

ದಾವಣಗೆರೆ: ಸಂಪತ್ತು ವೃದ್ಧಿಯಾದಂತೆ ಸಂಸ್ಕೃತಿ ಬೆಳೆಯಬೇಕು. ಮಾನವನ ಬುದ್ಧಿಶಕ್ತಿ ಬೆಳವಣಿಗೆಯಾದಂತೆಲ್ಲ ಭಾವನೆಗಳು ಕುಬ್ಜವಾಗುತ್ತಿರುವುದು ಇಂದಿನ ಎಲ್ಲ ಅವಾಂತರಗಳಿಗೆ ಕಾರಣವಾಗಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶ್ರೀಗಳು ವಿಷಾದಿಸಿದರು.
ನಗರದ ಅಭಿನವ ರೇಣುಕ ಮಂದಿರದಲ್ಲಿ ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿರುವ ಆಷಾಢ ಮಾಸದ ಜನಜಾಗೃತಿ ಧರ್ಮ ಸಮಾವೇಶದ ನಾಲ್ಕನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾನವ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಶ್ರಮದ ಬೆವರಿನ ಫಲ ಸುಖದಾಯಕವಾಗಿದೆ. ದೇಹವನ್ನು ದುಡಿಮೆಗೆ, ಮನವನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಬದುಕು ಉಜ್ವಲವಾಗಲಿದೆ ಎಂದರು.
ಆರೋಗ್ಯಪೂರ್ಣ ಸಮಾಜಕ್ಕೆ ಆದರ್ಶವೇ ದಾರಿದೀಪ. ಪ್ರಗತಿಪರ ಧ್ಯೇಯೋದ್ದೇಶಗಳು ಉನ್ನತಿಗೆ ಸಹಕಾರಿಯಾಗಿವೆ. ವೀರಶೈವ ಧರ್ಮದ ಸಂವಿಧಾನದಲ್ಲಿ ಜಗದ್ಗುರು ರೇಣುಕಾಚಾರ್ಯರ ಕ್ರಿಯಾಶೀಲತೆ ಉತ್ತಮ ಜೀವನಕ್ಕೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಮೇಲ್ಮನೆ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ ಭಾರತ ಕೌಟುಂಬಿಕ ವ್ಯವಸ್ಥೆ ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಇಲ್ಲಿನ ಸದಸ್ಯರಿಗೆ ಹಕ್ಕಿನ ಬದಲಾಗಿ ಜವಾಬ್ದಾರಿಗಳಿವೆ. ಇವನ್ನು ಹಿಂದೆಂಗಿಂತಲೂ ಇಂದು ಉಳಿಸುವ ಅಗತ್ಯವಿದೆ ಎಂದು ಆಶಿಸಿದರು.
ವೀರಶೈವ ಲಿಂಗಾಯತ ಸಮಾಜ ದೇಶದ ಮೂಲ ಸಂಸ್ಕತಿ. ಹಿಂದು ಸಮಾಜದ ಅವಿಭಾಜ್ಯ ಅಂಗ. ಇದನ್ನು ಒಡೆಯಲು ಸಾಧ್ಯವಿಲ್ಲ. ಆದರೂ ಅನೆಕರು ಪ್ರಯತ್ನ ನಡೆಸುತ್ತಲೇ ಇದ್ದಾರೆ ಎಂದೂ ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ರಂಭಾಪುಇ ಶ್ರೀಗಳು ಧರ್ಮದ ಜತೆಗೆ ಸಾಹಿತ್ಯ, ಸಂಸ್ಕೃತಿಯ ತಿಳಿವಳಿಕೆ ನೀಡುವ ಜತೆಗೆ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಧರ್ಮ ಹೊಂದಿದ್ದಾರೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಮಾತನಾಡಿ ಇಂದು ಎಲ್ಲೆಡೆ ಶಾಂತಿ-ನೆಮ್ಮದಿ ಇಲ್ಲವಾಗಿದೆ. ಇದಕ್ಕೆ ಸ್ವಾಮೀಜಿಗಳು ಪರಿಹಾರ ಹೇಳಬೇಕು. ನಾಡಿನ ಎಲ್ಲ ವೀರಶೈವ ಲಿಂಗಾಯತ ಮಠಾಧೀಶರು ಒಗ್ಗೂಡಿ ಸಮಾಜಕ್ಕೆ ದಿಕ್ಸೂಚಿಯಾಗಬೇಕು ಎಂದು ಆಶಿಸಿದರು.
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್ ಮಾತನಾಡಿ ಅನ್ಯ ಸಮಾಜದವರು ಎಲ್ಲ ರಂಗಗಳಲ್ಲೂ ಅವಕಾಶ ಪಡೆದಿದ್ದರೆ ವೀರಶೈವರು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ನಾವೆಲ್ಲರೂ ಒಂದು- ನಾವೆಲ್ಲರೂ ಬಂಧು ಎಂಬ ಘೋಷವಾಕ್ಯದಡಿ ನಾವು ಒಂದಾಗಬೇಕು. ಒಳಪಂಗಡದ ಭೇದ ದೂರ ಮಾಡಬೇಕು ಎಂದು ಹೇಳಿದರು.
ಪತ್ರಕರ್ತ ನಾಗರಾಜ ಬಡದಾಳ್ ಮಾತನಾಡಿ ಜನರು, ಬಾಂಧವ್ಯ ಹದಗೆಡಿಸುವ ಟೀವಿ ಧಾರಾವಾಹಿಗಳಿಂದ ಮುಕ್ತರಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಂಕಾಪುರದ ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀ, ತಾವರಕೆರೆಯ ಅಭಿನವ ಶಿವಾಚಾರ್ಯ ಶ್ರೀ, ಮಳಲೀಮಠದ ನಾಗಭೂಷಣ ಶಿವಾಚಾರ್ಯ ಶ್ರೀ, ಚನ್ನಗಿರಿಯ ಶಿವಶಾಂತವೀರ ಶ್ರೀ, ನಂದಿತಾವರೆಯ ಸಿದ್ದಲಿಂಗ ಶ್ರೀ ನೇತೃತ್ವ ವಹಿಸಿದ್ದರು.
ಉದ್ಯಮಿ ಶಿವಗಂಗಾ ಶ್ರೀನಿವಾಸ್ ಅವರಿಗೆ ‘ಶ್ರಮ ಸೇವಾ ಸಂಜೀವಿನಿ’ ಪ್ರಶಸ್ತಿ ವಿತರಿಸಲಾಯಿತು. ದೇವರಮನಿ ಶಿವಕುಮಾರ್, ವೈದ್ಯೆ ಡಾ.ಎಸ್‌ಎಸ್. ನೇತ್ರಾವತಿ, ಎಸ್. ಪರಮೇಶ್ವರ ಬಣಕಾರ್, ಜಿ.ಎಚ್.ನಾಗರಾಜಪ್ಪ, ವಿರೂಪಾಕ್ಷಪ್ಪ ಅಣಜಿ ಇತರರಿದ್ದರು.
---