ಬಿಜೆಪಿ ಸರ್ಕಾರ ಮುಸ್ಲಿಮರ ವಿರೋಧಿಯಲ್ಲ

1000850349_20250430210930916.jpg
Published on

ದಾವಣಗೆರೆ: ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮುಸ್ಲಿಮರ ಆದಿಯಾಗಿ ಯಾವ ಸಮುದಾಯದ ವಿರೋಧಿಯಲ್ಲ. ಆದರೂ ಮುಸ್ಲಿಮರ ವಿರೋಧಿ ಎಂಬುದಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಹೇಳಿದರು.

ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ, ಪಹಲ್ಗಾಮ್ನ ದಾಳಿಯಲ್ಲಿ ಮಡಿದವರಿಗೆ ನುಡಿನಮನ ಮತ್ತು ಕೇಂದ್ರದ ವಕ್ಫ್ ಮಂಡಳಿ ಕಾಯ್ದೆ ಕುರಿತ ಜನಜಾಗೃತಿ ಸಂವಾದ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೊಸ ವಕ್ಫ್ ಕಾಯ್ದೆಯ ಮೂಲಕ ಕಾಂಗ್ರೆಸ್, ಮುಸ್ಲಿಮರ ದಾರಿ ತಪ್ಪಿಸುತ್ತಿದೆ. ಕಾಂಗ್ರೆಸ್ ನಾಯಕರು ವಕ್ಫ್ ಮಂಡಳಿಯ ಆಸ್ತಿಗಳನ್ನು ಎಲ್ಲ ಹಂತದವರೆಗೆ ಅನುಭವಿಸುತ್ತಿದ್ದು, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಕಲ್ಯಾಣದ ಬಗ್ಗೆ ಮುಸ್ಲಿಮರಲ್ಲಿನ ಬಡವರಿಗೆ ನೆರವು ನೀಡುತ್ತಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರವು ಭಯೋತ್ಪಾದನೆಯನ್ನು ಶೀಘ್ರವೇ ಕೊನೆಗೊಳಿಸಲಿದೆ ಎಂಬ ಅಚಲ ನಂಬಿಕೆಯಿದೆ. ಪ್ರಧಾನಿ ನರೇಂದ್ರ ಮೋದಿ ಈ ದಿಸೆಯಲ್ಲಿ ಪಾಕಿಸ್ತಾನದ ವಿರುದ್ಧ ಹಲವಾರು ಪ್ರತೀಕಾರದ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಡಾ. ನಸೀರ್ ಅಹಮದ್ ಮಾತನಾಡಿ, ವಕ್ಫ್ ಮಂಡಳಿಯ ಹೊಸ ಕಾಯ್ದೆಯಿಂದಾಗಿ ವಕ್ಫ್ ಮಂಡಳಿಯ ಕಾರ್ಯ ಶೈಲಿಯಲ್ಲಿ ಪಾರದರ್ಶಕತೆ ಬರಲಿದೆ. ವಕ್ಫ್ ಭೂಮಿಯಲ್ಲಿ ಏಕಸ್ವಾಮ್ಯ ಹೊಂದಿರುವ ಕೆಲವು ನಾಯಕರು ಬಹಿರಂಗಗೊಳ್ಳುತ್ತಾರೆ. ಕಾಯ್ದೆಯಡಿ ಬಡ ಜನರಿಗೆ ಲಾಭ ಸಿಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು 11 ವರ್ಷಗಳಿಂದ ಭಾರತದ ಬೆಳವಣಿಗೆಗೆ, ವಿಶೇಷವಾಗಿ ಮುಸ್ಲಿಂ ಸಮುದಾಯದ ಮಹಿಳಾ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ತ್ರಿವಳಿ ತಲಾಖ್ ನಿಷೇಧದಂತಹ ಉತ್ತಮ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಗ್ಧ ಮಹಿಳೆಯರಿಗೆ ನ್ಯಾಯ ಸಿಕ್ಕಿದೆ ಎಂದರು. ಭಯೋತ್ಪಾದಕರನ್ನು ಅವರ ಮೂಲದಿಂದಲೇ ಮಟ್ಟ ಹಾಕಬೇಕಿದೆ ಎಂದೂ ಆಶಿಸಿದರು.

ನಿಕಟಪೂರ್ವ ನಿರ್ದೇಶಕ ಗೌತಮ್‌ಜೈನ್ ಮಾತನಾಡಿ ಭಯೋತ್ಪಾದಕರಿಗೆ ಅವರ ಗುಂಡಿನ ಭಾಷೆಯಲ್ಲೇ ಉತ್ತರ ನೀಡಬೇಕಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದ ಮಹಾಗನಗರಗಳಲ್ಲಿ ಉಗ್ರರ ಚಟುವಟಿಕೆಗಳು ನಡೆಯುತ್ತಿದ್ದವು. ಕಾಂಗ್ರೆಸ್‌ನ ಸಚಿವರು ಸದ್ಯಕ್ಕೆ ದೇಶದ ಬಗ್ಗೆ ಯೋಚಿಸದೆ ಮೋದಿ ಅವರನ್ನು ಟೀಕಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಪ್ರಧಾನ ಕಾರ್ಯದರ್ಶಿ ಅನಿಲ್ ನಾಯಕ್, ವಕ್ಫ್ ಮಂಡಳಿ ಮಾಜಿ ಜಿಲ್ಲಾಧ್ಯಕ್ಷ ಶಾಮಿರಾಲಮ್ ಖಾನ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಟಿಪ್ಪುಸುಲ್ತಾನ್, ಇಕ್ಬಾಲ್ ಅಹ್ಮದ್ ಇತರರಿದ್ದರು.

-----

ಕೋಟ್

ಮಾನವರಲ್ಲಿ ಮಾನವೀಯ ಮೌಲ್ಯಗಳಿದ್ದಾಗ ಹಿಂಸಾಚಾರ, ಕ್ರೌರ್ಯಕ್ಕೆ ಮುಂದಾಗುವುದಿಲ್ಲ. ಕಾಶ್ಮೀರದಲ್ಲಿ ಉಗ್ರರು ದಿನದಿನಕ್ಕೂ ಕ್ರೌರ್ಯ ಮೆರೆಯುತ್ತಿರುವುದರಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಕಾಶ್ಮೀರದಲ್ಲಿನ ಭಯೋತ್ಪಾದನೆ ಮಟ್ಟ ಹಾಕಲು ಮತ್ತು ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು.

ಡಾ. ಬಸವಪ್ರಭು ಸ್ವಾಮೀಜಿ

ವಿರಕ್ತಮಠ.

-----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net