ಸಮನ್ವಯ ಸಾಧಿಸಿ, ಬಾಲ್ಯ ವಿವಾಹ ಪ್ರಕರಣ ತಗ್ಗಿಸಿ    ಮಕ್ಕಳ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳಾ ಸೂಚನೆ

1000347462.jpg
Published on

ದಾವಣಗೆರೆ: ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 35 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಇದರ ತಡೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೆ 10 ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ.ಕೊಳ್ಳಾ ತಿಳಿಸಿದರು.
ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳು, ಹಾಸ್ಟೆಲ್‌ಗಳಿಗೆ ಶನಿವಾರ ಭೇಟಿ ನೀಡಿ, ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಬಾಲ್ಯವಿವಾಹಗಳು ನಡೆಯದಂತೆ ನೋಡಿಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳ ವಿವರವನ್ನು ವರದಿ ಮಾಡದ ಶಾಲಾ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ನೀಡಬೇಕೆಂದು ಡಿಡಿಪಿಐ ಕೊಟ್ರೇಶ್ ಅವರಿಗೆ ಸೂಚನೆ ನೀಡಿದರು.
ಐದು ತಿಂಗಳವಧಿಯಲ್ಲಿ 32 ವಿವಾಹಗಳನ್ನು ಮಕ್ಕಳ ರಕ್ಷಣಾ ಘಟಕ ತಡೆದಿದೆ. ಮೂರು ವಿವಾಹ ನಡೆದಿದ್ದು ಸಂಬಂಧಪಟ್ಟವರ ವಿರುದ್ಧ ದೂರು ದಾಖಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದರು.
ಇಲಾಖಾಧಿಕಾರಿಗಳ ನಡುವೆ ಸಮನ್ವಯ ಮುಖ್ಯ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗಬೇಕು.ಬಾಲಕಾರ್ಮಿಕ ಪದ್ದತಿ ನಿಷೇಧ, ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟಬೇಕಾಗಿದೆ ಎಂದು ಅಪರ್ಣಾ ಹೇಳಿದರು.
ಆರ್‌ಸಿಎಚ್ ಪೋರ್ಟಲ್ ವರದಿಯಂತೆ ಜಿಲ್ಲೆಯಲ್ಲಿ 254 ಹದಿಹರೆಯದ ಗರ್ಭಿಣಿಯರಿದ್ದಾರೆ. ಮನೆ ಸಮೀಕ್ಷೆಯ ನಂತರ ಇದು 231 ಕ್ಕೆ ಇಳಿಕೆಯಾಗಿದ್ದು ಇದರಲ್ಲಿ 23 ತಾಯಂದಿರು 18 ವರ್ಷ ಮೇಲ್ಪಟ್ಟವರು ದಾಟಿದ್ದಾರೆ ಎಂದಾಗ ವಯದ್ದಿನ ದೃಢೀಕರಣಕ್ಕೆ ಆಧಾರ್ ಪರಿಗಣಿಸದೇ ಜನನ ಪ್ರಮಾಣಪತ್ರ ಮತ್ತು ಅಗತ್ಯವಿದ್ದಲ್ಲಿ ವೈದ್ಯಕೀಯ ತಪಾಸಣೆ ಮಾಡಬೇಕೆಂದರು.  
ಅನಧಿಕೃತ ಕೋಚಿಂಗ್ ಕೇಂದ್ರಗಳತ್ತ ನಿಗಾ
 ಇಲಾಖೆ ಮತ್ತು ಆಯೋಗದಿಂದ ಮಕ್ಕಳ ಬಾಲ್ಯವಿವಾಹ ತಡೆ, ಪೋಕ್ಸೋ, ಬಾಲ ಕಾರ್ಮಿಕ ಪದ್ದತಿ ನಿಷೇಧ ಸಂಬಂಧ ಜಾಗೃತಿ ಮೂಡಿಸಲು ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಆಗಬೇಕಿದೆ.  ಕೆಲವು ಕೋಚಿಂಗ್ ಸೆಂಟರ್‌ಮತ್ತು ಹಾಸ್ಟೆಲ್ಗಳು, ಮಕ್ಕಳ ಪಾಲನೆ ಬಗ್ಗೆ ಅನುಮತಿ ಪಡೆಯದೆ ಅನಧಿಕೃತವಾಗಿ ನಡೆಯುತ್ತಿದ್ದು, ಇಂತಹ  ಸಂಸ್ಥೆಗಳ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪೋಕ್ಸೋದಡಿ 2013 ರಿಂದ 2024 ರವರೆಗೆ 731 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 86 ರಲ್ಲಿ ಶಿಕ್ಷೆಯಾಗಿದ್ದು 368 ಖುಲಾಸೆಯಾಗಿವೆ. 14 ಪ್ರಕರಣಗಳು ವರ್ಗಾವಣೆಗೊಂಡಿದ್ದು 11 ಸುಳ್ಳು ಪ್ರಕರಣಗಳಾಗಿವೆ. 252 ಪ್ರಕರಣಗಳು ಇತ್ಯರ್ಥ ಆಗಬೇಕಿವೆ.
