

ದಾವಣಗೆರೆ: ಭಾರತ ಸ್ವಾತಂತ್ರೃಕ್ಕೆ ಎಂಟು ದಶಕವಾದರೂ ಕಾಣದ ಪರಕೀಯರ ದಾಸ್ಯ ವಿಮೋಚನೆ, ಮುಂದುವರಿದ ಗುಲಾಮಗಿರಿ, ಜಾಗತೀಕರಣದ ಸೋಂಕು ಮೊದಲಾದವು ಕವನಗಳ ರೂಪದಲ್ಲಿ ಹರಿದಾಡಿದವು. ಆತ್ಮನಿರ್ಭರ ಭಾರತ, ದೇಶದ ಅಂತಃ‘ಸ್ವತ್ವ’ ರಕ್ಷಣೆಗಾಗಿ ಕೆಲವು ಕವಿ ಮನಸುಗಳು ಮಿಡಿದವು.
ಇಲ್ಲಿನ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ನಾಲ್ಕನೇ ರಾಜ್ಯ ಅಧಿವೇಶನದ ಎರಡನೇ ದಿನವಾದ ಭಾನುವಾರ ಆಯೋಜಿಸಿದ್ದ ಕವಿಗೋಷ್ಠಿಯ ಹೂರಣವಿದು. ರಾಜ್ಯದ ವಿವಿಧೆಡೆಯ 18ಕ್ಕೂ ಹೆಚ್ಚು ಕವಿಗಳು ತಮ್ಮ ಕಾವ್ಯಗಳಲ್ಲಿ ವಿಚಾರದ ಬುತ್ತಿ ಉಣಬಡಿಸಿದರು.
‘ಆತ್ಮನಿರ್ಭರ್ ಬನೆ’ ಎಂಬ ಶೀರ್ಷಿಕೆಯಡಿ ಗಂಗಾವತಿಯ ಕವಯಿತ್ರಿ ಅವನಿ, ಹಿಂದಿಯಲ್ಲಿ ಕಾವ್ಯ ವಾಚಿಸಿದರು. ಡಿಟಟಲೀಕರಣದಲ್ಲಿ ಮುಳುಗಿದ ಮಾನವ ಪ್ರಾಮಾಣಿಕತೆ, ಮಾನವತ್ವ ಕಳೆದುಕೊಂಡಿದ್ದಾನೆ ಎಂದರಲ್ಲದೆ, ದೇಶವನ್ನು ನಾವೇ ಆತ್ಮನಿರ್ಭರವಾಗಿ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ದಾವಣಗೆರೆಯ ಸುನೀತಾ ಪ್ರಕಾಶ್ ‘ಆತ್ಮ ನಿರ್ಭರತೆ’ ಶೀರ್ಷಿಕೆಯ ಕವನದ ಮೂಲಕ ಭಾರತದ ಮೇಲಿನ ದಾಳಿ, ರೈತರ ನೋವುಗಳನ್ನು ಬಿಚ್ಚಿಟ್ಟರು. ಎರಡು ಬಗೆವ ಕುಜನರ ಕುಲಕೆ ಕುಠಾರವಾಗುವುದು ಸತ್ಯ ಎಂಬುದಾಗಿ ಕುತಂತ್ರಿ ದೇಶಗಳಿಗೆ ಎಚ್ಚರಿಕೆ ನೀಡಿದಂತಿತ್ತು.
ಬೆಳಗಾವಿಯ ಸುಷ್ಮಾ ಲೋಣಿ ‘ಸಾಹಿತ್ಯದಲ್ಲಿ ಸ್ವತ್ವ’ ಕವಿತೆ ಮೂಲಕ ಭಾರತತ್ವದ ಸ್ವತ್ವ ರಾರಾಜಿಸಬೇಕು. ಸ್ವತಂತ್ರ ಎಂಬ ಶಕ್ತಿ ಮಂಜನು ಸರಿಸುವ ಪಂಜಾಗಲಿ ಎಂದೂ ಆಶಯ ಹೊರಹಾಕಿದರು. ಬೆಂಗಳೂರಿನ ಶೀಲಾ ಅರಕಲಗೂಡು ಅವರು ‘ನಮ್ಮತನವೆಂಬ ನಿಧಿ’ ಕವಿತೆ ಮೂಲಕ ನಾವು ಪಶ್ಚಿಮದ ಕಡೆ ನೋಡಿ ಬೇಡುವುದನ್ನು ಕೈಬಿಡಬೇಕೆಂಬ ಗುಟ್ಟು ಹೇಳಿದರು.
