ಮೂರು ದಿನದಲ್ಲಿ ಮಳೆಹಾನಿ ವರದಿ ಸಲ್ಲಿಸಿ- ಜಿಲ್ಲಾಧಿಕಾರಿ ತಾಕೀತು

1001221902.jpg
Published on

ದಾವಣಗೆರೆ: ಪ್ರಸಕ್ತ ವರ್ಷದ ಮುಂಗಾರು ಮಳೆಯಿಂದ ಹಾನಿಗೀಡಾದ ಬೆಳೆಪ್ರದೇಶ, ಕಟ್ಟಡ, ಇನ್ನಿತರೆ ನಷ್ಟದ ಕುರಿತು ಸಂಪೂರ್ಣ ವರದಿಯನ್ನು ಇನ್ನು ಮೂರು ದಿನದಲ್ಲಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಳೆಹಾನಿ ಸಂಬಂಧ ಶನಿವಾರ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ನಿಂದ ಕಳೆದ ಬಾರಿ ಜಿಲ್ಲೆಯಲ್ಲಿ ಆದ ಅನಾವೃಷ್ಠಿಗೆ ಬಿಡುಗಡೆಯಾದ ಅನುದಾನಕ್ಕೆ ತಕ್ಕ ನಿಖರ ಮಾಹಿತಿ ನೀಡಬೇಕು. ಹಣ ಸದ್ಬಳಕೆಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದರು.

ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಕೃಷಿ, ತೋಟಗಾರಿಕೆ ಬೆಳೆ, ಅಂಗನವಾಡಿ, ಶಾಲಾ ಕೊಠಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಳು, ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕ, ರಸ್ತೆ, ಕೆರೆ, ಸೇತುವೆಗಳು ಸೇರಿ ಕುಡಿವ ನೀರಿನ ಪೈಪ್‌ಲೈನ್‌ಗಳು ಹಾನಿಯಾಗಿವೆ. ಈ ಕುರಿತು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ತಂಡಗಳನ್ನು ರಚಿಸಿ, ಪ್ರತಿ ತಂಡದಲ್ಲಿ ಒಬ್ಬ ತಂತ್ರಜ್ಞರನ್ನು ನಿಯೋಜಿಸಿ, ಹಾನಿಯಾದ ವಿವರವನ್ನು ಜಿ.ಪಿ.ಎಸ್ ಆಧಾರಿತ ಪೋಟೋದೊಂದಿಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು.

ಅಕಾಲಿಕ ಮಳೆಗೆ ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು 50 ರಿಂದ 100 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಆದ್ದರಿಂದ ಹಾನಿಯ ಪ್ರಸ್ತಾವನೆಯನ್ನು ಇಲಾಖೆಯ ಮುಖ್ಯಸ್ಥರು ಸಲ್ಲಿಸಬೇಕು. ವಿಳಂಬವಾದಲ್ಲಿ ಅಥವಾ ಕರ್ತವ್ಯ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 104 ಕಿ.ಮೀ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದು ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಮಳೆಯಿಂದ ಹಾನಿಯಾಗಿದ್ದನ್ನು ದುರಸ್ತಿ ಮಾಡಿದ ಬಗ್ಗೆ ಮತ್ತು ಹಾನಿಯಾಗಿರುವ ಬಗ್ಗೆ ಪ್ರತ್ಯೇಕವಾಗಿ ವರದಿ ನೀಡಬೇಕು. ಮಳೆಗೆ ಮೊದಲು 57 ಕೆರೆ ಒಡಲು ತುಂಬಿಸಲಾಗಿತ್ತು. ಹಿಂಗಾರಿನಲ್ಲಿ ಸುರಿದ ಮಳೆಗೆ ಕೆರೆಗಳ ಕಟ್ಟೆ, ಕೋಡಿ ಒಡೆದು ಶಿಥಿಲಾವಸ್ಥೆಗೆ ತಲುಪಿರುವ ಕುರಿತು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದರು.

ನಗರಪ್ರದೇಶದಲ್ಲಿ ಅನಧಿಕೃತ ಹಂದಿ ಸಾಕಾಣಿಕೆ ಮಾಡಿ ನಗರ ಸೌಂದರ್ಯ ಹಾಳು ಮಾಡುವವರ ವಿರುದ್ಧ ಮತ್ತು ಬಿಡಾಡಿ ದನಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು ಸಂಬಂಧಿಸಿದ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ವಹಿಸಲಾಗುವುದು. ನಗರದಲ್ಲಿ ಸ್ವಚ್ಛತೆ ಕಾಪಾಡುವುದು ನಮ್ಮ-ನಿಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್, ಎಡಿಸಿ ಶೀಲವಂತ ಶಿವಕುಮಾರ್, ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಹಾಗೂ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net