ಇಂದು ಮಯಂಕ್ ಕುಮಾರ್ ಸನ್ಯಾಸ ಸ್ವೀಕಾರ  ದಾವಣಗೆರೆಯಲ್ಲಿ ದೀಕ್ಷಾರ್ಥಿ ಮೆರವಣಿಗೆ

IMG-20240331-WA0114.jpg
Published on

ದಾವಣಗೆರೆ: ಇಲ್ಲಿನ ಬಿನ್ನಿ ಕಂಪನಿ ರಸ್ತೆ ನಿವಾಸಿ, 18ರ ಹರೆಯದ ಮಯಂಕ್ ಕುಮಾರ್ ಸಂಘವಿ ಅವರು ಸೋಮವಾರ ಜೈನ ಸನ್ಯಾಸದೀಕ್ಷೆ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಭವ್ಯ ಮೆರವಣಿಗೆ ನಡೆಸಲಾಯಿತು.
ಮಯಂಕ್‌ಕುಮಾರ್ ಹಾಗೂ ತಂದೆ ಸಂಘವಿ ಮಹಾವೀರ ಜೈನ್ ಅವರನ್ನು ತೆರೆದ ಕಾರಿನಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು.
ಆಕರ್ಷಕ ಚಾಮರಗಳ ಪ್ರದರ್ಶನ ಹಾಗೂ ನಾಸಿಕ್, ಉಮಂಗ್ ಡೋಲ್‌ಗಳ ನಾದದ ಹಿಮ್ಮೇಳವಿತ್ತು.  
ಚೌಕಿಪೇಟೆಯ ಸುಪಾರ್ಶ್ವನಾಥ ಜೈನ ದೇವಸ್ಥಾನ ಆವರಣದಲ್ಲಿ ಆರಂಭವಾದ ಮೆರವಣಿಗೆ ಎಂ.ಜಿ.ರಸ್ತೆ,  ಮಂಡಿಪೇಟೆ, ವಸಂತ ಚಿತ್ರಮಂದಿರ ರಸ್ತೆ ಮೂಲಕ ಅಭಿನವ ರೇಣುಕ ಮಂದಿರದಲ್ಲಿ ಅಂತ್ಯಗೊಂಡಿತು.
ಸನ್ಯಾಸದೀಕ್ಷೆ ನೀಡಲಿರುವ ಆಚಾರ್ಯರಾದ ಮಹಾಸೇನ್ ಸೂರೀಶ್ವರಜೀ ಮಹಾರಾಜ್, ಶ್ರೀ ವಿಜಯ ಕುಮದಚಂದ್ರ ಸೂರೀಶ್ವರಜೀ ಮಹಾರಾಜ್, ಶ್ರೀ ವಿಜಯ ತೀರ್ಥಭದ್ರ ಸೂರೀಶ್ವರಜೀ ಮಹಾರಾಜ್ ಅವರು ವಿಶೇಷ ವಾಹನದಲ್ಲಿ ಭಾಗಿಯಾಗಿದ್ದರು.
ದೇವಸ್ಥಾನ ಅಧ್ಯಕ್ಷ ಚಗನ್‌ಲಾಲ್, ಉಪಾಧ್ಯಕ್ಷ ನರೇಂದ್ರಕುಮಾರ್ ಹಾಗೂ ಜೈನ ಸಂತರು, ಶ್ರಾವಕರು, ಜೈನ ಸಮಾಜದವರು, ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಶಾಮನೂರು ಅವರು ಮುಮುಕ್ಷು ಮಯಂಕ್ ಕುಮಾರ್ ಅವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net