

ದಾವಣಗೆರೆ: ಕುಕ್ಕುವಾಡದ ದಾವಣಗೆರೆ ಸಕ್ಕರೆ ಕಾರ್ಖಾನೆಯಲ್ಲಿ ತ್ವರಿತವಾಗಿ ಕಬ್ಬು ನುರಿಸುವಿಕೆಗೆ ರಾಜ್ಯ ಸರ್ಕಾರ ಅನುಮತಿಸಬೇಕು ಎಂದು ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಸೋಮವಾರದೊಳಗಾಗಿ ಅನುಮತಿ ನೀಡದೇ ಹೋದಲ್ಲಿ ಸಕ್ಕರೆ ಕಾರ್ಖಾನೆ ಎದುರು ಕಟಾವು ಮಾಡಿದ ಕಬ್ಬುಗಳನ್ನು ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಸರ್ಕಾರ ನಿರ್ಧರಿಸಿದಂತೆ ಜು.22ರಿಂದಲೇ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಕಬ್ಬು ನುರಿಸುವಿಕೆ ಆರಂಭವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನವೆಂಬರ್‌ನಿಂದ ಕಬ್ಬು ಕ್ರಷಿಂಗ್ ನಡೆಸಲು ಸರ್ಕಾರ ನಿರ್ಧರಿಸಿದೆ. ದಾವಣಗೆರೆಯನ್ನು ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ವ್ಯಾಪ್ತಿಗೆ ಗುರುತಿಸಿದ್ದರಿಂದ ಸಮಸ್ಯೆಯಾಗಿದೆ ಎಂದರು.
ನಾಟಿಯಾದ 12 ತಿಂಗಳಲ್ಲಿ ಹಿಂಗಾರು ಕಬ್ಬು ಕಟಾವಾಗಲಿದೆ. ಈ ಅವಧಿಗೆ ಕಟಾವು ಆದಲ್ಲಿ ಸಕ್ಕರೆ ರಿಕವರಿ ಆಗಲಿದೆ. ಕಬ್ಬಿನ ತೂಕವೂ ಹೆಚ್ಚಲಿದ್ದು ಬೆಳೆಗಾರರಿಗೆ ಅನುಕೂಲವಾಗಲಿದೆ. ನವೆಂಬರ್ ಒಂದರಿಂದ ಕಾರ್ಖಾನೆ ಆರಂಭಿಸಿದಲ್ಲಿ ಕೃಷಿ ಕೂಲಿಕಾರ್ಮಿಕರ ಕೊರತೆ ಕಾಡುವ ಜತೆಗೆ ಕಬ್ಬಿನ ಇಳುವರಿ ಮೇಲೆ ದುಷ್ಪರಿಣಾಮ ಬೀರಲಿದೆ.
ಹೊರ ಜಿಲ್ಲೆಗಳಿಂದ ಕೂಲಿಕಾರ್ಮಿಕರನ್ನು ಕರೆತರುವ ಪ್ರಮೇಯ ಬರಲಿದೆ. ತಡವಾಗಿ ಕಟಾವು ಆದಲ್ಲಿ ಕಬ್ಬು ಬೆಂಡಾಗಲಿದೆ. ಈ ಬಗ್ಗೆ ಈಗಾಗಲೆ ಸಕ್ಕರೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಇದೀಗ ಸರ್ಕಾರ ಗಮನ ಹರಿಸಬೇಕಿದೆ ಎಂದು ಆಗ್ರಹಿಸಿದರು.
