ಬಸವನಹಳ್ಳಿ ನ್ಯಾಯಬೆಲೆ ಅಂಗಡಿ ಅಮಾನತು  ತೂಕ ವಂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕ್ರಮ

1000347463.jpg
Published on

ದಾವಣಗೆರೆ: ನ್ಯಾಮತಿ ತಾಲೂಕಿನ ಬಸವನಹಳ್ಳಿಯಲ್ಲಿನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ತೂಕದಲ್ಲಿ ವಂಚನೆ ಮಾಡಿದ ಪ್ರಕರಣದಡಿ ಸ್ಥಳದಲ್ಲೇ ನ್ಯಾಯಬೆಲೆ ಅಂಗಡಿ ಅಮಾನತಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಶನಿವಾರದಂದು ಜಿಲ್ಲಾಧಿಕಾರಿ ಹೊನ್ನಾಳಿಗೆ ಭೇಟಿ ನೀಡಿ ದುರಸ್ತಿಯಾದ ಕಾಲುವೆ ವೀಕ್ಷಣೆ ಮಾಡಿ ಬಸವನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದರು. ಅಲ್ಲಿ ನ್ಯಾಯಬೆಲೆ ಅಂಗಡಿ ನೋಡಿದ ಜಿಲ್ಲಾಧಿಕಾರಿ, ವಾಹನ ನಿಲ್ಲಿಸಿ ಅಂಗಡಿಗೆ ಹೋದಾಗ ಮಹಿಳೆಯೊಬ್ಬರು ಪಡಿತರ ಧಾನ್ಯಗಳನ್ನು ಪಡೆದುಕೊಂಡಿದ್ದರು.
ಅವರನ್ನು ಮಾತನಾಡಿಸಿ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ? ಎಷ್ಟು ಆಹಾರಧಾನ್ಯ ನೀಡುತ್ತಿದ್ದಾರೆ ಎಂದು ಡಿಸಿ ಮಾಹಿತಿ ಪಡೆದುಕೊಂಡರು. ಮೂರು ಕೆ.ಜಿ.ಅಕ್ಕಿ ಹಾಗೂ 2 ಕೆ.ಜಿ ರಾಗಿ ಪಡೆಯಲಾಗಿದೆ ಎಂದು ಮಹಿಳೆ ಉತ್ತರಿಸಿದರು. ಆಗ ತೂಕದ ನಿಖರತೆ ಪರೀಕ್ಷೆ ಮಾಡಲು ಮರು ತೂಕ ಮಾಡಲು ತಿಳಿಸಿದರು.
ನೀಡಬೇಕಿದ್ದ ಐದು ಕೆಜಿ ಆಹಾರಧಾನ್ಯದಲ್ಲಿ ಕೇವಲ 4 ಕೆಜಿ 300 ಗ್ರಾಂ ತೂಕ ಮಾಡಿದ್ದು ಪಡಿತರದಾರಿಗೆ 700 ಗ್ರಾಂ ಮೋಸ ಮಾಡಲಾಗಿದೆ ಎಂಬುದನ್ನು ಅರಿತ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸ್ಥಳದಲ್ಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಈ ನ್ಯಾಯಬೆಲೆ ಅಂಗಡಿಯನ್ನು ಅಮಾನತಿಗೆ ಸೂಚನೆ ನೀಡಿದರು. ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ತಹಸೀಲ್ದಾರ್ ಪಟ್ಟರಾಜಗೌಡ ಇದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net