ಸ್ವಾತಂತ್ರೃ ಬಂದ ಮೇಲೆ ಅರಾಜಕತೆ, ಅತಂತ್ರ ಸರ್ಕಾರ ಹೆಚ್ಚಿವೆ ಎಂಬುದನ್ನು ಬೀದರ್‌ನ ವರದರಾಜ ಕಾ. ಬಾವಗೆ ಮಾರ್ಮಿಕವಾಗಿ ಹೇಳಿದರು. ಶಿರ್ಸಿಯ ಸೀತಾ ಹೆಗಡೆ ‘ಮತ್ತೆ ಗಳಿಸಬೇಕು’ ಎಂಬ ಕವನದ ಮೂಲಕ ಮಕ್ಕಳಲ್ಲಿ ನೆಲ-ಜಲ, ಗೋವಿನ ಗೌರವ ಬಿತ್ತಬೇಕೆಂದರು.
ಸ್ವತ್ವ-ತತ್ವ-ಸಾಕಾರ ಶೀರ್ಷಿಕೆಯಡಿ ದಾವಣಗೆರೆಯ ಕವಯಿತ್ರಿ ವೀಣಾ ಕೃಷ್ಣಮೂರ್ತಿ ಕವಿತೆ ವಾಚಿಸಿದರು. ಜಾಗತೀಕರಣದ ಮಹದಬ್ಬರದಲ್ಲಿ ಸಂಸ್ಕೃತಿ- ಸಂಸ್ಕಾರ ಕೊಚ್ಚಿ ಹೋಗದಿರಲಿ ಎಂಬ ಸದಾಶಯ ವ್ಯಕ್ತಪಡಿಸಿದರು.
‘ನಮ್ಮಯ ತನವ ಬಿಟ್ಟು ನಡೆವು ಎಲ್ಲವ ಗಾಳಿಗೆ ತೂರಿ, ಅಮ್ಮನ ಅಕ್ಕರೆ ರೊಟ್ಟಿಯ ನುಂಗಿದೆ ಪಿಜ್ಜಾ ಹೆಮ್ಮಾರಿ!’ ಎಂಬ ಕವನದ ಸಾಲುಗಳ ಮೂಲಕ ಕೊಪ್ಪದ ಕೆ. ಎಸ್. ನಾಗಭೂಷಣ್, ಸನಾತನ ಪರಂಪರೆಯ ವಿಶಿಷ್ಟತೆ ಬಗ್ಗೆ ಬೆಳಕು ಚೆಲ್ಲಿದರು. ‘ದೇವರಿಲ್ಲ’ ಎಂಬ ಶೀರ್ಷಿಕೆ ಹೊತ್ತ ಕವನದ ಮೂಲಕ ಶಿವಮೊಗ್ಗದ ಅರಬಗಟ್ಟೆ ಅಣ್ಣಪ್ಪ ಅವರು ಹಳೆಯ ಮತ್ತು ಈಗಿನ ಪೀಳಿಗೆಯ ಜೀವನಶೈಲಿಯನ್ನು ವಿಡಂಬನೆ ಮಾಡಿದರು.
ಚಿಕ್ಕಬಳ್ಳಾಪುರದ ಎಸ್.ಕೆ. ಸುರೇಶ್ ‘ಅಪ್ಪಾ’ ಎಂದೊಡೆ ಎದೆಯಲಿ ಮೂಡುವ ಧೈರ್ಯವು ’ಡ್ಯಾಡಿ’ ಎಂದರೆ ಬರದಲ್ಲ ಎಂದು ಹೇಳುವ ಮೂಲಕ ಕನ್ನಡ ಹಾಗೂ ಸ್ವದೇಶಿ ಪ್ರೀತಿ ಉಳಿಸಿಕೊಳ್ಳಬೇಕೆಂದರು. ದಕ್ಷಿಣ ಕನ್ನಡದ ನಾರಾಯಣ ಫಡಕೆ ಅವರು ಭಾರತೀಯ ಸಂಸ್ಕೃತಿ-ಪರಂಪರೆಯ ಉಳಿಸಿ ರಾಮರಾಜ್ಯ ಸಾಕಾರಗೊಳಿಸಬೇಕೆಂದು ಆಶಿಸಿದರು.
ಉಡುಪಿಯ ಮಂಜುನಾಥ ಮರವಂತೆ ಅವರು ‘ನಮ್ಮರಿವಿನ ಸ್ವತ್ವ’, ಶೃಂಗೇರಿಯ ಶಿಕ್ಷಕಿ ಜಯಶ್ರೀ ಗಣೇಶ್ ‘ಬಿಂಬಿಸುವಿಕೆ’, ಯಲ್ಲಾಪುರದ ದ್ವಿತೀಯ ಪಿಯು ವಿದ್ಯಾರ್ಥಿ ತೇಜಸ್ವಿ ಗಾಂವ್ಕರ್ ‘ಸ್ವಾತಂತ್ರೃ ಬರಿಯ ಮಾತಲ್ಲ’, ಬೆಂಗಳೂರಿನ ಬಿ.ಎನ್. ರಮ್ಯಾ ‘ಸಾಹಿತ್ಯದಲ್ಲಿ ಸ್ವತ್ವ’, ಕುಮಟಾದ ಕೃಪಾ ಭಟ್ಟ ಅವರು ‘ನಿತ್ಯ ಪರ್ವ’, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಪ್ರಸಾದ್ ಆರಾಧ್ಯ ‘ಬದಲಿಸುವ ಬನ್ನಿ ಭಾರತವ’ ಶೀರ್ಷಿಕೆಯಡಿ ಕವಿತೆ ವಾಚಿಸಿದರು.
ಕಾವ್ಯಕ್ಕೆ ಆಯಸ್ಸು ಹೆಚ್ಚು:
ಗದ್ಯಕ್ಕಿಂತಲೂ ಕಾವ್ಯಕ್ಕೆ ಆಯಸ್ಸು ಹೆಚ್ಚು. ಎಲ್ಲ ಭಾಷೆಯ ಸಾಹಿತ್ಯದಲ್ಲಿ ಗದ್ಯಕ್ಕಿಂತ ಕವನ ಸಂಕಲನಗಳೇ ಹೆಚ್ಚಾಗಿ ಪ್ರಕಟಗೊಂಡಿವೆ. ಎಂದು ಕವಿ ದಿನಾಕರ ಹೆಗಡೆ ಕೆರೆಹೊಂಡ ಹೇಳಿದರು.
ಕವನಗಳ ಅವಲೋಕನ ಮಾಡಿದ ಅವರು, ಅನುಭವವೇ ಕಾವ್ಯದ ವಸ್ತುವಾದಲ್ಲಿ ಮನ ಮುಟ್ಟುತ್ತದೆ. ಕಾವ್ಯಗಳಲ್ಲಿ ಪ್ರಯೋಗಶೀಲತೆ, ಪ್ರಸಾದದ ಗುಣದ ಜತೆಗೆ ಆಶಾಭಾವನೆ, ಭರವಸೆಯ ಬೆಳಕು ಮೂಡಿಸಬೇಕು ಎಂದು ತಿಳಿಸಿದರು.
ಕಾವ್ಯ ವಾಚ್ಯವಾಗದೆ ಸೂಚ್ಯವಾಗಿದ್ದಷ್ಟು ಸಂವೇದನಾಶೀಲತೆ ಹೆಚ್ಚಲಿದೆ. ಶಬ್ದ, ಪ್ರಾಸಗಳಿಗೆ ಜೋತುಬಿದ್ದರೆ ಅನರ್ಥವಾಗಬಹುದು ಎಂದೂ ಸೂಕ್ಷ್ಮತೆಗಳ ಬಗ್ಗೆ ವಿವರಿಸಿದರು.