ಶ್ರಮ, ಮೌಲ್ಯಗಳೇ ಬಾಳಿನ ರಹದಾರಿ ರಂಭಾಪುರಿ ಶ್ರೀಗಳ ಅನಿಸಿಕೆ

1001023507.jpg
Published on

ದಾವಣಗೆರೆ: ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಜತೆಗೆ ಪರಿಶ್ರಮ, ಸಾಧನೆಯೂ ಅತ್ಯಗತ್ಯ. ಶ್ರಮದ ಬದುಕು ಶ್ರೇಯಸ್ಸಿಗೆ ಮೂಲವಾಗಿದೆ ಎಂದು ಬಾಳೆಹೊನ್ನೂರು ಪೀಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಬಾಳೆಹೊನ್ನೂರು ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ ಮತ್ತು ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಶ್ರೀ ಅಭಿನವ ರೇಣುಕ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ವೈಯಕ್ತಿಕ ಏಳಿಗೆ ಜತೆಗೆ ದೇಶದ ಪ್ರಗತಿ, ಬಡವರು, ಸೈನಿಕರು ಹಾಗೂ ರೈತರ ಅಭಿವೃದ್ಧಿಯತ್ತಲೂ ಚಿಂತನೆ ಮಾಡಬೇಕು. ದಿನದ ಅರ್ಧ ತಾಸು ಈ ಬಗ್ಗೆ ಆಲೋಚಿಸಿ ಕಾರ್ಯೋನ್ಮುಖರಾದಲ್ಲಿ ರಾಷ್ಟ್ರದ ಬೆಳವಣಿಗೆ ಅದ್ಭುತವಾಗಲಿದೆ ಎಂದು ತಿಳಿಸಿದರು.

ಬಡತನ ಬಂದಾಗ ಕುಗ್ಗದೆ ಸಿರಿತನ ಬಂದಾಗ ಹಿಗ್ಗದೆ ಕ್ರಿಯಾಶೀಲತೆ ಹೊಂದುವುದೇ ಜೀವನದ ಗುರಿ ಆಗಬೇಕಿದೆ. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದಂತೆ ಮನುಷ್ಯರು ಪರಸ್ಪರ ಬೆರೆತು ನಡೆಯುವುದರಲ್ಲೇ ಬದುಕಿನ ಗುಟ್ಟು ಅಡಗಿದೆ. ಬಾಹ್ಯ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವ ಜತೆಗೆ ಅಂತರಂಗದಲ್ಲಿ ಆಧ್ಯಾತ್ಮ ಸಂಪತ್ತು ವೃದ್ಧಿಸಿಕೊಳ್ಳುವ ಅಗತ್ಯವಿದೆ ಎಂದು ಆಶಿಸಿದರು.

ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಚನ್ನಗಿರಿ ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ರಚನೆಯ ‘ ಅರಿವಿನ ಹಣತೆ’ ಕೃತಿಯನ್ನು ಬಿಡುಗಡೆ ಮಾಡಿದರು. ನಂತರ ಅವರು ಮಾತನಾಡಿ ಪಂಚ ಪೀಠಗಳು ಮಾತ್ರವೇ ಮಾನವ ಕುಲಕ್ಕೆ ಜಯವಾಗಲಿ ಎಂಬ ಮಂತ್ರ ಪಠಿಸುತ್ತ ಬಂದಿವೆ. ಸಮಾಜದ ನ್ಯೂನತೆ ಸರಿಪಡಿಸಿ ರಾಜಕಾರಣಿಗಳು, ಜನಸಾಮಾನ್ಯರು ಸರಿದಾರಿಯಲ್ಲಿ ನಡೆಯುವಲ್ಲಿ ರಂಭಾಪುರಿ ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬಂದಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ 65 ಲಕ್ಷ ವೀರಶೈವರ ಜನಸಂಖ್ಯೆ ಇರುವುದಾಗಿ ಜಾತಿಗಣತಿಯಲ್ಲಿ ವ್ಯತ್ಯಾಸ ಮಾಡಿ ತೋರಿಸಲಾಗಿದೆ. ಗುರು-ವಿರಕ್ತರ ಜತೆಗೆ ಸಮಾಜದ ಒಳಪಂಗಡಗಳು ಒಗ್ಗೂಡಿ ವೀರಶೈವ ಲಿಂಗಾಯತರು ಒಂದೇ ಎಂಬುದನ್ನು ಸಾರಬೇಕಿದೆ. ಜನರು ಕೂಡ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಕೋರಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ ಭಾರತೀಯ ವಿಚಾರಗಳನ್ನು ಮೂಢನಂಬಿಕೆ ಎಂದು ಮೂದಲಿಸಿದ್ದ ವಿದೇಶೀಯರು, ಹಿಂದು ಸಂಸ್ಕೃತಿಯ ಆಚರಣೆಗಳು ವೈಜ್ಞಾನಿಕವಾಗಿವೆ ಎಂದು ಹೇಳುವ ಕಾಲ ಬಂದಿದೆ. ಭಾರತದ ಯೋಗ ಪದ್ಧತಿಯನ್ನು ಅನೇಕ ರಾಷ್ಟ್ರಗಳು ಪಾಲಿಸುತ್ತಿವೆ ಎಂದರಲ್ಲದೆ ವೀರಶೈವ ಸಮಾಜ ಶೈಕಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಿದೆ ಎಂದು ಹೇಳಿದರು.

ಸಹಕಾರಿ ಧುರೀಣ ಎನ್.ಎ.ಮುರುಗೇಶ್ ಮಾತನಾಡಿ ವೀರಶೈವ ಧರ್ಮ ವಿಭಜನೆ ಯತ್ನ ನಡೆದಾಗ ಎಲ್ಲ ಶ್ರೀಗಳು ಒಟ್ಟಾಗಿ ನಿಂತು ವಿರೋಧಿಸಿದರು. ಜಾತಿಗಣತಿಯಲ್ಲೂ ಕಡಿಮೆ ಪ್ರಮಾಣದ ಜನಸಂಖ್ಯೆ ತೋರಿಸುವ ಎರಡನೇ ಪ್ರಯೋಗ ನಡೆದಿದೆ. ವೀರಶೈವ-ಲಿಂಗಾಯತರು ಒಂದೇ ಎಂದು ತೋರಿಸುವ ಮಟ್ಟಿಗೆ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಬೇಕು ಎಂದರು. ಉದ್ಯಮಿ ಶಿವನಹಳ್ಳಿ ರಮೇಶ್ ಅವರಿಗೆ ಶ್ರಮ ಸೇವಾ ಸಂಜೀವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರು ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಸ್ವಾಮೀಜಿ, ಮಳಲಿ ಸಂಸ್ಥಾನ ಮಠದ ಡಾ.ಗುರು ನಾಗಭೂಷಣ ಸ್ವಾಮೀಜಿ, ಎಡೆಯೂರು ಕ್ಷೇತ್ರದ ರೇಣುಕ ಸ್ವಾಮೀಜಿ, ಚನ್ನಗಿರಿ ಕೇದಾರ ಶಿವಶಾಂತವೀರ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಸ್ವಾಮೀಜಿ, ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ, ಪರಮೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಬಿಜೆಪಿ ನಾಯಕಿ ಗಾಯತ್ರಿ ಸಿದ್ದೇಶ್ವರ, ಯಶವಂತರಾವ್ ಜಾಧವ್, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಶ್ರೀನಿವಾಸ ದಾಸಕರಿಯಪ್ಪ, ದೇವರಮನಿ ಶಿವಕುಮಾರ್, ದೇವರಮನಿ ಶಿವರಾಜ್ ಇತರರಿದ್ದರು. ಮಲ್ಲಿಕಾರ್ಜುನ ಬಾದಾಮಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net