ಕೋವಿಡ್ ಹಿನ್ನಲೆಯಲ್ಲಿ ಗಂಟಲುದ್ರವ ಮಾದರಿ ಸಂಗ್ರಹಕ್ಕೆ ತಯಾರಿ

1000907790.jpg
Published on

ದಾವಣಗೆರೆ: ಮಳೆಯ ಜತೆಜತೆಯಲ್ಲೇ ರಾಜ್ಯದಲ್ಲಿ ಮತ್ತೆ ಕೋವಿಡ್ ಸದ್ದು ಮಾಡುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಸಕ್ರಿಯ ಪ್ರಕರಣ ದೃಢವಾಗದಿದ್ದರೂ ಜನರು ಜಾಗೃತಿ ವಹಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿದೆ.

2020ರ ಏಪ್ರಿಲ್‌ನಿಂದ 2021ರ ಅಂತ್ಯದವರೆಗೂ ಮೂರು ಹಂತದ ಕರೋನಾ ಸೋಂಕು ದಾಳಿ ನಡೆಸಿ ಜನರಲ್ಲದೆ ಇಲಾಖೆಯ ನಿದ್ದೆಗೆಡಿಸಿತ್ತು. ಈಗ ರಾಜ್ಯಕ್ಕೆ ಪ್ರವೇಶಿಸಿದ ಕೋವಿಡ್ ಒಮೆಕ್ರಾನ್ ಜೆಎನ್-1 ಹೊಸ ತಳಿ ಸೌಮ್ಯ ಸ್ವಭಾವದ ಲಕ್ಷಣ ಹೊಂದಿದೆ. ಹೀಗಾಗಿ ಜನರು ಆತಂಕ ಪಡಬೇಕಿಲ್ಲ. ಆದರೂ ಜನಸಂದಣಿ ಇರುವ ಕಡೆಗಳಲ್ಲಿ ಎಚ್ಚರಿಕೆ ವಹಿಸಬೇಕಿದೆ.

ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಮರು ಚಾಲನೆಗೊಳ್ಳುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತೀವ್ರ ಶ್ವಾಸಕೋಶ ಸಮಸ್ಯೆಯಿಂದಾಗಿ ದಾಖಲಾಗಿರುವ ರೋಗಿಗಳಿಗೆ ಈ ಪರೀಕ್ಷೆ ಕಾರ್ಯ ನಡೆಯಲಿದೆ.

ಜಿಲ್ಲೆಗೆ ಈಗಾಗಲೆ 100 ಪರೀಕ್ಷಾ ಕಿಟ್ ತಲುಪಿವೆ. ಬೇಡಿಕೆಯಂತೆ 500-600 ಕಿಟ್‌ಗಳು ವಾರದಲ್ಲಿ ಪೂರೈಕೆಯಾಗುವ ನಿರೀಕ್ಷೆ ಇದೆ. ಟೆಸ್ಟ್ ನಡೆಸಲು ಸದ್ಯಕ್ಕೆ ಇರುವ ಸಿಬ್ಬಂದಿ ಬಳಸಲಾಗುತ್ತಿದೆ.

ಸಾರಿ ಪ್ರಕರಣಗಳಲ್ಲಿ ಸೋಂಕು ದೃಢಪಡಿಸಿಕೊಳ್ಳಲು ಕಡ್ಡಾಯವಾಗಿ ಆರ್‌ಟಿಪಿಆರ್ ಪರೀಕ್ಷೆ ನಡೆಸಲು ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ರೋಗಲಕ್ಷಣವುಳ್ಳವರ ನಿತ್ಯ ಗಂಟಲು ದ್ರವ ಮಾದರಿ ಸಂಗ್ರಹಿಸಿ,ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಸಿದ್ಧತೆ ನಡೆಸಲಾಗಿದೆ.

