

ದಾವಣಗೆರೆ: ಆಗಾಗ್ಗೆ ತಂಪೆರೆಯುತ್ತಿದ್ದ ಮಳೆಯ ತುಂತುರು. ರಾಜ ಮಾರ್ಗಗಳಲ್ಲಿ ಮಾರ್ದನಿಸಿದ ಹರೇ ಕೃಷ್ಣ, ಹರೇ ರಾಮ ಕೀರ್ತನೆ, ಭಾವಪರವಶರಾಗಿ ತೇರನೆಳೆದ ಭಕ್ತರು.
ದಾವಣಗೆರೆಯ ಕೋದಂಡರಾಮ ದೇವಸ್ಥಾನ ಬಳಿ ಕಂಡುಬಂದ ಪುರಿ ಜಗನ್ನಾಥ ರಥಯಾತ್ರೆಯ ನೋಟವಿದು. ಇಸ್ಕಾನ್ ಸಂಸ್ಥೆಯ ದಾವಣಗೆರೆ ಶಾಖೆಯಿಂದ ನಾಲ್ಕನೇ ಬಾರಿಗೆ ಆಯೋಜನೆಯಾಗಿದ್ದ ಯಾತ್ರೆಗೆ ಮಳೆರಾಯನೂ ಜತೆಯಾದ! ಜರ್ಕಿನ್ ಧರಿಸಿ, ಕೊಡೆಗಳನ್ನು ಹಿಡಿದು ಭಕ್ತರು ಹೆಜ್ಜೆ ಹಾಕಿದರು.
ಅಶ್ವಾರೂಢ ರಥದಲ್ಲಿ ಪುರಿ ಜಗನ್ನಾಥ, ಬಲರಾಮ ಹಾಗೂ ಸುಭದ್ರಾ ದೇವಿಯ ಪೂಜಾ ಮೂಲ ವಿಗ್ರಹಗಳನ್ನು ಅಲಂಕರಿಸಲಾಗಿತ್ತು. ಪೂಜೆ, ಮಹಾಮಂಗಳಾರತಿ ಬಳಿಕ ರಥ ಎಳೆಯಲಾಯಿತು. ರಥ ಮಾರ್ಗದುದ್ದಕ್ಕೂ ಜೈ ಶ್ರೀರಾಮ್, ಜೈ ಜಗನ್ನಾಥ ಘೋಷಣೆ ಮೊಳಗಿದವು.
ಯಾತ್ರೆಗೆ ಚಾಲನೆ ನೀಡಿದ ಸಂಸದೆ ಡಾ. ಪ್ರಭಾ ಮಲಿ
್ಲಕಾರ್ಜುನ್ ಮಾತನಾಡಿ ಸ್ವಾಮಿ ಜಗನ್ನಾಥನ ರಥಯಾತ್ರೆಗೆ ವಿವಿಧೆಡೆಗಳಿಂದ ಭಕ್ತರು ಬಂದಿದ್ದೀರಿ. ಮಳೆಯಲ್ಲೂ ನಿಮ್ಮ ಉತ್ಸಾಹ, ಹುರುಪು ಕಡಿಮೆಯಾಗಿಲ್ಲ. ಜಗನ್ನಾಥ ದೇವರ ದರ್ಶನದಿಂದ ನಿಮಗೂ ನಿಮ್ಮ ಮಕ್ಕಳ ಭವಿಷ್ಯ ಉತ್ತಮವಾಗಲಿ. ಉತ್ತಮ ಮಳೆ-ಬೆಳೆಯಾಗಲಿ, ದಾವಣಗೆರೆ ಜನತೆಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ಇಸ್ಕಾನ್ ಸಂಸ್ಥೆಯ ದಾವಣಗೆರೆ ಘಟಕದ ಮುಖ್ಯಸ್ಥ ಅವಧೂತ ಚಂದ್ರದಾಸ ಮಾತನಾಡಿ 1967ರಲ್ಲಿ ಪ್ರಥಮ ಬಾರಿಗೆ ಭಾರತದ ಗಡಿಯಾಚೆ ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ ಜಗನ್ನಾಥನ ಯಾತ್ರೆ ಆರಂಭವಾಯಿತು. ಇಂದು ಜಗತ್ತಿನಾದ್ಯಂತ ಇದು ಚಾಲ್ತಿಯಲ್ಲಿದೆ ಎಂದರು.
1970ರಲ್ಲಿ ಭಾರತದಲ್ಲಿ ರಥಯಾತ್ರೆ ನಡೆಯುವುದನ್ನು ಬ್ರಿಟಿಷರಿಗೆ ತಡೆಯಲಾಗಲಿಲ್ಲ. ಜಗನ್ನಾಥನ ದರ್ಶನ ಪಡೆದವರಿಗೆ ಪುನರ್ಜನ್ಮ ಇರೋದಿಲ್ಲ ಎಂಬುದಾಗಿ ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಾಗಿದೆ. ಎಲ್ಲರಿಗೂ ದೇವರ ಕೃಪೆ ಸಿಗಲಿ ಎಂದರು.
ಮಂಡಿಪೇಟೆಯ ಕೋದಂಡರಾಮ ದೇವಸ್ಥಾನದಿಂದ ಆರಂಭವಾದ ರಥಯಾತ್ರೆ ಚಾಮರಾಜಪೇಟೆ ವೃತ್ತ, ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ, ಆರ್.ಎಚ್. ಛತ್ರ, ಜಯದೇವ ವೃತ್ತ, ವಿದ್ಯಾರ್ಥಿ ಭವನ ಮಾರ್ಗವಾಗಿ ಗುಂಡಿ ಮಹದೇವಪ್ಪ ವೃತ್ತದಲ್ಲಿ ಅಂತ್ಯಗೊಂಡಿತು.
ರಥೋತ್ಸವದಲ್ಲಿ ಸಿಂಗರಿಸಿದ ಎತ್ತುಗಳು ಮೆರುಗು ನೀಡಿದವು. ಮಾರ್ಗಗಳಲ್ಲಿ ಮಹಿಳಾ ಭಕ್ತರು ರಂಗೋಲಿ ಚಿತ್ರಿಸಿದ್ದರು. ಕೆಲವರು ತಲೆ ಮೇಲೆ ಪುರಿ ಜಗನ್ನಾಥನ ಸಣ್ಣ ಮೂರ್ತಿಗಳನ್ನು ಹೊತ್ತು ನಡೆದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೂರು ತಾಸಿಗೂ ಹೆಚ್ಚು ಕಾಲ ಯಾತ್ರೆ ಸಾಗಿತು. ಚಿತ್ರದುರ್ಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಮೊದಲಾದ ಜಿಲ್ಲೆಗಳ ಭಕ್ತರು ಭಾಗಿಯಾಗಿದ್ದರು.
ಯಾತ್ರೆಯಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಶಾಮನೂರು ಎಚ್.ಆರ್.ಲಿಂಗರಾಜ್, ಕೊಂಡಜ್ಜಿ ನಾಗರಾಜರಾವ್, ಸಮಾಜ ಸೇವಕ ಕೆ.ಬಿ. ಶಂಕರನಾರಾಯಣ್, ಸತ್ಯನಾರಾಯಣ, ಅಶ್ವಿನಿ ಪ್ರಶಾಂತ್ ಹಾಗೂ ಇಸ್ಕಾನ್ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.