

ದಾವಣಗೆರೆ: ಕರ್ನಾಟಕದಲ್ಲಿ ಕಲಾವಿದರಲ್ಲಿ ಪ್ರೀತಿಸುವ ಊರು ಇದ್ದರೆ ಅದು ದಾವಣಗೆರೆ. ಇಲ್ಲಿಗೆ ಬಂದಾಗೆಲ್ಲ ನಮ್ಮ ಮನೆ, ನಮ್ಮ ಓಣಿಗೆ ಬಂದ ಭಾವನೆ ಮೂಡುತ್ತದೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ, ರಂಗ ನಟ ಡಾ. ರಾಜು ತಾಳಿಕೋಟೆ ಅಭಿಮಾನಿಸಿದರು.
ನಗರಪಾಲಿಕೆಯ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ವೃತ್ತಿ ರಂಗಭೂಮಿ ಕಲಾವಿದರ ಸಂಘದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಅರಿಶಿನಗೋಡಿ ಕಂಪನಿಯಲ್ಲಿದ್ದಾಗ 1993-94ರಲ್ಲಿ ಇಲ್ಲಿಗೆ ಬಂದಿದ್ದೆ. ಸ್ವಂತ ಸಂಸ್ಥೆ ಕಟ್ಟಿ ಈ ಊರಿಗೆ ಬಂದು ನಗರಪಾಲಿಕೆ, ಅರುಣ ಥಿಯೇಟರ್, ಬಸ್ ನಿಲ್ದಾಣ ಬಳಿ ನಾಟಕ ಪ್ರದರ್ಶನ ಮಾಡಿದ್ದೆ. ದಾವಣಗೆರೆಯಲ್ಲಿ ಕಲಾವಿದರಿಗೆ ದಾನ ನೀಡುವ ದಾನಿಗಳಿದ್ದಾರೆ ಎಂದು ಸ್ಮರಿಸಿದರು.
ನಾನೊಬ್ಬ ಕಂನಿ ಮಾಲಿಕನಾಗಿ ಬಂದಾಗ, ಗಂಡ-ಹೆಂಡತಿಗೆ ತಿಂಗಳಿಗೆ 2500 ರೂ. ಪಗಾರ ಇರುತ್ತಿತ್ತು. ನನ್ನ ತಂಗಿ ಮದುವೆ ಸಹಾಯಾರ್ಥವಾಗಿ ಈ ನಗರದಲ್ಲಿ ನಾಟಕ ಪ್ರದರ್ಶನ ಮಾಡಿದಾಗ 1.25 ಲಕ್ಷ ರೂ. ಸಂಗ್ರಹವಾಯಿತು. ಆಗಲೇ ಇಲ್ಲಿ ಸೈಕಲ್ ಮೋಟಾರಿನಲ್ಲಿ ಓಡಾಡುತ್ತಿದ್ದೆ ಎಂದರೆ ಅದು ದಾವಣಗೆರೆ ಜನರು ನೀಡಿದ ಆಶೀರ್ವಾದ ಎಂದು ಸ್ಮರಿಸಿದರು.
ರಂಗ ನಟಿ ಚಿಂದೋಡಿ ಲೀಲಾ ಅವರ ಅವಧಿಯಲ್ಲಿ ಎಲ್ಲರೂ ಸೇರಿ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಸಮ್ಮೇಳನ ಮಾಡಿದ್ದೆವು. ಈಗ ಬೇರೆ ಬೇರೆಯಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೂ, ಎಲ್ಲರೂ ಮಾಡುತ್ತಿರುವುದು ವೃತ್ತಿ ರಂಗಭೂಮಿ ಹಾಗೂ ಶಾರದಾಂಬೆಯ ಸೇವೆಯೇ ಎಂದರು.