ಈ ಭಾಗದಲ್ಲಿ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಕಬ್ಬು ನಾಟಿ ಮಾಡಿದ್ದು 490 ಎಕರೆ ಪ್ರದೇಶದಲ್ಲಿ ಸುಮಾರು 500 ರೈತರು ಕಬ್ಬು ಬೆಳೆದಿದ್ದಾರೆ. ಕಬ್ಬು ಕಟಾವಿಗೆ ಕಬ್ಬು ಕಡಿಯುವ ಕೂಲಿಕಾರ ಗುಂಪಿಗೆ ರೈತರು 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಮುಂಗಡ ಹಣ ನೀಡಿದ್ದು ಈ ಗುಂಪಿನವರು ಜಮೀನುಗಳಲ್ಲಿ ಟೆಂಟ್ ಹಾಕಿದ್ದಾರೆ. ಕಬ್ಬು ಕಡಿಯಲು ಅನುಮತಿ ನೀಡದಿದ್ದರೆ ಮುಂಗಡ ಹಣ ವಾಪಸು ಮಾಡಲು ಕೂಲಿಕಾರ ಗುಂಪಿನ ಮೇಸ್ತ್ರಿಗಳು ಹೇಳುತ್ತಿದ್ದಾರೆ. ನಾವು ಕಬ್ಬು ಕಡಿಯದೇ ಹೊದಲ್ಲಿ ಅನೇಕ ರೀತಿಯ ತೊಂದರೆ ಆಗಲಿವೆ.
ನವೆಂಬರ್‌ನಲ್ಲಿ ಭತ್ತ, ಮೆಕ್ಕೆಜೋಳ, ಅಡಕೆ, ರಾಗಿ ಕಟಾವು ಏಕಕಾಲಕ್ಕೆ ಆಗುವ ಕಾರಣಕ್ಕೆ ಕಬ್ಬು ಕಡಿಯುವ ಕಾರ್ಮಿಕರು ಸಿಗುವುದಿಲ್ಲ. ವಿಸಿಎಫ್ 0517 ಈ ತಳಿಯು ಅಕ್ಟೋಬರ್ ತಿಂಗಳ ಕೊನೆಯಲ್ಲಿ ಸೂಲಂಗಿ ಬಂದು ಕಬ್ಬಿನ ಇಳುವರಿ ಗಣನೀಯವಾಗಿ ಇಳಿಮುಖವಾಗಲಿದೆ.
ಕಾರ್ಖಾನೆಯ ಕಬ್ಬು ಬೆಳೆದಿರುವ ಪ್ರದೇಶ ಭದ್ರಾ ಅಚ್ಚುಕಟ್ಟಿಗೆ ಒಳಪಟ್ಟಿದ್ದು ಭದ್ರಾ ನಾಲಾ ನೀರು ನಿಲ್ಲಿಸುವ ಕಾರಣಕ್ಕೆ ಕಬ್ಬು ಒಣಗಿ ಹೋಗಲಿದೆ. ಕಳೆದ 54 ವರ್ಷದಿಂದ ಆಗಸ್ಟ್‌ನಿಂದ ಅಕ್ಟೋಬರ್ ತಿಂಗಳಲ್ಲಿ ಕಬ್ಬು ಅರೆಸಲಾಗಿದೆ. ಇತರೆ ಜಿಲ್ಲೆಯ ಕಬ್ಬು ಬೆಳೆಗಾರರು ಬರುವ ಆತಂಕದಿಂದಾಗಿ ಸರ್ಕಾರ ಈ ಕ್ರಮ ಕೈಗೊಂಡಿರಬಹುದು. ಹಾಗಾದಲ್ಲಿ ಸರ್ಕಾರ ಪರ್ಯಾಯ ಕ್ರಮ ವಹಿಸಬೇಕು ಎಂದರು.
ಹಿಂದಿನ ವರ್ಷಗಳಲ್ಲಿ 5ರಿಂದ 6 ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ಈ ವರ್ಷದಲ್ಲಿ 2 ಲಕ್ಷ ಟನ್‌ಗೆ ಇಳಿದಿದೆ. ಸರ್ಕಾರದ ಧೋರಣೆ ಬದಲಾಗುತ್ತ ಹೋದಂತೆಲ್ಲ ಈ ಇಳುವರಿ ಪ್ರಮಾಣ ಇನ್ನಷ್ಟು ತಗ್ಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಡಿ.ಬಿ. ಶಂಕರ್, ಕೆ.ಎಸ್. ರಾಜು, ಲಿಂಗೇಶ್ ಇದ್ದರು.