ಬಾಲ ನ್ಯಾಯ ಮಂಡಳಿಯಲ್ಲಿ 2024 ರ ಏಪ್ರಿಲ್ ನಿಂದ ಜುಲೈವರೆಗೆ  68 ಪ್ರಕರಣಗಳಿವೆ. ಇದರಲ್ಲಿ 15 ಇತ್ಯರ್ಥವಾಗಿದ್ದು 1 ವರ್ಷ ಮೇಲ್ಪಟ್ಟ 7 ಗಂಭೀರ, 9  ಘೋರ ಪ್ರಕರಣಗಳಿವೆ. ವರ್ಷದೊಳಗೆ ಒಟ್ಟು 53 ಪ್ರಕರಣಗಳಿವೆ. ಬಾಲ ನ್ಯಾಯ ಮಂಡಳಿಯಲ್ಲಿ 15 ಪ್ರಕರಣ ಇತ್ಯರ್ಥವಾಗಬೇಕಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಈ ವೇಳೆ ಸದಸ್ಯರು ಮಾತನಾಡಿ ಪ್ರಕರಣಗಳಲ್ಲಿ ತಪ್ಪಿತಸ್ಥರು ಖುಲಾಸೆಯಾಗದಂತೆ ನೋಡಿಕೊಳ್ಳಲು ತಿಳಿಸಿದರು.
ಆರೋಗ್ಯ ಸೌಲಭ್ಯ ಕಲ್ಪಿಸಿ
ಹಾಸ್ಟೆಲ್ ಮಕ್ಕಳಿಗೆ ಬೇಕಾದ ಸೋಪ್ ಕಿಟ್, ನ್ಯಾಪ್‌ಕಿನ್, ಗುಣಮಟ್ಟದ ಆಹಾರ, ತರಕಾರಿ, ಬೇಳೆಕಾಳು ಒದಗಿಸಬೇಕು. ಭೇಟಿ ವೇಳೆ ಕೆೆಲವು ಹಾಸ್ಟೆಲ್- ಅಂಗನವಾಡಿ ಕೇಂದ್ರಗಳಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿದ್ದು ಮಕ್ಕಳ ಆರೋಗ್ಯದ ಕಾರ್ಡ್ ಸರಿಯಾಗಿ ದಾಖಲಿಸಬೇಕೆಂದು ಅಪರ್ಣಾ ಸೂಚಿಸಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಹಾಸ್ಟೆಲ್, ಅಂಗನವಾಡಿಯಲ್ಲಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ವಿವರ ದಾಖಲು ಮಾಡಬೇಕು. ವೈದ್ಯರು ಭೇಟಿ ನೀಡಿದ ಬಗ್ಗೆ ಸಹಿ ಇದೆ. ತಪಾಸಣೆ ವಿವರಗಳನ್ನು ನಮೂದಿಸಿಲ್ಲ ಎಂದರು.  
ಆರೋಗ್ಯ ಇಲಾಖೆಯಿಂದ ಎಬಿಎಆರ್ಕೆಯಡಿ 300 ಶಾಲೆಗಳ ಭೇಟಿ ಇದೆ, ಶಿಕ್ಷಣ ಇಲಾಖೆ ಅಂಕಿ ಅಂಶದಡಿ 2015 ಶಾಲೆಗಳಿದ್ದು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಮುಂದೆ ಹೀಗಾಗದಂತೆ ಎಲ್ಲಾ ಶಾಲೆ ಹಾಸ್ಟೆಲ್‌ಗಳಲ್ಲೂ ಮಕ್ಕಳ ಆರೋಗ್ಯ ತಪಾಸಣೆ ಕಡ್ಡಾಯವಾಗಬೇಕು. ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಮಾತನಾಡಿ ಕೆಲವು ಶಾಲೆಗಳಲ್ಲಿ ಮಕ್ಕಳ ಟಿ.ಸಿ.ಕೊಡಲು ಸತಾಯಿಸುತ್ತಿರುವ ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ಆನಗೋಡು ಸುತ್ತಮುತ್ತಲಿನ ಗ್ರಾಮಾಂತರ ಮಕ್ಕಳು ಶಾಲೆಗೆ ಹೋಗಿಬರಲು ಕೆಎಸ್ಆರ್ಟಿಸಿ  ಬಸ್ ಕಲ್ಪಿಸಬೇಕೆಂದರು.
ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಡಿಸಿ  ಪಿ.ಎನ್. ಲೋಕೇಶ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಇತರೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net