ಯೋಧರಿಗೆ ಜೈ ಹೋ ಎಂದ ಮೆರವಣಿಗೆ

1000905453.jpg
Published on

ದಾವಣಗೆರೆ: ಭಯೋತ್ಪಾದಕರ ನೆಲೆ, ಪಾಕಿಸ್ತಾನದ ವಿರುದ್ಧ ಭಾರತದ ಆಪರೇಷನ್ ಸಿಂಧೂರದ ಯಶಸ್ಸು ಹಾಗೂ ಮೂರೂ ಸೇನೆಗಳ ಯೋಧರ ಬೆಂಬಲವಾಗಿ ಜಿಎಂ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಮೆರವಣಿಗೆ ದೇಶಭಕ್ತಿ ಜಾಗೃತಗೊಳಿಸಿತು.

ಜಿಎಂಯು, ಜಿಎಂಐಟಿ, ಜಿಎಂಎಸ್‌ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ನಾಲ್ಕೂ ದಿಕ್ಕಿನಲ್ಲಿ ಸಾಗಿದರು. ಮಾರ್ಗದುದ್ದಕ್ಕೂ ತ್ರಿವರ್ಣ ಧ್ವಜ ಹಿಡಿದು ಭಾರತ್ ಮಾತಾ ಕಿ ಜೈ, ಜೈ ಜವಾನ್ ಜೈ ಕಿಸಾನ್ ಮೊದಲಾದ ಘೋಷಣೆ ಜತೆಗೆ ವೀರಯೋಧರಿಗೆ ಜೈಕಾರ ಕೂಗಿದರು.

ವಿದ್ಯಾರ್ಥಿಗಳು, ಪ್ರಾಧ್ಯಾಪಕರಾದಿಯಾಗಿ ಎಲ್ಲರ ತಲೆ ಮೇಲೆ ಬಿಳಿ, ಹಳದಿ, ಕೆಂಪು ಬಣ್ಣದ ಟೋಪಿಗಳು ರಾರಾಜಿಸಿದರೆ, ಎನ್‌ಸಿಸಿ ವಿದ್ಯಾರ್ಥಿಗಳು ಶಿಸ್ತಿನ ಹೆಜ್ಜೆ ಹಾಕಿದರು. ಮಳೆಯ ಮೋಡಗಳ ನಡುವೆಯೂ ಮೆರವಣಿಗೆ ನಿರಾತಂಕವಾಗಿ ನಡೆಯಿತು.

ಜಿಎಂ ವಿಶ್ವವಿದ್ಯಾಲಯದ ಆವರಣದಲ್ಲಿ ಸೆಲ್ಯೂಟ್ ಫಾರ್ ದ ಸೋಲ್ಡ್ಜರ್ ಘೋಷಣೆಯೊಂದಿಗೆ ಆಪರೇಷನ್ ಸಿಂಧೂರ ಔಟ್ರೀಚ್ - ಮೆರವಣಿಗೆಯನ್ನು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.

ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಮಹಾತ್ಮ ಗಾಂಧಿ ವೃತ್ತ, ಆಂಜನೇಯ ಬಡಾವಣೆಯ ಆಂಜನೇಯ ದೇವಸ್ಥಾನ, ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಉದ್ಯಾನದಿಂದ ಆರಂಭವಾದ ನಾಲ್ಕೂ ಮೆರವಣಿಗೆಗಳು ಅಂತಿಮವಾಗಿ ಅಮರ್ ಜವಾನ್ ಪಾಕ್‌ಮಲ್ಲಿ ಅಂತ್ಯಗೊಂಡವು. ಭಾಗಿಯಾದ ವಿದ್ಯಾರ್ಥಿಗಳಿಗೆ ಭಾರತೀಯ ಯೋಧರಿಗೆ ಸಲಾಂ ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸೈನಿಕ ಸುರೇಶ್, ದೇಶಪ್ರೇಮ ಎಂದರೆ ಗಡಿ ಭಾಗಕ್ಕೆ ತೆರಳಿ ದೇಶ ರಕ್ಷಣೆ ಮಾಡಬೇಕೆಂಬುದು ಇಲ್ಲ. ಅವಕಾಶ ಸಿಕ್ಕರೆ ಹೆಮ್ಮೆಯಿಂದ ಕರ್ತವ್ಯ ಮಾಡಬಹುದು. ಆದರೆ, ನಮಗೆ ಸಿಕ್ಕ ವೃತ್ತಿ ಮತ್ತು ಸಮಾಜ ಮುಖಿ ಕಾರ್ಯಗಳನ್ನೇ ದೇಶ ಸೇವೆ ಎಂದು ಭಾವಿಸಿ ಮಾಡುವುದು ಕೂಡ ದೇಶ ರಕ್ಷಣೆಯಾಗಲಿದೆ. ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿರದೆ ಮನದಲ್ಲಿ ಸದಾ ದೇಶಾಭಿಮಾನ ಹೊಂದಬೇಕು ಎಂದು ಹೇಳಿದರು.

ಜಿಎಂಐಟಿ ಕಾಲೇಜಿನ ಆಡಳಿತಾಧಿಕಾರಿ ವೈ.ಯು. ಸುಭಾಷ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ ಹಾಗೂ ಜಿಎಂ ಸಮೂಹ ಶೈಕ್ಷಣಿಕ ಸಂಸ್ಥೆಯ ನಿರ್ದೇಶಕರು, ಡೀನ್, ಮುಖ್ಯಸ್ಥರು, ಅಧ್ಯಾಪಕರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net