ಕಾಂಗ್ರೆಸ್ ಅವಧಿಯಲ್ಲಿ ಗೂಂಡಾಗಳ ಅಟ್ಟಹಾಸ   ರೇಣುಕಾಚಾರ್ಯ ಕಿಡಿ

1000393912.jpg
Published on

ದಾವಣಗೆರೆ: ರಾಜ್ಯದಲ್ಲಿರುವುದು ಭಯೋತ್ಪಾದಕರ ಸರ್ಕಾರ. ಹಿಂದುಗಳು, ಬಿಜೆಪಿ ಹಾಗೂ ಸಂಘ ಪರಿವಾರದವರ ಮೇಲೆ ಈ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿ ಕಾರಿದರು.
ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತರಾದ ಹಿಂದು ಮುಖಂಡರು, ಕಾರ್ಯಕರ್ತರನ್ನು ದಾವಣಗೆರೆ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಂದ ನಂತರ ಅನ್ಯ ಕೋಮಿನ ಗೂಂಡಾಗಳ ಅಟ್ಟಹಾಸ ಹೆಚ್ಚಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಎಂದವರನ್ನು ಸರ್ಕಾರ ಶಿಕ್ಷಿಸಲಿಲ್ಲ. ನಾಗಮಂಗಲ ಗಲಭೆಯಲ್ಲಿ ಪೆಟ್ರೋಲ್ ಬಾಂಬ್ ಸಿಡಿದವು. ಅಮಾಯಕರ ಅಂಗಡಿಗಳು ಸುಟ್ಟರೂ  ಗೃಹ ಸಚಿವರು ಸಣ್ಣ ಘಟನೆ ಎಂದು ತಳ್ಳಿ ಹಾಕಿದರು.
ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನು ಡಿಕೆ ಶಿವಕುಮಾರ್ ಬ್ರದರ್ಸ್ ಎಂದು ಕರೆದರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಹಿಂದುಗಳ ಹತ್ಯೆ ನಡೆದಾಗ ಅನ್ಯ ಕೋಮಿನವರ ಮೇಲಿನ ಕೇಸ್‌ಗಳನ್ನು ಖುಲಾಸೆ ಮಾಡಿತು ಎಂದು ಟೀಕಿಸಿದರು.
 ಕಾನೂನು ಕೈಗೆತ್ತಿಕೊಳ್ಳುವವರ ಬಗ್ಗೆ ನನ್ನ ವಿರೋವಿದೆ. ನಾನು ಅಲ್ಪಸಂಖ್ಯಾತರ ವಿರೋಧಿಯಲ್ಲ. ಶೀಘ್ರದಲ್ಲೇ ನಮ್ಮ ಸರ್ಕಾರ ಬರಲಿದ್ದು, ಅಮಾಯಕ ಹಿಂದುಗಳ ಮೇಲೆ ಹಾಕಿರುವ ಎಲ್ಲ ಮೊಕದ್ದಮೆಗಳನ್ನು ಖುಲಾಸೆಗೊಳಿಸಲಾಗುವುದು ಎಂದು ಹೇಳಿದರು.
ಭಾರತದಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿದ್ದು ತಪ್ಪು. ಇದನ್ನು ಸಮರ್ಥಿಸಿಕೊಳ್ಳುವ ಜಮೀರ್ ಅಹ್ಮದ್ ಒಂದು ಜಾತಿಗೆ ಸಚಿವರಲ್ಲ.  ಭಾರತದ ಬಾವುಟ ಹಿಡಿದವರಿಗೆ ಮಾತ್ರ ಇಲ್ಲಿ ಅವಕಾಶ. ಪ್ಯಾಲೆಸ್ಟೈನ್ ಧ್ವಜ ಹಿಡಿವ ದೇಶದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಹಿಂದುಗಳ ಮೇಲೆ ಹಲ್ಲೆಯಾದರೆ ನಾವು ಸುಮ್ಮನಿರಬೇಕಾ? ನಾನು ಪ್ರಚೋದನಕಾರಿ ಭಾಷಣ ಮಾಡಿಲ್ಲ. ಹಿಂದುಗಳ ಮೇಲೆ ಹಲ್ಲೆ, ಅಮಾಯಕ ಹಿಂದುಗಳ ಬಂಧನವಾದಲ್ಲಿ ನಾವಿರುತ್ತೇವೆ. ನಿಮಗೆ ಅಲ್ಪಸಂಖ್ಯಾತರ ಮೇಲೆ ವ್ಯಾಮೋಹವಿದೆ. ನನಗೆ ಹಿಂದುಗಳ ಮೇಲೆ ಅಭಿಮಾನವಿದೆ ಎಂದು ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಹಿಂದುಗಳ ಹಲ್ಲೆಕೋರರನ್ನು ಗುಂಡಿಕ್ಕಿ
ಹಿಂದುಗಳ ಮೇಲೆ ಹಲ್ಲೆ ಮಾಡುವ, ಪ್ರಚೋದನೆ ಮಾಡುವ ಗೂಂಡಾಗಳನ್ನು ಕೇವಲ ಜೈಲಲ್ಲಿ ಇರಿಸಿದರೆ ಸಾಲದು. ಅಂಥವರನ್ನು ಸರ್ಕಾರ ಮುಲಾಜಿಲ್ಲದೆ ಗುಂಡಿಕ್ಕಿ ಹೊಡೆಯಬೇಕು.  ಇಲ್ಲವೇ ಗಲ್ಲಿಗೇರಿಸಬೇಕು ಎಂದೂ ವಿವಾದಿತ ಹೇಳಿಕೆ ನೀಡಿದರು. ಜೈಲಲ್ಲಿರುವ ಹಿಂದು ಯುವಕರನ್ನು ಥಳಿಸಲಾಗುತ್ತಿದೆ. ಹಿಂದುಗಳ ಮೇಲೆ ಹಿಂಸೆ ಮಾಡಿದರೆ ನಾವು ಸಹಿಸಲ್ಲ ಎಂದೂ ಎಚ್ಚರಿಕೆ ನೀಡಿದರು.
ಸಿಬಿಐ ತನಿಖೆಗೆ ಆಗ್ರಹ
ತಿರುಪತಿ ಲಡ್ಡುಗೆ ಪ್ರಾಣಿಯ ಕೊಬ್ಬು ಬಳಸಿದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೇಣುಕಾಚಾರ್ಯ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಆಗ್ರಹಿಸಿದರು.
ಆಂಧ್ರದ ಮಾಜಿ ಸಿಎಂ ಜಗನ್ ಈ ಧರ್ಮದಲ್ಲಿ ಹುಟ್ಟಿ ಬೇರೆ ಧರ್ಮಕ್ಕೆ ಮತಾಂತರವಾಗಿದ್ಧಾರೆ. ತಿರುಪತಿ ಲಡ್ಡುಗೆ ಪ್ರಾಣಿಯ ಕೊಬ್ಬು ಬಳಸಿದ್ದು ಸರಿಯಲ್ಲ. ಭಕ್ತರಿಗೆ ಅನ್ಯಾಯ ಮಾಡಿದ್ದಕ್ಕೆ ದೇವರು ಸೋಲಿನ ಶಿಕ್ಷೆ ನೀಡಿದ್ದಾನೆ ಎಂದು ಪ್ರತಿಕ್ರಿಯಿಸಿದ ಅವರು, ಲಡ್ಡುಗೆ ಇನ್ನು ಮುಂದೆ ಕರ್ನಾಟಕದ ನಂದಿನ ತುಪ್ಪ ಬಳಕೆ ಮಾಡುವುದಾಗಿ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿರುವುದು ಖುಷಿ ತಂದಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ, ಬಿ.ಜಿ. ಅಜಯಕುಮಾರ್, ಲೋಕಿಕೆರೆ  ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net