ಸೈಬರ್ ವಂಚನೆ ಬಗ್ಗೆ ಇರಲಿ ಜಾಗ್ರತೆ   ಜನಸಂಪರ್ಕ ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಮನವಿ

1000311821_20240814001608755.jpg
Published on

ದಾವಣಗೆರೆ: ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಜಾಗರೂಕರಾಗಿರಬೇಕು. ಅನಾಮಿಕ ಕರೆಗಳು ಹಾಗೂ ಮೊಬೈಲ್‌ಗೆ ಬರುವ ಅನಾಮಧೇಯ ಲಿಂಕ್‌ಗಳಿಗೆ ಸ್ಪಂದಿಸಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮನವಿ ಮಾಡಿದರು.
ದಾವಣಗೆರೆ ಆರ್‌ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯ ಹೂವಿನ ಮಾರುಕಟ್ಟೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಸೈಬರ್ ವಂಚಕರಿಂದ ಮೋಸಕ್ಕೆ ಒಳಗಾಗಿದ್ದಲ್ಲಿ ಕೂಡಲೇ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಬೇಕು.  ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕು. ತುರ್ತು ಸಂದರ್ಭದಲ್ಲಿ ನೆರವಾಗಲು 112 ತುರ್ತು ಸಹಾಯವಾಣಿ ನಂಬರ್‌ಗೆ ಕರೆ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬೀಟ್ ವ್ಯವಸ್ಥೆ ಜಾರಿಯಲ್ಲಿದೆ. ಪೊಲೀಸ್ ಬೀಟ್ ವಾಟ್ಸಾೃಪ್ ಗ್ರೂಪ್‌ಗಳಲ್ಲಿ ಸೇರ್ಪಡೆಯಾಗಿ ತಂತಮ್ಮ ಬೀಟ್‌ಗಳ ಸಿಬ್ಬಂದಿ ಬಗ್ಗೆ ತಿಳಿಯುವ ಜತೆಗೆ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಹಂಚಿಕೊಳ್ಳಬಹುದು. ಅಧಿಕಾರಿಗಳಿಗೂ ಕರೆ ಮಾಡಬಹುದು ಎಂದು ವಿವರಿಸಿದರು.
ಇಲಾಖೆಯಿಂದ ಯುವ ಸಮಿತಿಗಳನ್ನು ರಚಿಸಲಾಗಿದ್ದು ಯುವಕರು ಸೇರ್ಪಡೆಯಾಗಬೇಕು. ಮನೆ ಹಾಗೂ ವ್ಯಾಪಾರ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಹಾಕಿಕೊಂಡರೆ ಅಪರಾಧ ತಡೆಗಟ್ಟಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದರು.
ದಾವಣಗೆರೆ ನಗರದಲ್ಲಿ ಮಹಿಳಾ ಸುರಕ್ಷತೆಗಾಗಿ ದಾವಣಗೆರೆ ಸುರಕ್ಷಾ ಆ್ಯಪ್ ಜಾರಿಗೊಳಿಸಿದ್ದು ಮೊಬೈಲ್ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಸದುಪಯೋಗ ಪಡೆಯಬೇಕು. ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯಗಳ ಬಗ್ಗೆ ಠಾಣೆಗೆ ಬಂದು ದೂರು ನೀಡಬಹುದು. ಅಥವಾ   ತುರ್ತು ಸಹಾಯವಾಣಿ 112 ಇದರ ಲಾಭ ಪಡೆಯಬಹುದು ಎಂದರು.
ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್ ಮಾತನಾಡಿ ಅಪ್ರಾಪ್ತ ಮಕ್ಕಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗುವ ಪ್ರಕರಣಗಳಿದ್ದು ಪಾಲಕರು ಇದರ ಬಗ್ಗೆ ನಿಗಾ ವಹಿಸಬೇಕು. ಕಾನೂನುಬಾಹಿರ ಚಟುವಟಿಕೆ ತಡೆಯುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಮಧ್ಯರಾತ್ರಿ ಅನವಶ್ಯಕ ತಿರುಗಾಡುವ ಪುಂಡರ ಬಗ್ಗೆ ನಿಗಾ ವಹಿಸಿ. ಹೆಚ್ಚಿನ ಗಸ್ತು ನಿಯೋಜಿಸಿ. ಬಾಡಾ ಕ್ರಾಸ್‌ನಲ್ಲಿ ತೃತೀಯ ಲಿಂಗಿಗಳಿಂದ ನಡೆಯುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳ್ಳತನ ಪ್ರಕರಣಗಳು ಹೆಚ್ಚಿದ್ದು ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಆರ್‌ಎಂಸಿ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ ವಿವಿಧ ಕಂಪನಿಯ 6 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಸಭೆಯಲ್ಲಿ ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಆಜಾದ್‌ನಗರ ವೃತ್ತ  ಸಿಪಿಐ ಬಾಲಚಂದ್ರ ನಾಯ್ಕ, ಆರ್‌ಎಂಸಿ ಠಾಣೆ ಪಿಎಸ್‌ಐ ಸಚಿನ್ ಬಿರಾದರ್, ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್, ಮುಖಂಡರಾದ ಗೋಪಿನಾಯ್ಕ, ಕರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net