

ಡಿ.ಎಂ.ಮಹೇಶ್, ದಾವಣಗೆರೆ
ರಕ್ತ ಸಂಗ್ರಹಣೆ ಮಾಡುವ ಮತ್ತು ಅದರ ಬಗ್ಗೆ ಸಾಮುದಾಯಿಕ ಜಾಗೃತಿ ಮೂಡಿಸುವ 40 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಬಸ್ ದಾವಣಗೆರೆ ಜಿಲ್ಲೆಗೆ ಕಾಲಿಟ್ಟಿದೆ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಲ್ಪಿಸುವ ಈ ವಿಶೇಷ ವಾಹನ, ಸ್ವಯಂಪ್ರೇರಿತ ದಾನಿಗಳಿದ್ದಲ್ಲಿಗೇ ತೆರಳಿ ರಕ್ತ ಸಂಗ್ರಹಿಸಿ, ತದನಂತರದಲ್ಲಿ ಅಗತ್ಯವಿದ್ದವರಿಗೆ ಪೂರೈಕೆ ಮಾಡುವ ಉದ್ದೇಶಕ್ಕೆ ಸಜ್ಜಾಗುತ್ತಿದೆ.
ಬಸ್ ಮೂಲಕ ದಾವಣಗೆರೆ ಅಲ್ಲದೆ ನೆರೆಹೊರೆಯ ಜಿಲ್ಲೆಗಳ ಗ್ರಾಮಾಂತರ ಪ್ರದೇಶವಾರು ಶಿಬಿರಗಳನ್ನು ಆಯೋಜಿಸುವುದು, ಆಹ್ವಾನವಿತ್ತ ಶುಭ ಸಮಾರಂಭಗಳಿಗೆ ತೆರಳುವುದಲ್ಲದೆ, ಜನಸಂದಣಿ ಇರುವಡೆಗಳಲ್ಲಿ ನಿಲ್ಲಿಸಿ ರಕ್ತ ಸಂಗ್ರಹಿಸುವುದು ಮತ್ತು ಬ್ಲಡ್ ಬಗ್ಗೆ ಅರಿವಿನತ್ತ ಹೆಜ್ಜೆ ಹಾಕುವುದು ರೆಡ್‌ಕ್ರಾಸ್‌ನ ಆಲೋಚನೆ.
ದಾವಣಗೆರೆಯಲ್ಲಿ ಚಿಗಟೇರಿ ಆಸ್ಪತ್ರೆಯ ಒಂದು ಬಸ್ ಹಾಗೂ ಹಿಮೋಫಿಲಿಯಾ ಸಂಸ್ಥೆಯ ಸಮಗ್ರ ಕ್ಲಿನಿಕ್ ಒಳಗೊಡಂತೆ ರಕ್ತ ಸಂಗ್ರಹಿಸುವ ಬಸ್ ಬಿಟ್ಟರೆ ಜಿಲ್ಲೆಯ ಪಾಲಿಗೆ ಇದು ಮೂರನೆಯದು. ಇಲ್ಲಿನ ಅಗತ್ಯತೆಗೆ ತಕ್ಕಂತೆ ನವದೆಹಲಿಯ ಕೇಂದ್ರ ಸಂಸ್ಥೆಯಿಂದಲೇ ಈ ವಾಹನದ ಮಾದರಿಯನ್ನು ಸಿದ್ಧಪಡಿಸಲಾಗಿದ್ದು, ಸಂಚಾರಕ್ಕೆ ಆರ್‌ಟಿಒ ಪರವಾನಿಗೆ ದೊರೆತಿದೆ.
