೌಲಭ್ಯ ಕಲ್ಪಿಸಲು ಸಹಾಯಕವಾಗಲಿದೆ ಎಂದು ತಿಳಿಸಿದರು.

ಇಂದಿರಾಗಾಂಧಿ, ಜವಾಹರಲಾಲ್ ನೆಹರೂ ಅವರಿಗೆ ಆಪ್ತರಾಗಿದ್ದ ಅಂದಿನ ಸಂಸದ ದಿ. ಚನ್ನಯ್ಯ ಒಡೆಯರ್ ಅವರು ಸೂಚಿಸಿದವರಿಗೆ ರಾಜ್ಯದಲ್ಲಿ ಟಿಕೆಟ್ ಸಿಗುತ್ತಿತ್ತು. ಆದರಿಂದು ನಮ್ಮ ಸಮಾಜದವರಿಗೆ ಶಾಸನಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂಡನ್ನಗಲಿದ ಗೋವು ಹುಲಿಗಿಕ್ಕಿದ ಮೇವು ಎಂಬ ಕನಕದಾಸರ ವಾಣಿಯಂತೆ ಕುರುಬ ಸಮಾಜದಲ್ಲಿ ಒಗ್ಗಟ್ಟಿನ ಅಭಾವವಿದೆ. ನಾವು ಒಬ್ಬಂಟಿಯಾದರೆ ಆಪತ್ತು ನಿಶ್ಚಿತ. ಸಮಾಜದ ರಾಜಕಾರಣಿಗಳಲ್ಲಿ ಒಗ್ಗಟ್ಟಿನ ಕೊರತೆ ನೀಗಬೇಕು. 2028ರ ವೇಳೆಗೆ ಜಿಲ್ಲೆಯಲ್ಲಿ ನಾವು ಒಂದಾದಲ್ಲಿ ಸಮಾಜದ ಮೂವರಿಗೆ ಶಾಸಕ ಸ್ಥಾನ ದಕ್ಕಲಿದೆ. ಹೀಗಾಗಿ ಸಣ್ಣಪುಟ್ಟ ಭಿನ್ನಮತ ದೂರವಿಡಿ ಎಂದು ಕಿವಿಮಾತು ಹೇಳಿದರು.

ಶ್ರೀ ರೇವಣಸಿದ್ದೇಶ್ವರ ಜಯಂತಿಯನ್ನು ರೇಣುಕಾಚಾರ್ಯ ಜಯಂತಿ ಎಂಬುದಾಗಿ ಆಚರಿಸಲಾಗುತ್ತಿದೆ. ಇದು ಸರಿಯಲ್ಲ. ಅದನ್ನು ಶ್ರೀ ರೇವಣಸಿದ್ದೇಶ್ವರ ಜಯಂತ್ಯುತ್ಸವ ಆಗಿ ಆಚರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕನಕ ಭವನ ಪೂರ್ಣಗೊಂಡಿಲ್ಲ. ಆಯಾ ಕ್ಷೇತ್ರದ ಶಾಸಕರನ್ನು ಕೇಳಿದರೆ, ನಿಮ್ಮವರೇ ಸಿಎಂ ಇದ್ದಾರಲ್ಲ ಎನ್ನುತ್ತಾರೆ. ನೀವು ಕನಕ ಭವನ ಉದ್ಘಾಟಿಸದಿದ್ದರೆ ಮುಂದೆ ನಮ್ಮ ಬೆಂಬಲ ನಿಮಗಿಲ್ಲ ಎಂದು ಆ ಶಾಸಕರಿಗೆ ನೇರವಾಗಿಯೇ ತಿಳಿಸಿದ್ದೇನೆ ಎಂದು ಹೇಳಿದರು.

ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪಾಳೆಗಾರ ಸಂಸ್ಕೃತಿ ಇದೆ. ಎಲ್ಲವೂ ನಮ್ಮ ಅಣತಿಯಂತೆ ನಡೆಯಬೇಕೆಂಬ ದಬ್ಬಾಳಿಕೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಮೂಡಾ ಹಗರಣದಲ್ಲಿ ಸಿಲುಕಿದಾಗ ಅವರ ಪರ ಸ್ಥಳೀಯ ಕಾಂಗ್ರೆಸ್ ಮುಖಂಡರು ಧ್ವನಿ ಎತ್ತಲಿಲ್ಲ. ಆದರೆ, ನಾನು ನೈತಿಕ ಬೆಂಬಲ ನೀಡಿದೆ. ನಮ್ಮಲ್ಲಿ ಸ್ವಾಭಿಮಾನ ಇದ್ದಾಗ ಯಾರಿಗೂ ಅಂಜಬೇಕಿಲ್ಲ ಎಂದು ಹೇಳಿದರು.

ಸಮಾಜ ಸಂಘಟನೆ ಗಟ್ಟಿಯಾದಾಗ ಮಾತ್ರ ಅದು ದೊಡ್ಡ ಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಹಾಲುಮತ ಸಮಾಜದ ಒಗ್ಗಟ್ಟು, ಸಂಘಟನೆ ಬಲಗೊಳ್ಳಲು ಪ್ರತಿ ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಹಾಲುಮತ ಮಹಾಸಭಾ ಸಮಿತಿ ರಾಜ್ಯ ಸಂಚಾಲಕ ರಾಜು ಮೌರ್ಯ, ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಮುಖಂಡರಾದ ವೆಂಕಟೇಶ್, ಲೋಕಿಕೆರೆ ಸಿದ್ದಪ್ಪ, ಕೊಳೇನಹಳ್ಳಿ ಸತೀಶ್, ಕೆ. ಪ್ರಸನ್ನಕುಮಾರ್, ರಾಜನಹಳ್ಳಿ ಶಿವಕುಮಾರ್ ಮಾತನಾಡಿದರು.

ಸಮಾಜದ ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಶಿವಾನಂದ ದಳವಾಯಿ, ಎಚ್.ಜಿ. ಸಂಗಪ್ಪ, ಎಸ್.ಎಂ. ಸಿದ್ದಲಿಂಗಪ್ಪ, ಕುಂಬಳೂರು ವಿರುಪಾಕ್ಷಪ್ಪ, ಅಣಬೇರು ಶಿವಮೂರ್ತಿ, ಕೆ. ಓಂಕಾರಪ್ಪ ಇತರರಿದ್ದರು.

ಇದೇ ವೇಳೆ ಡಾ. ಉದಯ್‌ಶಂಕರ್ ಒಡೆಯರ್ ಅವರಿಗೆ ಹಾಲುಮತ ಚೇತನ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಕರ್ತ ಮಾಲತೇಶ್ ಅರಸ್ ವಿಶೇಷ ಉಪನ್ಯಾಸ ನೀಡಿದರು. ದೀಟೂರ್ ಚಂದ್ರು ಸ್ವಾಗತಿಸಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net