ನಲ್ಲೂರು ಗ್ರಾಪಂನಲ್ಲಿ ಅವ್ಯವಹಾರ  ಇಂದು ಗ್ರಾಮಸ್ಥರ ಪ್ರತಿಭಟನೆ

1000564808.jpg
Published on

ದಾವಣಗೆರೆ: ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿಯಲ್ಲಿನ ಅವ್ಯವಹಾರ ಗಮನಕ್ಕೆ ತಂದಾಗ್ಯೂ ಸಂಬಂಧಿತ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಲಿದ್ದಾರೆ.
2013ರಿಂದ ಗ್ರಾಪಂನಲ್ಲಿ ಅನೇಕ ಅವ್ಯವಹಾರ ನಡೆದಿದ್ದು ದಾಖಲೆಗಳ ಸಹಿತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಪಂಗೆ ಸೇರಿದ ನಿವೇಶನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದನ್ನು ತೆರವುಗೊಳಿಸುವ ಆದೇಶವಿದ್ದರೂ ಕ್ರಮವಾಗಿಲ್ಲ. ಈ ವಿಚಾರವಾಗಿ ಅಧಿಕಾರಿಗಳನ್ನು ಎಚ್ಚರಿಸಲು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಅನಿಲ್‌ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟ ಖಾತೆ ಸಂಖ್ಯೆ 31/3ಎ/02 ನಿವೇಶನ ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಖರೀದಿದಾರರು ಕಟ್ಟಡವನ್ನು ನಿರ್ಮಿಸಿ ಬಾಡಿಗೆ ಪಡೆಯುತ್ತಿದ್ದಾರೆ. ಇದರ ವಿರುದ್ಧವೂ ಕ್ರಮವಾಗಿಲ್ಲ.
ಗಡಿಮಾರಮ್ಮ ದೇವಸ್ಥಾನ ಹತ್ತಿರವಿರುವ ಗೋಕಟ್ಟೆ ಹಾಗೂ ನಲ್ಲೂರು ಚನ್ನಗಿರಿ ದಾವಣಗೆರೆ ಮುಖ್ಯರಸ್ತೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿ ಕಂಕರ ಗುಂಡಿ ಗ್ರಾಮ ಠಾಣಾ ನಿವೇಶನವನ್ನು ಜನಪ್ರತಿನಿಧಿಗಳು ಅಧಿಕಾರಿಗಳನ್ನು ಬಳಸಿಕೊಂಡು ತಮ್ಮ ಸ್ವಂತ ಹೆಸರಿಗೆ ಇ-ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ಸಣ್ಣ ನೀರಾವರಿ ಇಲಾಖೆಗೆ ಸೇರಿದ ದೊಡ್ಡ ಅಪ್ಪನವೂಡ್ಡು ಕೆರೆಯ ವಸತಿ ನಿವೇಶನದಲ್ಲಿ ಅಕ್ರಮ ಕಟ್ಟಡವನ್ನು ನಿರ್ಮಿಸಲಾಗಿದೆ. ಬಸವೇಶ್ವರ ನಗರದ ಸಾರ್ವಜನಿಕ ರಸ್ತೆ ಜಾಗವನ್ನು ಒತ್ತುವರಿ ಮಾಡಲಾಗಿದೆ. ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಸಿಎ ನಿವೇಶನದಲ್ಲಿ ರಾತ್ತೋರಾತ್ರಿ ಮನೆಗಳನ್ನು ನಿರ್ಮಿಸಲಾಗಿದೆ. ಅದನ್ನು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದರು.
ಸರ್ಕಾರದ ಆಸ್ತಿಗಳನ್ನು ಸಾರ್ವಜನಿಕರ ಅನುಕೂಲತೆಗಾಗಿ ಉಳಿಸಬೇಕಾದವರೇ ಕಬಳಿಸುವ ಕೆಲಸ ಮಾಡಿದ್ದಾರೆ. ಇನ್ನು ಅನೇಕ ಆಸ್ತಿಗಳನ್ನು ಪ್ರಭಾವಿ ವ್ಯಕ್ತಿಗಳು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಎಲ್ಲ ಆಸ್ತಿಗಳ ವಿವರಗಳನ್ನು ಪಡೆಯಲಾಗಿದೆ. ಅಧಿಕಾರಿಗಳು ತನಿಖೆ ಮಾಡುವ ಮೊದಲೇ ಅಕ್ರಮಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಧರಣಿ ನಡೆಸಬೇಕಾಗುತ್ತದೆ ಎಂದರು.
ಕನ್ನಡ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಡಿ. ರುದ್ರೇಶ್, ಗ್ರಾಮದ ಮುಖಂಡರಾದ ಸಿ. ವಿಶ್ವನಾಥ್, ಎಚ್. ದಿನೇಶ್‌ಕುಮಾರ್, ಕೆ.ಬಿ. ರುದ್ರಮುನಿ, ಮರಿಯಪ್ಪ, ರಂಗನಾಥ್, ನಾಗರಾಜ್, ಬಸವರಾಜ್ ಇದ್ದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net