ಸಾರ್ವಜನಿಕರಿಗೆ ರಕ್ತದ ಯೂನಿಟ್ ನೀಡಲು, ವಿವಿಧ ತಪಾಸಣೆ ಸೇರಿ 1100 ರೂ. (ಸರ್ಕಾರಿ ದರಕ್ಕಿಂತ ಕಡಿಮೆ) ಶುಲ್ಕ ನಿಗದಿಯಾಗಿದೆ. ರಕ್ತದಾನಿಗಳು, ಅವರ ಕುಟುಂಬಸ್ಥರು ಅಗತ್ಯಬಿದ್ದಾಗ 900 ರೂ. ಶುಲ್ಕ ನೀಡಿ ರಕ್ತ ಮರಳಿ ಪಡೆಯಬಹುದು. ಶಿಬಿರ ಆಯೋಜನೆ ಸಂಬಂಧ, ಯಾವುದೇ ಜಿಲ್ಲೆಗಾದರೂ ವಾಹನ ಕೊಂಡೊಯ್ಯಲು ಅನುಮತಿ ಇದೆ.
ಏನಿವೆ ವಿಶೇಷತೆ..?
ಒಮ್ಮೆಗೆ ಮೂವರು ರಕ್ತದಾನ ಮಾಡಲು ಮೂರು ಕೋಚ್‌ಗಳ ವ್ಯವಸ್ಥೆ ಇದೆ. ರಕ್ತದಾನ ಮಾಡುವ ವ್ಯಕ್ತಿಗಳ ರಕ್ತದೊತ್ತಡ, ಮಧುಮೇಹ ತಪಾಸಣೆ ಹಾಗೂ ದೇಹತೂಕ ಮಾಡುವ ಯಂತ್ರಗಳಿವೆ. ಸುಮಾರು 400 ಯೂನಿಟ್‌ವರೆಗೆ ರಕ್ತ ಸಂಗ್ರಹಿಸಲು ಘಟಕವಿದೆ. ಕೇಂದ್ರೀಕೃತ ಹವಾನಿಯಂತ್ರಣದ ಸೌಕರ್ಯ ಇಲ್ಲಿದೆ.
ರಕ್ತದ ಗುಂಪು, ಹಿಮೋಗ್ಲೋಬಿನ್ ಇನ್ನಿತರೆ ತಪಾಸಣೆಗೆ ವಾಹನದಲ್ಲೇ ಪ್ರಯೋಗಾಲಯ ಹಾಗೂ ಸದಾ ವಿದ್ಯುತ್ ಸೌಕರ್ಯ ಕಲ್ಪಿಸುವ ಜನರೇಟರ್ ಬ್ಯಾಕ್‌ಅಪ್ ಸೌಕರ್ಯವಿದೆ. ವಾಹನದೊಳಗೆ ಎಲ್‌ಇಡಿ ಪರದೆಯಲ್ಲಿ ಪ್ರೊಜೆಕ್ಟರ್ ಮೂಲಕ ರಕ್ತ ಸಂಬಂದಿತ ವಿಚಾರ ಹಂಚಲಾಗುವುದು.
ಬಸ್‌ನ ಹೊರಭಾಗದಲ್ಲೂ ಎಲ್‌ಇಡಿ ಮೂಲಕ ರಕ್ತದಾನಕ್ಕೆ ಸಂಬಂಧಿತ ಚಿತ್ರ, ಮಾಹಿತಿ ಪ್ರದರ್ಶನ ನೀಡಲಾಗುವುದು. ವಾಹನದ ಚಾವಣಿಯಲ್ಲಿ ರೊಟೇಟ್ ಮಾಡಬಹುದಾದ, ನೆರಳಿನ ಪರದೆ ಇರಲಿದೆ.
ಬಸ್‌ನಲ್ಲಿ ರಕ್ತದ ಸಂಗ್ರಹಣೆ ನಡೆಯಲಿದೆ. ಒಮ್ಮೊಮ್ಮೆ ಇತರೆ ಆರೋಗ್ಯ ತಪಾಸಣೆಗೂ ಬಳಸಬಹುದಾದ್ದರಿಂದ ಇದನ್ನು ಮೊಬೈಲ್ ಕ್ಲಿನಿಕ್ ಬಸ್ ಆಗಿಯೂ ಬಳಕೆಯಾಗಲಿದೆ. ಸಿಬ್ಬಂದಿಗೆ ಹಾಗೂ ಆಯೋಜಕರಿಗೆ ಕಾಫಿ ನೀಡಲು ಸಹ ಬಸ್‌ನಲ್ಲಿ ಸಿದ್ಧಗೊಂಡ ತಂತ್ರವಿದೆ.
