ಪೋಕ್ಸೋ ಮಾಹಿತಿಗೆ ಶಾಲಾವಾರು ಸಮಿತಿ

1000515403.jpg
Published on

ದಾವಣಗೆರೆ: ತಂಬಾಕಿನ ದುಷ್ಪರಿಣಾಮ ಹಾಗೂ ಬಾಲ್ಯವಿವಾಹ, ಪೋಕ್ಸೋ ಕುರಿತ ಮಾಹಿತಿ ನೀಡಲು ಪ್ರತಿ ಶಾಲೆಗಳಲ್ಲಿ ಸಮಿತಿ ರಚನೆಯಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮಾ.ಕರೆಣ್ಣವರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇಲಾಖೆ ಸಹಯೋಗದಲ್ಲಿ ಅಪರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ  ಹಮ್ಮಿಕೊಂಡಿದ್ದ. ತೃತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಖಾಸಗಿ ಶಾಲೆಗಳಲ್ಲೂ ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ತಂಬಾಕು ಸೇವನೆಯಿಂದ ಪ್ರಾಣಾಪಾಯದ ಅರಿವು ಇದ್ದರೂ ಯುವಜನರು ಈ ದುಶ್ಚಟಕ್ಕೆ ದಾಸರಾಗಿ ಹಾಳಾಗುತ್ತಿರುವುದು ಬೇಸರದ ವಿಚಾರ. ತಂಬಾಕು ವ್ಯಸನಮುಕ್ತಿ ಕುರಿತು ಸಾರ್ವಜನಿಕವಾಗಿ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದರು.
ಸಭೆಗೆ ಗೈರು ಹಾಜರಾಗಿದ್ದ 6 ತಾಲೂಕಿನ ಬಿಇಒಗಳಿಗೆ ನೋಟಿಸ್ ಜಾರಿಗೆ ಸೂಚಿಸಿದ ಅವರು, ಜಿಲ್ಲಾ ಮಟ್ಟದ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಅಂಕಿ-ಅಂಶಗಳೊಂದಿಗೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಎಚ್ಚರಿಕೆ ನೀಡಿದರು.
ರೈಲ್ವೆ ಹಾಗೂ ಪೊಲೀಸ್ ಇಲಾಖೆಗಳು ತಂಬಾಕು ನಿಯಂತ್ರಣ ವಿಚಾರದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಇತರೆ ಇಲಾಖೆಗಳು ಹೆಚ್ಚಿನ ಗಮನವಿಟ್ಟು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಜಿ.ಡಿ.ರಾಘವನ್ ಮಾತನಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಿಂದ ಇದುವರೆಗೆ 235 ಮಾಹಿತಿ ಶಿಕ್ಷಣ ಅರಿವು ಕಾರ್ಯಕ್ರಮ ನಡೆಸಲಾಗಿದೆ. ದಾವಣಗೆರೆ 7, ಹೊನ್ನಾಳಿ 5, ಜಗಳೂರು 4, ಚನ್ನಗಿರಿ 4 , ಹರಿಹರ 1 ಗ್ರಾಮವನ್ನು ತಂಬಾಕು ಮುಕ್ತ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
  ಶಾಲಾ ಶಿಕ್ಷಣ ಇಲಾಖೆಯಿಂದ 64 , ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 16 ತಂಬಾಕುಮುಕ್ತ ಸಂಸ್ಥೆ ಎಂದು ಘೋಷಿಸಲಾಗಿದೆ. ವಿಭಾಗವಾರು ಸೆಕ್ಷನ್ 4, 6ಎ, 6ಬಿನಿಂದ 633 ಪ್ರಕರಣಗಳಿಂದ  91900 ರೂ ದಂಡದ ಮೊತ್ತವನ್ನು  ಸಂಗ್ರಹಿಸಲಾಗಿದೆ. ಪೊಲೀಸ್ ಇಲಾಖೆಯಿಂದ 3744 ಪ್ರಕರಣಗಳಿಂದ  365900 ರೂ ದಂಡ ವಸೂಲಾಗಿದೆ. ನಗರಪಾಲಿಕೆಯಿಂದ  150 ಪ್ರಕರಣಗಳಿಂದ  39000 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ತಂಬಾಕುಮುಕ್ತ ಇಲಾಖೆ, ಕಚೇರಿಗಳ ಕುರಿತಂತೆ ಎಡಿಸಿ ಪಿ.ಎನ್.ಲೋಕೇಶ್, ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಎಎಸ್ಪಿ ವಿಜಯಕುಮಾರ್ ಎಂ.ಸಂತೋಷ್, ಜಿಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಯೋಜನಾಧಿಕಾರಿ ಮಲ್ಲಾನಾಯ್ಕ, ಡಿ.ಎಚ್‌ಒ ಷಣ್ಮುಖಪ್ಪ, ಡಿಡಿಪಿಐ ಕೊಟ್ರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಆಹಾರ ಇಲಾಖೆ ಡಿಡಿ ಶಿದ್ರಾಮ ಮಾರಿಹಾಳ್ ಹಾಗೂ ಇತರೆ ಅಧಿಕಾರಿಗಳಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net