ಸರ್ಕಾರ, ನಾಟಕ ಅಕಾಡೆಮಿ ಮಾಡುವ ಕೆಲಸವನ್ನು ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘವು ಹಂಸಕ್ಷೀರ ನ್ಯಾಯದಂತೆ ನಿರ್ವಹಿಸಿದೆ. ಕಲಾವಿದರನ್ನು ಒಟ್ಟುಗೂಡಿಸಿ 25 ವರ್ಷ ಕಾಲ ಸಂಘ ನಡೆಸಲಾಗಿದೆ. ಇದು 50 ವರ್ಷ ತಲುಪಲಿ ಎಂದು ಹಾರೈಸಿದರಲ್ಲದೆ ಸಂಘವು ಹೊಸ ನಾಟಕಗಳನ್ನು ಪ್ರದರ್ಶಿಸಬೇಕು. ಹೊಸ ಕಲಾವಿದರಿಗೆ ಅವಕಾಶ ನೀಡಬೇಕು ಎಂದೂ ಹೇಳಿದರು.
ರಂಗ ವಿಮರ್ಶಕ ಅಜಿತ್ ಘೋರ್ಪಡೆ ಮಾತನಾಡಿ ರಂಗಭೂಮಿ ಮನರಂಜನೆಗೆ ಸೀಮಿತವಾಗದೆ ಸ್ವಾತಂತ್ರೃ ಚಳವಳಿಗೆ ಕೊಡುಗೆ ನೀಡಿದೆ. ಆದರೆ ಇದಕ್ಕೆ ಹಿಡಿದ ಗ್ರಹಣ ದೂರವಾಗಬೇಕು. ಇಂದಿನ ಕಲಾವಿದರಿಗೆ ಭದ್ರತೆ, ಅವರ ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ. ಇದರ ಅಗತ್ಯ ಇಂದಿದೆ ಎಂದರು.
ಬೆಳ್ಳಿಹಬ್ಬ ಸ್ಮರಣಸಂಚಿಕೆ ಬಿಡುಗಡೆಗೊಳಿಸಿದ ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಮಾತನಾಡಿ ದಾವಣಗೆರೆ ನಗರಪಾಲಿಕೆಯಿಂದ ರಂಗಭೂಮಿ ಕಲಾವಿದರಿಗೆ ತಿಂಗಳಿಗೆ 2 ಕಾರ್ಯಕ್ರಮ ನೀಡುವ ಕೆಲಸ ಆಗಬೇಕಿದೆ. ಈ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎ. ಭದ್ರಪ್ಪ, ಉಪಾಧ್ಯಕ್ಷೆ ಜಿ.ನಾಗವೇಣಿ, ಪ್ರಧಾನ ಕಾರ್ಯದರ್ಶಿ ಮಹೇಶ್ವರಪ್ಪ ದೊಡ್ಮನಿ, ಉಪಾಧ್ಯಕ್ಷ ತಿಪ್ಪೇಶರಾವ್ ಚವ್ಹಾಣ್, ಕಲಾವಿದ ನಾಗರಾಜ ಕುಡುಪಲಿ ಇದ್ದರು. ಇದೇ ವೇಳೆ ಸಂಘದ ಕಲಾವಿದರಿಂದ ಪಿ.ಬಿ. ಧುತ್ತರಗಿ ವಿರಚಿತ ‘ಭಂಡ ಬಡ್ಡಿ ಮಗ’ ಹಾಸ್ಯ ನಾಟಕ ಪ್ರದರ್ಶಿತವಾಯಿತು.
----
ರಂಗಾಯಣ ನಿರ್ದೇಶಕರ ಬಗ್ಗೆ ಅಪಸ್ವರ
ವೃತ್ತಿ ರಂಗಭೂಮಿ ಎಂದರೆ ಏನೆಂದು ಗೊತ್ತಿಲ್ಲದವರೇ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಸಮರ್ಥ ಪತ್ರಕರ್ತರು ನಿಜ. ಆದರೆ ಕಲಾವಿದರೇ ಎಂಬುದು ತಿಳಿದಿಲ್ಲ ಎಂದು ರಾಜು ತಾಳಿಕೋಟೆ ಅವರು ದಾವಣಗೆರೆ ರಂಗಾಯನ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರ ಹೆಸರು ಹೇಳದೆ ಟೀಕಿಸಿದರು.
ಮಂಡ್ಯ, ಮೈಸೂರು ಭಾಗದಲ್ಲಿ ಅದ್ಭುತ ಲೈಟಿಂಗ್, ವೇಷಭೂಷಣ, ಸೀನರಿ ಬಳಸಿ, ಸ್ವಂತ ಹಣ ಖರ್ಚು ಮಾಡಿ ಪವರಾಣಿಕ ನಾಟಕ ಆಡುತ್ತಾರೆ. ಆದರೆ ಅದನ್ನೇ ಅವರು (ಕಡಕೋಳ) ವೃತ್ತಿ ರಂಗಭೂಮಿ ಎಂದು ಭಾವಿಸಿದ್ದಾರೆ. ಹಣ ಇದ್ದರೂ, ಇಲ್ಲದಿದ್ದರೂ ಊಟ ಸಿಕ್ಕರೂ ಸಿಗದಿದ್ದರೂ, ಮಳೆ-ಬಿಸಿಲು- ಬಿರುಗಾಳಿ ಬಂದರೂ ದುಡಿಯುವುದೇ ವೃತ್ತಿ ರಂಗಭೂಮಿಯಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ದಾವಣಗೆರೆ ರಂಗಾಯಣಕ್ಕೆ 3 ಕೋಟಿ ರೂ. ಅನುದಾನ ನೀಡಿದೆ. ನಾವಿಬ್ಬರೂ ಏಕಕಾಲಕ್ಕೆ ನಿರ್ದೇಶಕರಾದರೂ ಮೈಸೂರು ಮತ್ತು ಧಾರವಾಡ ರಂಗಾಯಣ ಮಾತ್ರವೇ ರೆಪರ್ಟರಿ ಸಿಕ್ಕಿದೆ. ಇಲ್ಲಿನ ನಿರ್ದೇಶಕರು ಮ್ಯೂಸಿಯಂನಂಥ ದೊಡ್ಡ ಕನಸು ಕಾಣುತ್ತಿದ್ದಾರೆ. ಇದು ಆಗುವ ಮಾತಲ್ಲ. ಅದು ಆಗಿದ್ದೇ ಆದಲ್ಲಿ ದೀಡುನಮಸ್ಕಾರ ಮಾಡುತ್ತೇನೆ. ಅದು ಆಗುವುದಾದರೆ ಬೆಂಬಲ ನೀಡುತ್ತೇವೆ ಎಂದೂ ಹೇಳಿದರು.
ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ವಸತಿ ವ್ಯವಸ್ಥೆ ಅಥವಾ ಥಿಯೇಟರ್ ಕಟ್ಟಿಕೊಡಬಹುದಾದ ದಾನಿಗಳು ಇದ್ದಾರೆ. ಇಲ್ಲಿನ ರಂಗಾಯಣಕ್ಕೆ 10 ಎಕರೆ ಜಾಗವಿದೆ. ಕಲಾವಿದರ ಹಸಿವು ನೀಗಿಸುವ, ಕಲಾವಿದರಿಗೆ ನಾಟಕಗಳನ್ನು ನೀಡುವ, ರಂಗನಟರ ಕೊರತೆ ನೀಗುವ ಕೆಲಸವಾಗಬೇಕು. ದಾವಣಗೆರೆ ಜನರ ಪ್ರೀತಿ ವಿಶ್ವಾಸ ಗಳಿಸಿದರೆ ಅವರಿಗಿನ್ನೂ 2 ವರ್ಷ ಕಾಲಾವಕಾಶವಿದೆ ಎಂದು ಸೂಚ್ಯವಾಗಿ ಹೇಳಿದರು.
----