ಮೊದಲಾದರೆ ಐಸ್‌ಕ್ಯೂಬ್, ರಕ್ತದ ಯೂನಿಟ್ ಬ್ಯಾಗ್, ಸ್ಟೋರೇಜ್ ಘಟಕ ಎಲ್ಲವನ್ನೂ ತೆಗೆದುಕೊಂಡು ಹೋಗಬೇಕಿತ್ತು. ವಾಹನದಲ್ಲೇ ಎಲ್ಲ ಅನುಕೂಲತೆ ಇರುವುದರಿಂದ ಹೆಚ್ಚಿನ ಹೊರೆಯಾಗದು. ವಾಹನ ನಿರ್ವಹಣೆಗೆ ಚಾಲಕ, ವೈದ್ಯ, ಹಾಗೂ ಪ್ರಯೋಗಶಾಲಾ ತಂತ್ರಜ್ಞ ಸೇರಿ ಮೂರು ಜನರು ಸಾಕಾಗಲಿದೆ. ಶಿಬಿರಗಳು ನಡೆದಲ್ಲಿ ಹೆಚ್ಚಿನ ಸಿಬ್ಬಂದಿ ಬಳಸಲಾಗುತ್ತದೆ ಎನ್ನುತ್ತಾರೆ ರೆಡ್‌ಕ್ರಾಸ್‌ನ ಪದಾಧಿಕಾರಿಗಳು.
ಆಸಕ್ತರಿಗೆ ಸಂಪರ್ಕ ಸಂಖ್ಯೆ
ಈ ವಿಶೇಷ ಬಸ್ ಜೂನ್ ತಿಂಗಳಾಂತ್ಯದೊಳಗೆ ಕಾರ್ಯಾರಂಭ ಮಾಡುವ ಇಂಗಿತವಿದೆ. ಆಸಕ್ತರು ರೆಡ್‌ಕ್ರಾಸ್ ಸಂಸ್ಥೆ ಕಚೇರಿ ನಂ. 08192- 252550, ಡಾ. ಎ.ಎಂ. ಶಿವಕುಮಾರ್, ಚೇರ‌್ಮನ್, ಮೊ ಸಂ. 94482-77727, ಆನಂದಜ್ಯೋತಿ, ಪ್ರಧಾನ ಕಾರ್ಯದರ್ಶಿ 99452-99152, ಅನಿಲ್ ಬಾರಂಗಳ್, ಖಜಾಂಚಿ ಮೊ.ಸಂ. 88676-76903 ಇಲ್ಲಿಗೆ ಸಂಪರ್ಕಿಸಬಹುದು.
----
ಜೂನ್‌ನಲ್ಲಿ ಈ ವಾಹನ ಚಾಲನೆಗೊಳ್ಳಲಿದೆ. ನಂತರದಲ್ಲಿ ಸಾರ್ವಜನಿಕರು ಮದುವೆ, ನಾಮಕರಣ, ಗೃಹಪ್ರವೇಶ ಇನ್ನಿತರೆ ಶುಭ ಸಮಾರಂಭಗಳಿಗೆ ಕರೆ ಮಾಡಿದರೆ ಅಲ್ಲಿಗೇ ನಮ್ಮ ಬಸ್ ಬಂದು ರಕ್ತ ಸಂಗ್ರಹಿಸಲಿದೆ. ಇಂತಹ ಸಮಾಜಸೇವೆಯೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿಸಬೇಕು.
ಆನಂದಜ್ಯೋತಿ
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ.