ದೇವನಗರೀಲಿ ರಾಮನವಮಿ ಸಡಗರ ದೇಗುಲಗಳಲ್ಲಿ ತೊಟ್ಟಿಲೋತ್ಸವ

pixlr_20250407014058363.jpg
Published on

ದಾವಣಗೆರೆ: ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸ್ಮರಣೆಯ ಶ್ರೀರಾಮ ನವಮಿ ಉತ್ಸವ ಭಾನುವಾರ ನಗರಾದ್ಯಂತ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಇಡೀ ದಿನ ರಾಮ ಮಂತ್ರ ಜಪಿಸಲಾಯಿತು.

ಎಲ್ಲೆಡೆ ಶ್ರೀರಾಮ, ಆಂಜನೇಯ ದೇಗುಲಗಳು ಹೂವು, ವಿದ್ಯುಲಂಕಾರ, ತಳಿರು ತೋರಣದ ಸಿಂಗಾರದೊಂದಿಗೆ ಕಳೆಗಟ್ಟಿದ್ದವು. ಪ್ರಮುಖ ವೃತ್ತ, ರಸ್ತೆಗಳಲ್ಲಿ ಶ್ರೀರಾಮನ ಕಟೌಟ್‌ಗಳು ರಾರಾಜಿಸಿದವು. ಬಿರುಬಿಸಿಲಲ್ಲೂ ಭಕ್ತರು ದೇವರ ದರ್ಶನ ಪಡೆದರು.

ಪಿ.ಬಿ.ರಸ್ತೆಯ ಶ್ರೀ ಕೋದಂಡರಾಮ ದೇವಸ್ಥಾನ, ಪಿ.ಜೆ. ಬಡಾವಣೆಯ ಖಮಿತ್ಕರ್ ಈಶ್ವರಪ್ಪನವರ ರಾಮಮಂದಿರ ಹಾಗೂ ಚಾಮರಾಜಪೇಟೆಯ ಕೋದಂಡರಾಮ ದೇವಸ್ಥಾನ ಸೇರಿ ವಿವಿಧೆಡೆ ಶ್ರೀರಾಮನನ್ನು ಹೂವಿನಂಕೃತ ತೊಟ್ಟಿಲಲ್ಲಿ ಕೂರಿಸಿ ಉತ್ಸವ, ಪೂಜೆ ಸಲ್ಲಿಸಲಾಯಿತು. ಬೆಳಗಿನಿಂದಲೇ ವಿಶೇಷ ಪೂಜೆ, ಪಂಚಾಮೃತಾಭಿಷೇಕ ನಡೆದವು. ಜಯದೇವ ವೃತ್ತದ ಶ್ರೀರಾಮನ ದೇಗುಲದಲ್ಲೂ ಪೂಜಾ ವಿಧಿಗಳು ಜರುಗಿದವು. ಹೆಂಗಳೆಯರು ರಾಮನ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಿದರು.

ಶ್ರೀರಾಮ, ಸೀತಾದೇವಿ, ಲಕ್ಷ್ಮಣ, ಹನುಮಂತ ದೇವರ ಮೂರ್ತಿಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಹರಕೆ ಹೊತ್ತ ಹೆಂಗಳೆಯರು ರಾಮನನ್ನು ಇರಿಸಿದ್ದ ತೊಟ್ಟಿಲನ್ನು ತೂಗಿ ಪ್ರಾರ್ಥನೆ ನಿವೇದಿಸಿಕೊಂಡರು. ಮಂದಿರಗಳಲ್ಲಿ ಹೂವು-ಹಣ್ಣು, ತೆಂಗಿನಕಾಯಿ, ತುಳಸಿಮಾಲೆ, ಪ್ರಸಾದದ ಭಕ್ತಿ ಸಮರ್ಪಿಸಿದರು.

ಚಾಮರಾಜಪೇಟೆಯ ಕೋದಂಡರಾಮ ದೇವಸ್ಥಾನದಲ್ಲಿ 9 ದಿನದ ರಾಮೋತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ ಕುಂಕುಮಾರ್ಚನೆ ಅಲಂಕಾರ, ನವಗ್ರಹ ಜಪ ನಡೆದರೆ ರಾತ್ರಿ ಮಂತ್ರಪುಷ್ಪ ಅಷ್ಟಾವಧಾನ ಸೇವೆ ನಡೆದವು.

ಸಾಂಸ್ಕೃತಿಕ ಕಾರ್ಯಕ್ರಮ

ಪಿ.ಬಿ. ರಸ್ತೆಯ ದೇವಸ್ಥಾನದಲ್ಲಿ ಸಂಜೆ ಮೈಸೂರಿನ ವಾಣಿ, ಬೆಂಗಳೂರಿನ ವೀಣಾ ಅವರು ಶ್ರೀರಾಮ ದರ್ಶನ ಹರಿಕಥೆ ಕೀರ್ತನೆ ನಡೆಸಿಕೊಟ್ಟರು. ಖಮಿತ್ಕರ್ ರಾಮಮಂದಿರದಲ್ಲಿ ಸಂಜೆ ಶುಭ ಸಂಗಡಿಗರಿಂದ ವೀಣಾವಾದನ, ಭಾವಸಾರ ಕ್ಷತ್ರಿಯ ಮಹಿಳಾ ಭಜನೆ ಮಂಡಳಿಯಿಂದ ಭಕ್ತಿಗೀತೆಗಳ ಗಾಯನ, ಚಿತ್ರ ಕಲಾವಿದ ಶಾಂತಯ್ಯ ಪರಡಿಮಠ ಅವರಿಂದ ಸ್ಥಳದಲ್ಲೇ ಚಿತ್ರ ಬರೆಯುವ ಕಾರ್ಯಕ್ರಮ ನಡೆಯಿತು.

ಸರಸ್ವತಿ ನಗರದ ಪಂಚಮುಖಿ ಆಂಜನೇಯ ದೇವಸ್ಥಾನ ಸೇರಿ ವಿವಿಧೆಡೆ ಮಾರುತಿ ದೇಗುಲಗಳಲ್ಲೂ ವಿಶೇಷ ಪೂಜೆ ನಡೆದವು. ನಿಟುವಳ್ಳಿ, ಜಯನಗರ, ಜಯದೇವ ವೃತ್ತ, ವಿನೋಬನಗರ ಸೇರಿ ವಿವಿಧೆಡೆ ಭಕ್ತರಿಗೆ ವಿವಿಧ ಸಂಘಟನೆಗಳಿಂದ ಪಾನಕ-ಕೋಸಂಬರಿ ವಿತರಿಸಲಾಯಿತು.

ಮಕ್ಕಳಿಗೆ ಅಕ್ಷರಾಭ್ಯಾಸ

ನಗರದ ನಿಜಲಿಂಗಪ್ಪ ಬಡಾವಣೆಯ ಶ್ರೀ ಶಾರದಾಂಬಾ ದೇವಸ್ಥಾನದಲ್ಲೂ ರಾಮನವಮಿ ಆಚರಣೆ ನಡೆಯಿತು. ಶಂಕರಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ ಅವರು ಗಣೇಶ ಶಿವರಾಂ ಹೆಗಡೆ ಅವರ ಪೌರೋಹಿತ್ಯದಲ್ಲಿ ಪೂಜೆ ನಡೆಸಿದರು. ಪುರೋಹಿತ ರಾಮಚಂದ್ರ ಭಟ್ ಅವರು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ವಿವಿಧೆಡೆಗಳಿಂದ ಪಾಲಕರು ಮಕ್ಕಳೊಂದಿಗೆ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net