

ದಾವಣಗೆರೆ: ಜಗತ್ತಿನ ಕೋಟ್ಯಾನುಕೋಟಿ ಜೀವರಾಶಿಗಳ ಪೈಕಿ ಮನುಷ್ಯ ಅಗಾಧ ಬುದ್ಧಿಶಕ್ತಿ, ವಿವೇಚನಾ ಶಕ್ತಿ ಹೊಂದಿದ್ದಾನೆ. ಆದರೆ ಪ್ರಾಣಿ-ಪಕ್ಷಿಗಳಲ್ಲಿ ಕಂಡುಬರುವ ಬಾಂಧವ್ಯದ ಕೊರತೆ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣನವರ ವಿಷಾದಿಸಿದರು.
ನಗರದ ಬಾಪೂಜಿ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತರ ಪೀಳಿಗೆಯ ಬಾಂಧವ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಜಾಗತಿಕ ಯುಗದಲ್ಲಿ ನಾವು ಶೈಕ್ಷಣಿಕ, ಆರ್ಥಿಕ ಇನ್ನಿತರೆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದರೂ ಕೌಟುಂಬಿಕ ವ್ಯವಸ್ಥೆ ಸುಧಾರಿಸುತ್ತಿಲ್ಲ. ಮೊದಲಿದ್ದ ಅವಿಭಕ್ತ ಕುಟುಂಬಗಳ ಬದಲಾಗಿ ವಿಭಕ್ತ ಕುಟುಂಬಗಳೇ ಹೆಚ್ಚುತ್ತಿವೆ. ಸಮಾಜದಲ್ಲಿ ಹಿರಿಯರು ಕಿರಿಯರ ನಡುವಿನ ಬಾಂಧವ್ಯ ಕ್ಷೀಣಿಸುತ್ತಿದೆ ಎಂದು ಹೇಳಿದರು.
ಮಾನವರು ಇಂದು ಎಷ್ಟೇ ವಿದ್ಯಾವಂತರಾದರೂ ಹಿರಿಯರ ಅನುಭವದಿಂದ ಮಾತ್ರ ಪ್ರೀತಿ-ಗೌರವದ ಮೌಲ್ಯ ತಿಳಿಯಲಿದೆ. ಬಾಂಧವ್ಯದ ಮೂಲಕ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯವಾಗಲಿದೆ. ಆದರೆ, ಇಂದಿನ ಆಧುನಿಕ ಯುಗದಲ್ಲಿ ಮಾನವರು ಎಷ್ಟೇ ಒತ್ತಡದಲ್ಲಿದ್ದರೂ ಪಾಲಕರನ್ನು ನೋಡಿಕೊಳ್ಳಲು ಆಗದ ದುಸ್ಥಿತಿ ಇದೆ. ಈ ವ್ಯವಸ್ಥೆ ಬದಲಾಗಬೇಕು ಎಂದು ಆಶಿಸಿದರು.
ಪಕ್ಷಿಗಳು ಒಟ್ಟಿಗೆ ಕೂತು ಧಾನ್ಯ ತಿನ್ನುತ್ತವೆ. ಆದರೆ ಮೂರು ತಲೆಮಾರು ಹೊಂದಿರುವ ಕುಟುಂಬಗಳನ್ನು ಮಾನವರು ಜತನದಿಂದ ನೋಡುತ್ತಿಲ್ಲ. ಚಿಂತಕ, ರಾಜಕಾರಣಿ ಯಾವುದೇ ಹುದ್ದೆಯಲ್ಲಿದ್ದರೂ ತಮ್ಮದೇ ಸಾಮ್ರಾಜ್ಯದಲ್ಲಿ ಮುಳುಗಿರುತ್ತೇವೆ. ಆದರೆ ಕುಟುಂಬ ಸದಸ್ಯರಿಗೆ ಎಷ್ಟು ಸಮಯ ನೀಡುವುದು ಎಂಬುದು ಮುಖ್ಯ ಎಂದು ಹೇಳಿದರು.
ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಶತಾಯುಷಿ/ ಅತಿ ಹೆಚ್ಚು ವಯಸ್ಸಿನವರು, ಸಾಧಕ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಸ್. ಗುರುಮೂರ್ತಿ, ವಕೀಲರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣಕುಮಾರ್, ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ಲಿಂಗಾರೆಡ್ಡಿ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ವೀರಯ್ಯ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಕಾರ್ಯದರ್ಶಿ ಕೆ.ಪಿ. ಮರಿಯಾಚಾರ್, ವಿಕಲಚೇತನರ ಇಲಾಖೆ ಅಧಿಕಾರಿ ಡಾ. ಕೆ.ಕೆ. ಪ್ರಕಾಶ್, ರೈತ ಮುಖಂಡ ಬಲ್ಲೂರು ರವಿಕುಮಾರ್ ಇದ್ದರು.
---