

ದಾವಣಗೆರೆ: ಹಾಲಕೆರೆಯ ಲಿಂ. ಅನ್ನದಾನ ಸ್ವಾಮೀಜಿ ಅವರು ಶೈಕ್ಷಣಿಕ ಸೇವೆ ಮಾಡುತ್ತಲೇ ಸಾಮಾಜಿಕ, ಧಾರ್ಮಿಕ ಸಮಾನತೆಗೆ ಶ್ರಮಿಸಿದ್ದರು. ಶಿವಶರಣರಂತೆ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರೃ ಕಲ್ಪಿಸಿದರು ಎಂದು ಹಾಲಕೆರೆ ಅನ್ನದಾನೇಶ್ವರ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಲಿಂ. ಅನ್ನದಾನ ಮಹಾಶಿವಯೋಗಿಗಳ 47ನೇ ಹಾಗೂ ಲಿಂ.ಡಾ. ಅಭಿನವ ಅನ್ನದಾನ ಶ್ರೀಗಳ ತೃತೀಯ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮುದಾಯಕ್ಕೆ ಹೆದರಿ ತುರುಬಿನಲ್ಲಿ ಇಷ್ಟಲಿಂಗ ಇರಿಸಿಕೊಳ್ಳುತ್ತಿದ್ದ ಹಾಲುಮತ ಸಮಾಜದ ಸಜ್ಜಲಗುಡ್ಡದ ಶರಣಮ್ಮಗೆ ಅನ್ನದಾನ ಶ್ರೀಗಳು ಲಿಂಗ ದೀಕ್ಷೆ ಮಾಡಿದರು. ನಂತರ ಅನೇಕ ಮಠಾಧೀಶರು ಆಕೆಯ ದರ್ಶನಕ್ಕೆ ಬಂದರು. ಇಷ್ಟಲಿಂಗ ಧರಿಸಿದವರೆಲ್ಲರೂ ಸಮಾನರು. ಅಂಥವರನ್ನು ಜಾತಿಯಿಂದ ನೋಡಬಾರದು ಎಂಬುದನ್ನೂ ಶ್ರೀಗಳು ಬೋಧಿಸಿದ್ದರು ಎಂದು ಸ್ಮರಿಸಿದರು.
ಸ್ವಾತಂತ್ರೃಪೂರ್ವದಲ್ಲೇ ಶಿಕ್ಷಣ ಸಂಸ್ಥೆಗಳನ್ನು ಹಾಗೂ 12 ಉಚಿತ ಪ್ರಸಾದ ನಿಲಯಗಳನ್ನು ತೆರೆದ ಹಾಲಕೆರೆ ಅನ್ನದಾನ ಶ್ರೀಗಳು, ಗುಣಮಟ್ಟದ ಶಿಕ್ಷಣ ಕಲ್ಪಿಸಲು ಮುಂದಾದರು. ಗದಗ, ನರೇಗಲ್, ಗಜೇಂದ್ರಗಡ ಮೊದಲಾದೆಡೆ ಶಿಕ್ಷಣ ಸಂಸ್ಥೆಗಳು ಸೇವೆ ನೀಡುತ್ತಿವೆ. ಹೈದರಾಬಾದ್ ಕರ್ನಾಟಕದಲ್ಲಿ ನಮ್ಮ ಸಂಸ್ಥೆಗಳು ಜನರನ್ನು ಕರೆತಂದು ಶಿಕ್ಷಣ ನೀಡದೇ ಹೋಗಿದ್ದರೆ ಇಂದಿನ ಹಿರಿಯರು ಅನಕ್ಷರಸ್ಥರಾಗಿರುತ್ತಿದ್ದರು ಎಂದು ಹೇಳಿದರು.
ಫಲಿತಾಂಶ ಕುಸಿದಿದ್ದ ಗದಗ ಕಾಲೇಜಿಗೆ ಅನುದಾನ ಕಡಿತಗೊಳಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದ್ದಾಗ, ಹಿರಿಯ ಶ್ರೀಗಳು ಪತ್ರ ಬರೆದು 3 ವರ್ಷಾವಧಿಯಲ್ಲೇ ಗುಣಮಟ್ಟ ಹೆಚ್ಚಿಸಿದರು. ಇಂದಿಗೂ ಇಲ್ಲಿ 500 ಸೀಟಿಗಾಗಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುವಂಥಹ ಸ್ಪರ್ಧೆ ಏರ್ಪಟ್ಟಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಹನ್ನೆರಡು ತಿಂಗಳಲ್ಲೂ ಪುರಾಣ ಪ್ರವಚನ ನಡೆಸಬಲ್ಲ ನಾಡಿನ ಏಕೈಕ ಮಠ ನಮ್ಮದು. ಬರುವ ದಿನಗಳಲ್ಲಿ ಕೃಷಿ ಗೋಷ್ಠಿ ಹಾಗೂ ಪರಿಸರ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂಬ ಇಂಗಿತ ಹೇಳಿಕೊಂಡರು.
ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹಾಲಕೆರೆ ಅನ್ನದಾನ ಶ್ರೀಗಳು ಅನ್ನ, ಅಕ್ಷರ, ಆಶ್ರಯದ ಜತೆಗೆ ಜ್ಞಾನ ದಾಸೋಹ ನೀಡಿ ಚತುರ್ವಿಧ ದಾಸೋಹಿ ಎನಿಸಿಕೊಂಡವರು. ಅವರ ಮಠದಲ್ಲಿ ಓದಿದವರು ಇಂದು ದೊಡ್ಡ ಹುದ್ದೆಗಳಲ್ಲಿದ್ದು ಬದುಕು ಕಂಡುಕೊಂಡಿದ್ದಾರೆ ಎಂದು ಹೇಳಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಕರೆತರುವ ಜತೆಗೆ ಅವರಲ್ಲಿ ಪರಂಪರೆ ಬಗ್ಗೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ಉಪನ್ಯಾಸ ನೀಡಿದ ದಾವಿವಿ ನಿವೃತ್ತ ಕುಲಸಚಿವ ಡಾ. ಕೆ. ಶಿವಶಂಕರ್, ಸಮಾಜದಲ್ಲಿ ಅಪರಾಧ ಪ್ರಮಾಣ ತಗ್ಗಿಸುವ ಭಾಗವಾಗಿ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಪಾಲಕರಿಂದ ಆಗಬೇಕು ಎಂದು ಆಶಿಸಿದರು. ಮಕ್ಕಳು ಸಂಸ್ಕಾರವಂತರಾಗದೇ ಹೋದರೆ ಎಲ್ಲ ಸಾಧನೆಗಳೂ ವ್ಯರ್ಥವಾಗಲಿವೆ ಎಂದು ಸಿಪಿಐ ಗುರುಬಸವರಾಜ್ ಹೇಳಿದರು.
ಪತ್ರಕರ್ತ ನಾಗರಾಜ ಬಡದಾಳ್, ಲೆಕ್ಕ ಪರಿಶೋಧಕ ಮುಂಡಾಸದ ವೀರೇಂದ್ರ, ಎಸ್‌ಬಿಸಿ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಷಣ್ಮುಖಪ್ಪ ಅವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಹಿರಿಯ ಪತ್ರಕರ್ತ ವೀರಪ್ಪ ಎಂ.ಭಾವಿ, ಮಹಾದೇವಪ್ಪ ಮೆಣಸಿನಕಾಯಿ ಇತರರಿದ್ದರು.