

ದಾವಣಗೆರೆ: ಜಿಲ್ಲೆಯಲ್ಲಿ ತಾಯಿ-ಶಿಶು ಮರಣದ ಒಂದೂ ಪ್ರಕರಣ ಆಗದಂತೆ ಎಚ್ಚರವಹಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ತಾಯಿ-ಮಗುವಿನ ಆರೋಗ್ಯ ಕಾಪಾಡಲು ರಾಜ್ಯ ಸರ್ಕಾರ ವಾರ್ಷಿಕ 1500 ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ಯಾವುದೇ ಪ್ರಕರಣ ಸಂಭವಿಸಿದರೂ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗಲಿದೆ ಎಂದು ತಿಳಿಸಿದರು.
ಅನೀಮಿಯಾಮುಕ್ತ ಭಾರತ ಆಗಬೇಕೆಂಬ ಸಂಕಲ್ಪವಿದೆ. ರಕ್ತಹೀನತೆ ನಿರ್ಮೂಲನೆಗೆ ಸರ್ಕಾರ 184 ಕೋಟಿ ರೂ. ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಶೇ.65 ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಇತ್ತೀಚೆಗೆ ಸಿಎಂ ಸಭೆ ಮಾಡಿದಾಗ ಅನೀಮಿಯದಿಂದ 9 ಜಿಲ್ಲೆಗಳಲ್ಲಿ ಮೃತಪಟ್ಟ ಪ್ರಕರಣಗಳು ವರದಿಯಾಗಿದ್ದು, ಕಡೇ ಗಳಿಗೆಯಲ್ಲಿ ಜಿಲ್ಲಾಸ್ಪತ್ರೆಗಳು ಕೈಚೆಲ್ಲುತ್ತಿರುವ ಆಪಾದನೆ ಇದೆ. ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆ ಕೊಡುವ ಜತೆಗೆ ಅದನ್ನು ನಿಗದಿತ ಅವಧಿಯಲ್ಲಿ ನೀಡುವ ಬಗ್ಗೆಯೂ ಪಾಲಕರಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಬೇಕು.
ಮೈಸೂರಿನ ಸಾಲುಂಡಿಯಲ್ಲಿ ಕುಡಿವ ನೀರಿಗೆ ಮೋರಿಯ ನೀರು ಸೇರ್ಪಡೆಯಾಗಿ ಕಲುಷಿತ ನೀರು ಸೇವಿಸಿ ಅನೇಕ ಜನರು ಅಸ್ವಸ್ಥರಾಗಿದ್ದರು. ಹೀಗಾಗಿ ಬೇಸಿಗೆ ಅವಧಿಯಲ್ಲಿ ನೀರಿನ ಮೂಲಗಳ ಸುತ್ತ ಸಿಮೆಂಟ್ ಹಾಕುವ ಜತೆಗೆ ಜಿಪಂಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಶಿಕಣ ಅಧಿಖಾರಿ ಡಾ. ಸುರೇಶ್ ಬಾರ್ಕಿ ಅವರಿಗೆ ಸೂಚನೆ ನೀಡಿದರು.
ನಮ್ಮ ಆಸ್ಪತ್ರೆಗಳ ಆವರಣದಲ್ಲೇ ಲಾರ್ವಾಹಾರಿ ಸೊಳ್ಳೆ ಉತ್ಪತ್ತಿಯಾಗುವಂತೆ ನೀರಿನ ತಾಣಗಳು ಸೃಷ್ಟಿಯಾಗಿವೆ. ಡೆಂೆಗೆ ಅವಕಾಶವಾಗದಂತೆ ಎಚ್ಚರವಹಿಸಿ ಎಂದು ಸೂಕ್ಷ್ಮವಾಗಿ ಹೇಳಿದರು.
ಎಬಿಎಆರ್‌ಕೆ ಅಡಿಯಲ್ಲಿ ಚಿಕಿತ್ಸೆಗಾಗಿ ಚಿಗಟೇರಿ ಆಸ್ಪತ್ರೆಯಿಂದ ರೆಫೆರಲ್ ನೀಡದಿರುವುದೂ ಸೇರಿ ಅನೇಕ ದೂರುಗಳು ಬರುತ್ತಿದ್ದು, ಆಸ್ಪತ್ರೆ ಆಡಳಿತ ಸುಧಾರಣೆ ಆಗಬೇಕು ಎಂದು ತಿಳಿಸಿದರು.
ಇಲಾಖೆಯ ಬೇರುಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಿದಾಗ ಇಲಾಖೆ ಸದೃಢವಾಗಲಿದೆ. ಆರ್‌ಸಿಎಚ್, ಸಾರ್ವತ್ರಿಕ ಲಸಿಕೆ ಹಾಗೂ ಆರ್‌ಬಿಎಸ್‌ಕೆ ಮೊದಲಾದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಬೇಕು ಎಂದೂ ಸೂಚಿಸಿದರು.
ಆರ್‌ಸಿಎಚ್ ಪೋರ್ಟಲ್ ಅಡಿಯಲ್ಲಿ ಏಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ 7222 (ಶೇ.89) ನೋಂದಣಿಯಾಗಿವೆ. ಮೂರು ತಿಂಗಳವಧಿಯಲ್ಲಿ 3225 (ಶೇ.51) ಸಿಜೇರಿಯನ್ ಹೆರಿಗೆ ನಡೆದಿವೆ ಎಂಬುದಾಗಿ ಅಧಿಕಾರಿಗಳು ವಿವರಿಸಿದರು. ತಾಲೂಕು ವೈದ್ಯಾಧಿಕಾರಿಗಳು ಕಾಲಕಾಲಕ್ಕೆ ಪಿಎಚ್‌ಸಿಗಳ ಕಾರ್ಯವೈಖರಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಡಿಎಚ್‌ಒ ಡಾ.ಎಸ್. ಷಣ್ಮುಖಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ.ನಾಗೇಂದ್ರಪ್ಪ, ಆರ್‌ಸಿಎಚ್ ಜಿಲ್ಲಾ ಅಧಿಕಾರಿ ಡಾ.ರೇಣುಕಾರಾಧ್ಯ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಮಂಜುನಾಥ ಪಾಟೀಲ್, ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕೆ.ಎಚ್. ಗಂಗಾಧರ್, ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ರುದ್ರಸ್ವಾಮಿ ಇದ್ದರು.