ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಸಿದ್ಧತೆ

dvg-dc-pressmeet-oct-4.jpg
Published on

ದಾವಣಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧತಾ ಕಾರ್ಯ ಶುರುವಾಗಿದ್ದು, 2025 ರ ನ. 1ಕ್ಕೆ ಮೂರು ವರ್ಷಗಳ ಹಿಂದೆ ಅಂಗೀಕೃತ ವಿವಿಯಿಂದ ಪಡೆದ ಪದವಿ ಅಂಕಪಟ್ಟಿ ಅಥವಾ ಉತ್ತೀರ್ಣ ಪ್ರಮಾಣಪತ್ರವನ್ನು ನಿಗದಿತ ನಮೂನೆಯೊಂದಿಗೆ ನೊಂದಣಿ ಅಧಿಕಾರಿಗಳಿಗೆ ಸಲ್ಲಿಸಿ ಹೆಸರು ಸೇರಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಈ ಕ್ಷೇತ್ರದ ವ್ಯಾಪ್ತಿಯಲ್ಲಿನ ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಕನಿಷ್ಠ 6 ತಿಂಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಕಾಯಂ ನಿವಾಸಿಯಾಗಿದ್ದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮೂನೆ-18 ಭರ್ತಿ ಮಾಡಿ ನಿವಾಸಿ ಸ್ಥಾನದ 11 ದಾಖಲೆಗಳಲ್ಲಿ ಒಂದನ್ನು ಹಾಗೂ ಪದವಿ ಉತ್ತೀರ್ಣ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ತಹಸೀಲ್ದಾರ್ ಕಚೇರಿ, ಪಾಲಿಕೆ ವ್ಯಾಪ್ತಿಯಲ್ಲಿರುವವರು ಪಾಲಿಕೆ ಚುನಾವಣಾ ಶಾಖೆಗೆ ಮತ್ತು ದಾವಣಗೆರೆ ತಾಲೂಕು ಗ್ರಾಮೀಣ ಪ್ರದೇದವರು ತಾಲೂಕು ಕಚೇರಿಗೆ ನ.6ರೊಳಗೆ ಸಲ್ಲಿಸಬೇಕು.

ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಸೆ.30ಕ್ಕೆ ಅಧಿಸೂಚನೆ ಹೊರಡಿಸಿದೆ. ನ.25 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಡಿ. 10 ರೊಳಗಾಗಿ ಸಲ್ಲಿಸಬೇಕು. ಡಿ. 30 ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.

ಮತದಾರರ ಪಟ್ಟಿ ಸಿದ್ಧತೆಗಾಗಿ ಸಹಾಯಕ ನೊಂದಣಾಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾಧಿಕಾರಿ ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿದ್ದು, ದಾವಣಗೆರೆ, ಹರಿಹರ, ಜಗಳೂರು ತಾಲೂಕುಗಳಿಗೆ ಸಂಬಂಧಿಸಿದಂತೆ ಸಂಪರ್ಕಿಸಬಹುದು. ದಾವಣಗೆರೆ ಗ್ರಾಮಾಂತರಕ್ಕೆ ಉಪವಿಭಾಗಾಧಿಕಾರಿ ಸಂತೋಷ ಕುಮಾರ್, ದಾವಣಗೆರೆ ನಗರ ಉತ್ತರ ಮತ್ತು ಕಸಬಾ ಹೋಬಳಿ ವ್ಯಾಪ್ತಿಗೆ ಜಿಪಂ ಉಪಕಾರ್ಯದರ್ಶಿ ಮಮತಾ ಹೊಸಗೌರ್, ಮಹಾನಗರ ಪಾಲಿಕೆ ವ್ಯಾಪ್ತಿಗೆ ಆಯುಕ್ತೆ ರೇಣುಕಾ, ಹರಿಹರ ತಾಲೂಕಿಗೆ ದೂಡಾ ಆಯುಕ್ತ ಹುಲಿಮನಿ ತಿಮ್ಮಣ್ಣ, ಜಗಳೂರು ತಾಲೂಕಿಗೆ ಸಹಕಾರ ಸಂಘಗಳ ಉಪನಿಬಂಧಕ ಟಿ.ಮಧು ಶ್ರೀನಿವಾಸ್ ಸಹಾಯಕ ನೊಂದಣಾಧಿಕಾರಿಯಾಗಿದ್ದು ಮಾಹಿತಿಗೆ ಇವರನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net