ನೆಗಡಿ, ಕೆಮ್ಮು, ಶೀತ, ಜ್ವರ ಮೊದಲಾದ ಲಕ್ಷಣವಿದ್ದವರು ಅಲಕ್ಷೆ ಮಾಡದೆ ವೈದ್ಯರಲ್ಲಿ ತೋರಿಸಬೇಕು. ಕೋವಿಡ್ ಲಕ್ಷಣವಿದ್ದಲ್ಲಿ ಪರೀಕ್ಷೆಗೆ ಒಳಪಡಬೇಕು. ಶಾಲೆ, ಅಂಗನವಾಡಿಗೆ ಬರುವ ಮಕ್ಕಳಿಗೆ ನೆಗಡಿ, ಕೆಮ್ಮು, ಶೀತ, ಜ್ವರ ಇದ್ದಲ್ಲಿ ಪಾಲಕರು ಶಾಲೆಗೆ ಕಳುಹಿಸಬಾರದು. ಶಾಲಾ ಸಿಬ್ಬಂದಿ ಕೂಡ ಅಂಥ ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಬೇಕು ಎಂಬುದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಅವರ ಸಲಹೆ.

ಚಿಗಟೇರಿ ಆಸ್ಪತ್ರೆಯಲ್ಲಿ ವಾರ್ಡ್

ಕೋವಿಡ್ ಸಕ್ರಿಯ ಪ್ರಕರಣಗಳು ಕಂಡುಬಂದಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 20 ಹಾಸಿಗೆ ಸಾಮರ್ಥ್ಯದ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ. ವೈದ್ಯರು ಒಳಗೊಂಡಂತೆ ಮೂವರು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆಶಾ ಕಾರ್ಯಕರ್ತರು, ವೈದ್ಯಕೀಯ ಅಧಿಕಾರಿಗಳಿಗೆ ಕೋವಿಡ್ ಸಂಬಂಧಿತ ಸೂಕ್ತ ನಡವಳಿಕೆ ಪಾಲಿಸಲು ಇಲಾಖೆ ಸೂಚನೆ ನೀಡಿದೆ.

----

ಕೋವಿಡ್ ಮೊದಲ ಮೂರು ಹಂತದಲ್ಲಿ ಕಂಡುಬಂದಿದ್ದ ಸೋಂಕಿನ ತೀವ್ರತೆ ಈಗಿಲ್ಲ. ಬಸ್, ರೈಲ್ವೆ ನಿಲ್ದಾಣ, ಗಡಿ ಭಾಗಗಳಲ್ಲಿ ತಪಾಸಣೆ ಕಾರ್ಯ ಬೇಕಿಲ್ಲ. ಪ್ರಕರಣ ಕಂಡುಬಂದಲ್ಲಿ ತಾಲೂಕು ಆಸ್ಪತ್ರೆಗಳಲ್ಲಿಯೂ ಈ ಹಿಂದೆ ಇದ್ದ ಐಸೋಲೇಷನ್ ವಾರ್ಡ್‌ಗಳನ್ನೇ ವಿಶೇಷ ಚಿಕಿತ್ಸೆಗೆ ಸಿದ್ಧಪಡಿಸಿಕೊಳ್ಳಲಾಗುವುದು. ಐಸಿಯು ಬೆಡ್, ಆಕ್ಸಿಜನ್ ಬೆಡ್‌ಗಳು, ವೆಂಟಿಲೇಟರ್‌ಗಳು ಲಭ್ಯವಿವೆ.

ಡಾ. ಷಣ್ಮುಖಪ್ಪ

ಜಿಲ್ಲಾ ಆರೋಗ್ಯಾಧಿಕಾರಿ.

----

ಮಾಸ್ಕ್ ಕಡ್ಡಾಯವಿಲ್ಲ. ಆದರೆ ಜನಸಂದಣಿ ಇರುವೆಡೆ ವೃದ್ಧ್ದರು, ಬಾಣಂತಿಯರು, ಗರ್ಭಿಣಿಯರು, ಸಕ್ಕರೆ ಕಾಯಿಲೆ, ಶ್ವಾಸಕೋಶ ಸಮಸ್ಯೆ ಉಳ್ಳವರು ಮಾಸ್ಕ್ ಧರಿಸುವುದು ಉತ್ತಮ. ಒಂದು ವರ್ಷದೊಳಗಿನ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಡಾ.ಜಿ.ಡಿ.ರಾಘವನ್

ಜಿಲ್ಲಾ ಸರ್ವೇಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net