

ದಾವಣಗೆರೆ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕರೆದೊಯ್ದು ಅತ್ಯಾಚಾರ ನಡೆಸಿದ್ದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ಪೋಕ್ಸೋ ನ್ಯಾಯಾಲಯವು 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ.ಗಳ ದಂಡ ವಿಧಿಸಿದೆ.
ಹರಿಹರ ತಾಲೂಕಿನ ಸೈಯದ್ ಮೋಸಿನ್ ಶಿಕ್ಷೆಗೆ ಗುರಿಯಾದ ಅಪರಾಧಿ. ಇದೇ ತಾಲೂಕಿನ ಗ್ರಾಮವೊಂದರ 17 ವರ್ಷ ವಯಸ್ಸಿನ ಬಾಲಕಿಯನ್ನು 2020ರ ಡಿ. 12ರಂದು ಸೈಯದ್ ಅಪಹರಿಸಿಕೊಂಡು ಗೋವಾ, ಮುಂಬೈ ನಂತರದಲ್ಲಿ ಪುಣೆಗೆ ಕರೆದೊಯ್ದು ಬಾಡಿಗೆ ಮನೆಯೊಂದರಲ್ಲಿ ಅತ್ಯಾಚಾರ ಎಸಗಿದ್ದ. ಹರಿಹರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿ, ಹರಿಹರ ವೃತ್ತ ಸಿಪಿಐ ಯು.ಸತೀಶ್‌ಕುಮಾರ್ ನಡೆಸಿದ ತನಿಖೆಯಲ್ಲಿ ಪುಣೆಯಲ್ಲಿ 2021ರಲ್ಲಿ ಜ. 18ರಂದು ಬಾಲಕಿಯನ್ನು ಪತ್ತೆ ಹಚ್ಚಿದ್ದರು. ತನಿಖೆ ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಶ್ರೀರಾಮ್ ನಾರಾಯಣ ಹೆಗಡೆ, ಅಪರಾಧಿ ವಿರುದ್ಧ ಬುಧವಾರ ಶಿಕ್ಷೆ ವಿಧಿಸಿದರು. ಅಲ್ಲದೇ ಅಪರಾಧಿಗೆ ವಿಧಿಸಿದ 1 ಲಕ್ಷ ರೂ.ಗಳ ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆಯೂ ತೀರ್ಪು ಪ್ರಕಟಿಸಿದರು. ಸಂತ್ರಸ್ತೆ ಪರ ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳರ್ ವಕಾಲತ್ತು ವಹಿಸಿದ್ದರು.
---